ಮಡಿಕೇರಿ, ಜ. 19: ರಾಷ್ಟ್ರದ ರಕ್ಷಣಾ ಪಡೆಯ ಪ್ರಥಮ ಮಹಾ ದಂಡನಾಯಕ ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷವೂ ಖಚಿತ ತೀರ್ಮಾನವಾಗಿಲ್ಲ. ಕಳೆದ ವರ್ಷದ ಆಚರಣೆಗೆ ಸಂಬಂಧಿಸಿದಂತೆ ಸರಕಾರದಿಂದ ಪ್ರಕಟಗೊಂಡಿದ್ದ ರೂ. 10 ಲಕ್ಷ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಅಲ್ಲದೆ ಈ ಬಾರಿ ಕೂಡ ಜನ್ಮದಿನಾಚರಣೆ ಸರಕಾರಿ ಕಾರ್ಯ ಕ್ರಮವಾಗಿ ಮುಂದುವರಿಯಲಿದೆಯೇ ಎಂಬ ಬಗ್ಗೆ ಸರಕಾರದಿಂದಾಗಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉನ್ನತಮಟ್ಟದಿಂದಾಗಲಿ ಆದೇಶ ಅಥವಾ ಸ್ಪಷ್ಟ ನಿಲುವು ಹೊರಬಿದ್ದಿಲ್ಲ. ಈ ಕಾರ್ಯಕ್ರಮಕ್ಕೆ ಕೇವಲ ಒಂದು ವಾರದ ಅವಧಿ ಮಾತ್ರ ಬಾಕಿ ಉಳಿದಿದ್ದು; ಈ ಅನಿಶ್ಚಿತತೆ ಮುಂದುವರಿದಿದೆ.ಈ ನಡುವೆ ತಾ. 20 ರಂದು (ಇಂದು) ಕನ್ನಡ ಮತ್ತು ಸಂಸ್ಕøತಿಯ ಮೂಲಕ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಈ ಬಗ್ಗೆ ಸಭೆಯೊಂದು ನಿಗದಿಯಾಗಿದೆ. ಸಭೆಯ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ‘ಶಕ್ತಿ’ಗೆ ತಿಳಿಸಿದ್ದು; ಸಭೆಯಲ್ಲಿ ಈ ಕುರಿತಾಗಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವದು ಎಂದು ತಿಳಿಸಿದ್ದಾರೆ.ಆಕಾಡೆಮಿಯಿಂದ ಈ ನಡುವೆ ನಿನ್ನೆ ಕೊಡವ ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆ ಜರುಗಿದ್ದು; ಈ ಸಭೆಯಲ್ಲಿ ಜನ್ಮದಿನವನ್ನು ಸರಳವಾಗಿ ಆಚರಿಸುವ ಕುರಿತಾಗಿ ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ನೊಂದಿಗೆ

(ಮೊದಲ ಪುಟದಿಂದ) ಕೈಜೋಡಿಸಿ ಸರಳ ರೀತಿಯ ಕಾರ್ಯಕ್ರಮಕ್ಕೆ ಸಿದ್ಧವಿರುವದಾಗಿ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲೂ ತೀರ್ಮಾನಿಸಲಾಗಿದೆ ಎಂದು ತಿಳಿಸಿರುವ ಅವರು ತಾ. 24 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಾರ್ಯಪ್ಪ ಅವರ ಕುರಿತಾಗಿ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಸ್ಪರ್ಧೆಯನ್ನು ಏರ್ಪಡಿಸಿ ತಾ. 28ರ ಕಾರ್ಯಕ್ರಮದ ಸಂದರ್ಭ ಬಹುಮಾನ ನೀಡಲು ನಿರ್ಧರಿಸಿರುವದಾಗಿಯೂ ಮಾಹಿತಿ ನೀಡಿದ್ದಾರೆ.

ಫೋರಂ ನಿಲುವು

ಜನ್ಮದಿನದ ಕುರಿತಾಗಿ ಸ್ಪಷ್ಟತೆ ಇಲ್ಲದ ಕಾರಣ ಫೋರಂ ವತಿಯಿಂದ ಪ್ರತ್ಯೇಕ ನಿರ್ಧಾರವನ್ನೂ ಸದ್ಯದ ಮಟ್ಟಿಗೆ ಕೈಗೊಳ್ಳಲಾಗಿದೆ. ಕಳೆದ ಬಾರಿಯ ಅನುದಾನ ಬಾರದ ಕಾರಣ ಫೋರಂನಿಂದ ಮಡಿಕೇರಿಯಲ್ಲಿರುವ ಕಾರ್ಯಪ್ಪ ಪ್ರತಿಮೆ ಎದುರು ಸರಳ ರೀತಿಯ ಕಾರ್ಯಕ್ರಮದೊಂದಿಗೆ ಸ್ಮರಣೆ ನಡೆಸಲಾಗುವದು. ಕೊಡಗು ವಿದ್ಯಾಲಯ ಮಕ್ಕಳಿಂದ ವಂದೇ ಮಾತರಂ, ಜನರಲ್ ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ, ಫೀ.ಮಾ. ಕಾರ್ಯಪ್ಪ ಕಾಲೇಜು ಎನ್‍ಸಿಸಿ ಘಟಕದಿಂದ ರಾಷ್ಟ್ರಗೀತೆ ಯೊಂದಿಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ನಡೆಸಲು ಚಿಂತನೆ ನಡೆದಿರುವದಾಗಿ ಫೋರಂ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಹಾಗೂ ಸಂಚಾಲಕ ಮೇಜರ್ ಬಿದ್ದಂಡ ನಂದಾ ಮಾಹಿತಿ ನೀಡಿದ್ದಾರೆ.

ಗೋಣಿಕೊಪ್ಪದಲ್ಲಿ

ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಆವರಣದಲ್ಲಿರುವ ಕಾರ್ಯಪ್ಪ ಹಾಗೂ ತಿಮ್ಮಯ್ಯ ಪ್ರತಿಮೆ ಎದುರು; ಫೋರಂ, ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಕಾವೇರಿ ಕಾಲೇಜು ವತಿಯಿಂದ ಸಂಸ್ಮರಣೆ ನಡೆಯಲಿದೆ ಎಂದು ಅವರುಗಳು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾ. 20ರ (ಇಂದಿನ) ಸಭೆಯಲ್ಲಿ ಈ ಕುರಿತು ಯಾವ ಸ್ಪಷ್ಟ ತೀರ್ಮಾನವಾಗಲಿದೆ ಎಂದು ಕಾದುನೋಡಬೇಕಿದೆ.