ವೀರಾಜಪೇಟೆ, ಜ. 19: ಕೊಡಗು ಕೇರಳ ಗಡಿಪ್ರದೇಶದ ಪೆರುಂಬಾಡಿ ಗ್ರಾಮದ ಬಾಳುಗೋಡುವಿನ ಸರ್ವೆ ನಂ 337/1ರಲ್ಲಿ ಪ್ಲಾಸ್ಟಿಕ್ ಹೊದಿಕೆಯ ಶೆಡ್‍ಗಳನ್ನು ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದ ವಸತಿ ರಹಿತರು, ಬಡವರು, ಕಾರ್ಮಿಕರು ಇಂದಿನಿಂದ ಶಾಶ್ವತ ಶೆಡ್ ನಿರ್ಮಿಸಿ ಸರಕಾರ ಹಕ್ಕು ಪತ್ರ ನೀಡುವ ತನಕ ಮುಂದುವರೆಸಲು ನಿರ್ಧರಿಸಿರುವುದಾಗಿ ರಾಜ್ಯ ಆದಿವಾಸಿಗಳ ಸಂಘದ ಸದಸ್ಯ ಹಾಗೂ ಕೊಡಗು ಜಿಲ್ಲಾ ಪ್ರಧಾನ ಸಂಚಾಲಕ ವೈ.ಕೆ. ಗಣೇಶ್ ತಿಳಿಸಿದ್ದಾರೆ.

ವಸತಿರಹಿತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಗಣೇಶ್, ಪೈಸಾರಿ ಜಾಗದಲ್ಲಿ ಶೆಡ್ ಕಟ್ಟಿಕೊಳ್ಳುತ್ತಿರುವ ವಸತಿ ರಹಿತ ಫಲಾನುಭವಿಗಳಿಗೆ ಕಂದಾಯ ಇಲಾಖೆ ಈ ತನಕ ನಿವೇಶನ ನೀಡದೆ ವಂಚಿಸಿದೆ. ಈಗ ಸುಳ್ಳು ಭರವಸೆಗಳನ್ನು ನೀಡಿ ಜಾಗ ತೆರವುಗೊಳಿಸಲು ಬೆದರಿಕೆ ಹಾಕುತ್ತಿ ದ್ದಾರೆ ಎಂದು ಆರೋಪಿಸಿದರು.

ಬಾಳುಗೋಡಿನಲ್ಲಿ ವಸತಿ ರಹಿತರ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಸಂಚಾಲಕ ಎ.ಮಹದೇವ್ ಮಾತನಾಡಿ ಈಗ ಶೆಡ್ ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿರುವ ವಸತಿ ರಹಿತ ಫಲಾನುಭವಿಗಳು ಸರಕಾರಕ್ಕೆ ಸೇರಿದ ಅಧಿಕೃತ ಜಾಗದಲ್ಲಿ ಶೆಡ್‍ನ್ನು ಹಾಕಿಕೊಂಡಿರುವುದರಿಂದ ಸರಕಾರ ಇದನ್ನು ಪರಿಶೀಲಿಸಿ ಹಕ್ಕುಪತ್ರ ನೀಡಬೇಕು. ವಸತಿ ರಹಿತರ ಹೋರಾಟ ನ್ಯಾಯ ಸಮ್ಮತದಿಂದ ಕೂಡಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಯಂತೆ ವಸತಿ ರಹಿತ ಫಲಾನುಭವಿಗಳಿಗೆ ಜಾಗವನ್ನು ಅಳತೆ ಮಾಡಿ ಕೇವಲ 5 ಸೆಂಟುಗಳಷ್ಟು ಪ್ರತಿ ಕುಟುಂಬಕ್ಕೆ ಮಂಜೂರು ಮಾಡಿ ಕೊಡಬೇಕು ಎಂದರು.

ಕಂದಾಯ ಅಧಿಕಾರಿಗಳು ವಿವಿಧ ಸಂಘಟನೆಗಳ ನಾಯಕರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಸಂಘಟನೆಯ ಮುಖಂಡರು ಈ ಕುರಿತು ತಾಲೂಕು ಕಚೇರಿಯಲ್ಲಿರುವ ಪೈಸಾರಿ ಜಾಗದ ದಾಖಲೆಗಳನ್ನು ಪರಿಶೀಲಿಸಿದಾಗ ಸರ್ವೇ ನಂ 337/1ರಲ್ಲಿ ಸುಮಾರು 38.5 ಎಕರೆ ಪೈಸಾರಿ ಇದೆ. ಇದರಲ್ಲಿ ಜಾಗದ ಒತ್ತಿನಲ್ಲಿರುವವರು ಒತ್ತುವರಿ ಮಾಡಿರುವುದು ಕಂಡು ಬಂದಿದೆ ಎಂದು ರಾಜ್ಯದ ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಕೆ. ಮೊಣ್ಣಪ್ಪ ತಿಳಿಸಿದರು.

ಸುಮಾರು 55 ಕುಟುಂಬಗಳು ನಡೆಸುತ್ತಿದ್ದ ಮುಷ್ಕರಕ್ಕೆ ನಿನ್ನೆಯಿಂದ ಇನ್ನು ಐದು ಕುಟುಂಬಗಳು ಸೇರಿಕೊಂಡು ಒಟ್ಟು 60 ವಸತಿ ರಹಿತ ಕುಟುಂಬಗಳು ಮುಷ್ಕರದಲ್ಲಿ ನಿರತವಾಗಿವೆ.

ಪ್ರತಿಭಟನಾ ಸ್ಥಳಕ್ಕೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ವಸತಿರಹಿತರ ಬೇಡಿಕೆಗಳಿಗೆ ಬೆಂಬಲ ಸೂಚಿಸಿದರು. ಮುಷ್ಕರ ನಿರತ ವಸತಿ ರಹಿತ ಫಲಾನುಭವಿಗಳನ್ನು ಆಯ್ಕೆಮಾಡಿ ನಿವೇಶನದ ಹಕ್ಕುಪತ್ರ ನೀಡುವಂತೆ ಕಂದಾಯ ಅಧಿಕಾರಿಗಳನ್ನು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ನಾಯಕರು ಗಳಾದ ಡಾ. ದುರ್ಗಾಪ್ರಸಾದ್, ಕೆ. ಪಳನಿ ಪ್ರಕಾಶ್, ರಾಮ್‍ದಾಸ್, ಪಿ.ಎ. ಕುಸುಮಾವತಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.