ಮಡಿಕೇರಿ, ಜ. 18: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರವಾಸಿ ತಾಣವಾದ ರಾಜಾಸೀಟು ಉದ್ಯಾನವನದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ವಾರ್ಷಿಕವಾಗಿ ಆಯೋಜಿಸಲ್ಪಡುವ ಫಲಪುಷ್ಪ ಪ್ರದರ್ಶನ ಕಳೆದ ಒಂದೆರಡು ವರ್ಷಗಳಿಂದ ಕಾರಣಾಂತರಗಳಿಂದ ಒಂದೋ ವಿಳಂಬ ಅಥವಾ ಎಂದಿನ ಸಮಯದಲ್ಲಿ ನಡೆಯದೆ ಪುಷ್ಪಾಸಕ್ತರಿಗೆ ನಿರಾಸೆಯ ಭಾವ ಎದುರಾಗುತ್ತಿತ್ತು.ಆದರೆ ಈ ವರ್ಷ ಫಲಪುಷ್ಪ ಪ್ರದರ್ಶನವನ್ನು ಬೇಸಿಗೆ ಆರಂಭದ ಈ ಸನ್ನಿವೇಶದಲ್ಲೇ ಆಯೋಜಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ದಿನಾಂಕವೂ ನಿಗಿದಿಗೊಂಡಿದ್ದು, ಸಿದ್ಧತೆಗಳು ನಡೆಯುತ್ತಿವೆ. ಪ್ರಸಕ್ತ ವರ್ಷದ ಫೆಬ್ರವರಿ 7 ರಿಂದ 10ರ ವರೆಗೆ ನಾಲ್ಕುದಿನಗಳ ಕಾಲ ಉದ್ಯಾನವನ ಪುಷ್ಪರಾಣಿಯರಿಂದ, ಮತ್ತಿತರ ಹಲವು ಆಕರ್ಷಣೆಗಳಿಂದ ಕಂಗೊಳಿಸಲಿದೆ.ರಾಜಾಸೀಟು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸಲಹೆ-ಸೂಚನೆಯಂತೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್, ಸಹಾಯಕ ನಿರ್ದೇಶಕರಾದ ಸಿ.ಎಂ. ಪ್ರಮೋದ್ ಅವರುಗಳ ನೇತೃತ್ವದಲ್ಲಿ ಸಮಿತಿ ಮೂಲಕ ಅಗತ್ಯ ಸಿದ್ಧತೆಗಳು ಉದ್ಯಾನವನದಲ್ಲಿ ನಡೆಯುತ್ತಿವೆ.