ಮಡಿಕೇರಿ, ಜ. 19: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಕಂದಾಯ ಅಧಿಕಾರಿಗಳ ಸಭೆಯು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಅಂಗನವಾಡಿ ಕಟ್ಟಡಗಳ ನಿರ್ಮಾಣ ಸಂಬಂಧ ಇನ್ನೂ ಹಲವು ಅಂಗನವಾಡಿಗಳಿಗೆ ಜಾಗ ನೀಡ ಬೇಕಿದ್ದು, ಕೂಡಲೇ ಜಾಗ ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಕಂದಾಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು.

ಹಾಗೆಯೇ ಪಶುಪಾಲನಾ ಇಲಾಖೆಯ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ನಿವೇಶನ ನೀಡಲಾಗಿದ್ದು, ಆರ್‍ಟಿಸಿ ಒದಗಿಸಿರುವುದಿಲ್ಲ. ಆದ್ದರಿಂದ ಆರ್‍ಟಿಸಿಯನ್ನು ತಕ್ಷಣವೇ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ 871 ಅಂಗನವಾಡಿಗಳಿದ್ದು, ಈಗಾಗಲೇ 720 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದೆ. ಉಳಿದಂತೆ ಶಾಲೆಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಸದ್ಯ 28 ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಸ್ವಂತ ಜಾಗ ಗುರುತಿಸುವ ನಿಟ್ಟಿನಲ್ಲಿ ಪ್ರಗತಿಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅರುಂಧತಿ ಮಾಹಿತಿ ನೀಡಿದರು.

ಆದಿವಾಸಿ ಭವನ ಸೇರಿದಂತೆ ಗಿರಿಜನರ ಶ್ರೇಯೋಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡುವಂತೆ ಕಂದಾಯ ನಿರೀಕ್ಷಕರಿಗೆ ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ವಿವಿಧ ಇಲಾಖೆ ವ್ಯಾಪ್ತಿಗಳಿಗೆ ಸಂಬಂಧಿಸಿದಂತೆ ನಿವೇಶನ ಒದಗಿಸುವಲ್ಲಿ ತ್ವರಿತ ಕ್ರಮಕ್ಕೆ ಸೂಚಿಸಿದರು. ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್, ತಹಶೀಲ್ದಾರ್ ಮಹೇಶ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಹಲವು ಮಾಹಿತಿ ನೀಡಿದರು. ಶಿರಸ್ತೆದಾರ್ ಪ್ರಕಾಶ್, ಕಂದಾಯ ನಿರೀಕ್ಷಕರು ಇತರರು ಇದ್ದರು.