ವೀರಾಜಪೇಟೆ, ಜ. 18: ನಿಯಮಗಳನ್ನು ಪರಿಪಾಲನೆ ಮಾಡಿಕೊಂಡು ಚಾಲನೆ ಮಾಡಿದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತದೆ ಎಂದು ವೀರಾಜಪೇಟೆ ಉಪವಿಭಾಗದ ಡಿ.ವೈಎಸ್ಪಿ ಜಯಕುಮಾರ್ ಅಭಿಮತ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಪೊಲೀಸ್ ವೀರಾಜಪೇಟೆ ಮತ್ತು ಕ್ಲಬ್ ಮಹೀಂದ್ರ ಆಶ್ರಯದಲ್ಲಿ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಯಕುಮಾರ್, ಇಂದು ಸಾರ್ವಜನಿಕರ ಉಪಯೋಗಕ್ಕಾಗಿ ಸಂಚಾರಿ ಪೊಲೀಸ್ ಹಲವಾರು ಸುರಕ್ಷತೆ ಕಾನೂನು ಜಾರಿಗೆ ತಂದಿದ್ದು, ನಿಯಮಗಳನ್ನು ಪರಿಪಾಲನೆ ಮಾಡಿದಲ್ಲಿ ಸಾವಿನ ಪ್ರಮಾಣಗಳು ಕಡಿಮೆಯಾಗುತ್ತದೆ ಎಂದು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಟಿ. ಬೋಪಯ್ಯ, ಮತ್ತು ಸಹ ಉಪನ್ಯಾಸಕ ಮಾದೇಯಂಡ ವನಿತ್ ಕುಮಾರ್ ಮಾತನಾಡಿದರು. ಪೊಲೀಸ್ ಇಲಾಖೆ ಸಮ್ಮುಚ್ಚಯ ಆವರಣದಲ್ಲಿ ಕ್ಲಬ್ ಮಹೇಂದ್ರ ವ್ಯವಸ್ಥಾಪಕ ಶಲ್ಯ ಉದ್ಘಾಟಿಸಿದರು. ಜಾಥಾವು ಮೀನುಪೇಟೆಯಿಂದ ಆರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಕೊನೆಗೊಂಡಿತು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಗ್ರಾಮಾಂತರ ಠಾಣಾಧಿಕಾರಿ ವೀಣಾ ನಾಯಕ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾವೇರಿ ಕಾಲೇಜು, ಸಂತ ಅನ್ನಮ್ಮ ಪದವಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ, ಸಂಶುಲ್ ಉಲಾಮ ಪದವಿಪೂರ್ವ ಕಾಲೇಜು ಪೆರುಂಬಾಡಿ ವಿದ್ಯಾರ್ಥಿಗಳು, ಕ್ಲಬ್ ಮಹೇಂದ್ರ ಸಂಸ್ಥೆಯ ಸಿಬ್ಬಂದಿ, ಪೊಲೀಸರು ಭಾಗವಹಿಸಿದ್ದರು.

ವೇದಿಕೆಯಲ್ಲಿ ಕ್ಲಬ್ ಮಹೇಂದ್ರ ಸಮನ್ವಯಾಧಿಕಾರಿ ಕಾರ್ತಿಕೇಯನ್, ವೃತ್ತ ನಿರೀಕ್ಷಕ ಕ್ಯಾತೆಗೌಡ ಉಪಸ್ಥಿತರಿದ್ದರು. ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪಿ.ಪಿ. ಕಾವೇರಮ್ಮ ಸ್ವಾಗತಿಸಿದರು.