ಸೋಮವಾರಪೇಟೆ: ಇಲ್ಲಿನ ಜೆ.ಸಿ.ಐ. ಪುಷ್ಪಗಿರಿ ಸಂಸ್ಥೆಯ ವತಿಯಿಂದ ಪಟ್ಟಣದ ಎಸ್.ಜೆ.ಎಂ. ಪ್ರೌಢಶಾಲೆಯಲ್ಲಿ ವಿವೇಕಾನಂದರ ಜನ್ಮ ದಿನೋತ್ಸವದ ಅಂಗವಾಗಿ ರಾಷ್ಟ್ರಿಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವೇಕಾನಂದರ ಕುರಿತು ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆಯ ಅಧ್ಯಕ್ಷ ಉಷಾರಾಣಿ ಗುರುಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ರುದ್ರೇಶ್, ಜೆ.ಸಿ. ಪೂರ್ವವಲಯಾಧಿಕಾರಿ ಗಿರೀಶ್, ಕಾರ್ಯದರ್ಶಿ ಮಂಜುಳ ಸುಬ್ರಮಣಿ, ಮಹಿಳಾ ಜೇಸಿ ಘಟಕದ ಅಧ್ಯಕ್ಷೆ ವಿದ್ಯಾ ಸೋಮೇಶ್, ಮಾಜಿ ಅಧ್ಯಕ್ಷ ಬಿ.ಇ. ಅರುಣ್ಕುಮಾರ್ ಉಪಸ್ಥಿತರಿದ್ದರು.
ಚೆಟ್ಟಳ್ಳಿ: ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಲ್ಲಿಹುದಿಕೇರಿಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ನಿವೃತ್ತ ಕಂದಾಯ ನಿರೀಕ್ಷಕ ಟಿ.ಸಿ ಚಂದ್ರನ್, ‘ಬಲವೇ ಜೀವನ, ದೌರ್ಬಲ್ಯವೇ ಮರಣ’ ಎಂಬ ಸ್ವಾಮಿ ವಿವೇಕಾನಂದರ ಉಕ್ತಿಯನ್ನು ಅರಿತು ಬಾಳಿ, ಅಲ್ಲದೇ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆ ಮಾಡಬಹುದು ಎಂದರು. ವಿದ್ಯಾರ್ಥಿಗಳು ಯೋಗ, ವ್ಯಾಯಾಮ, ಧ್ಯಾನದ ಮೂಲಕ ದೈಹಿಕ ದೃಢತೆ ಹಾಗೂ ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ವಿವೇಕಾನಂದರಂತೆ, ಬಡವರು, ದೀನ- ದಲಿತರು ಮತ್ತು ಮಹಿಳೆಯರನ್ನು ಗೌರವದಿಂದ ಕಾಣಬೇಕು. ಬಾಳಿಗೊಂದು ಗುರಿ, ಅದನ್ನು ಸಾಧಿಸುವ ಶ್ರದ್ಧೆ ಮತ್ತು ಛಲ ಇದ್ದಾಗ ವಿಭಿನ್ನವಾಗಿ ಯೋಚಿಸಿ ಕಾರ್ಯಗತಗೊಳಿಸಿದಾಗ ಅದ್ಭುತ ಸಾಧನೆ ಮಾಡಬಹುದು ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜು ವಿಭಾಗದ ನೂತನ ಪ್ರಾಂಶುಪಾಲ ಅಂತೋಣಿ ಆಲ್ವರಿಸ್ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಸಮಾಜಮುಖಿ ತತ್ವಾದರ್ಶಗಳನ್ನು ಪಾಲಿಸಬೇಕೆಂದರು. ವಿದ್ಯಾರ್ಥಿಗಳಾದ ಪೂಜಾ, ರೀನಾ, ಅನೂಷಾ ಹಾಗೂ ರಶ್ಮಿಕಾ ವಿವೇಕಾನಂದರ ವಿಚಾರಧಾರೆಗಳ ಕುರಿತು ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಪ್ರಭಾರ ಪ್ರಾಂಶುಪಾಲ ಪಿ.ವಿ. ಲೋಕೇಶ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ, ಪ್ರಾಂಶುಪಾಲ ಅನಿಲ್ಕುಮಾರ್, ಉಪನ್ಯಾಸಕರಾದ ಭಾಗ್ಯಜ್ಯೋತಿ, ತುಳಸಿ, ವಿಶ್ವನಾಥ್, ಇಸ್ಮಾಯಿಲ್, ಧನಂಜಯ್ ಇದ್ದರು.
ಸ್ವಾಮಿ ವಿವೇಕಾನಂದರ ಆದರ್ಶ ವಿಚಾರಧಾರೆಗಳನ್ನೊಳಗೊಂಡ ವಿವಿಧ ಬಗೆಯ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿನಿ ವಿನಯ ಅವರು ಪ್ರಾರ್ಥಿಸಿದರು. ತನ್ಸೀರಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಜಸ್ಟಿಮ್ ಕೊರಿಯಾ ಸ್ವಾಗತಿಸಿದರು.
ಕೂಡಿಗೆ: ಮಾನವೀಯ ಮೌಲ್ಯಗಳು ನೈಜ್ಯ ಅಂಶಗಳನ್ನು ತಿಳಿಸಿಕೊಡುತ್ತವೆ. ಶಿಸ್ತು ಮತ್ತು ಆದರ್ಶ ಪಾಲನೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಅನಾವಶ್ಯಕವಾಗಿ ಸಮಯವನ್ನು ವ್ಯರ್ಥ ಮಾಡದೆ ಜ್ಞಾನ ವಿಕಾಸದ ಕಡೆಗೆ ಗಮನಹರಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಬೆಳವಣಿಗೆಗೆ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ. ಗುರುಗಳು ಕಲಿಸಿದ ವಿದ್ಯೆಯನ್ನು ವಿದ್ಯಾರ್ಥಿಗಳು ಮನದಲ್ಲಿಟ್ಟುಕೊಂಡು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.
ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಪಾತ್ರ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುಂದುವರೆದು ಸತ್ಪ್ರಜೆಗಳಾಗಬೇಕು. ಎಂದರು. ಕೂಡಿಗೆ ಡಯಟ್ ಹಿರಿಯ ಉಪನ್ಯಾಸಕ ಕೆ.ವಿ. ಸುರೇಶ್ ಮಾತನಾಡಿ, ಆಲೋಚನಾಶಕ್ತಿ ಜಾಗೃತಿಗೊಳ್ಳಲು ಶಿಕ್ಷಣ ಅತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ದೃಢ ಮನಸ್ಸಿನೊಂದಿಗೆ ಶಿಕ್ಷಣ ಕಲಿಯಬೇಕು. ಜೀವನದಲ್ಲಿ ಗುರಿ ಮತ್ತು ಗುರು ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಚಲನಚಿತ್ರ ನಟ ಮಾಸ್ಟರ್ ಆನಂದ್ ಮಾತನಾಡಿ, ಗುರು ಹಿರಿಯರಿಗೆ ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡಲ್ಲಿ ತಮ್ಮನ್ನು ಸಾಧನೆ ಹಾದಿಯಲ್ಲಿ ಸಾಗಲು ಮೆಟ್ಟಿಲಿನಂತೆ ಸಹಕಾರಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಆರ್ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯೆ ಫಿಲೋಮಿನಾ, ಕುಶಾಲನಗರ ಗ್ರಾಮಾಂತರ ಸಹಾಯಕ ಠಾಣಾಧಿಕಾರಿ ಸ್ವಾಮಿ, ಪತ್ರಕರ್ತ ಟಿ.ಆರ್. ಪ್ರಶಾಂತ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್, ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮತ್ತಿತರರು ಇದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.
ವೀರಾಜಪೇಟೆ: ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ಲೇಸ್ ಮೆಂಟ್ ಸೆಲ್ ವತಿಯಿಂದ ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಅಧಿಕಾರಿ ನಿಖಿಲ್ ಗಂಗಾಧರ್, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಎಂದರೇನು, ಅದರ ಪಾತ್ರ, ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಾಗಾರದಲ್ಲಿ ಅಂತಿಮ ಪದವಿ ತರಗತಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಪಾಲ್ಗೊಂಡಿದ್ದರು.ಶನಿವಾರಸಂತೆ: ಶ್ರದ್ಧೆ, ಶಿಸ್ತು, ಕಲಿಯಲೇ ಬೇಕೆಂಬ ಮನಸ್ಸು ಇದ್ದರೆ ವಿದ್ಯಾರ್ಥಿಗೆ ಯಾವ ಕೆಲಸವೂ ಅಸಾಧ್ಯವಲ್ಲ ಎಂದು ಜಿಲ್ಲೆಯ ಯುವ ಪರಿವರ್ತಕ ಸಂಪನ್ಮೂಲ ವ್ಯಕ್ತಿ ಪುಟ್ಟರಾಜು ಅಭಿಪ್ರಾಯಪಟ್ಟರು.
ಅಂಕನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ ಯುವ ಸ್ಪಂದನ ಮತ್ತು ಜೀವನ ಕೌಶಲ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಆಯೋಜಕ ಹೆಚ್.ಎಂ. ವಿವೇಕ್ ಉಪಸ್ಥಿತರಿದ್ದರು.
ಮಡಿಕೇರಿ: ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಸಾಧನೆ ತೋರಿದ್ದಾರೆ. ನಂಜಪ್ಪ ಪಿ.ಯಂ. (ಶೂಟಿಂಗ್ ಇಂಡಿಯನ್ ಟೀಮ್ ಟ್ರಯಲ್ಸ್ಗೆ ಆಯ್ಕೆ). ವಿಜಯ್ ಉತ್ತಯ್ಯ ಕೆ.ಡಿ. (ಫೆನ್ಸಿಂಗ್ ರಾಷ್ಟ್ರಮಟ್ಟಕ್ಕೆ ಆಯ್ಕೆ, ರಾಜ್ಯಮಟ್ಟ ಹಾಕಿ ದ್ವಿತೀಯ ಸ್ಥಾನ). ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪುಣ್ಯ ಬಿ.ಎನ್ (ವೇಗದ ನಡಿಗೆ), ಶ್ರದ್ದ ಯನ್.ಎಸ್. (ಟೇಬಲ್ ಟೆನ್ನಿಸ್) ಚೈತನ್ಯ ಎಂ.ಕೆ. (ಹ್ಯಾಂಡ್ ಬಾಲ್), ಕಾವೇರಮ್ಮ ಕೆ.ಎಂ. (ಹಾಕಿ ದ್ವಿತೀಯ ಸ್ಥಾನ), ನಿಶ್ಚಲ ಬೋಪಯ್ಯ ಪಿ. (ಹಾಕಿ ದ್ವಿತೀಯ ಸ್ಥಾನ), ಪೂರ್ವಕುಮಾರಿ (ಹ್ಯಾಂಡ್ ಬಾಲ್, ಶಟಲ್ ಬ್ಯಾಡ್ಮಿಂಟನ್), ತರಣಂಜೆಡ್ (ಟೇಬಲ್ ಟೆನ್ನಿಸ್), ಐಶ್ವರ್ಯ ಯಂ.ಎಸ್. (ಹ್ಯಾಂಡ್ ಬಾಲ್) ಸುನಿದಿ ಪಟೇಲ್ ಜಿ.ಟಿ. (ಥ್ರೋಬಾಲ್), ಇಶ ಯಸ್. (ಟೇಬಲ್ ಟೆನ್ನಿಸ್) ಮೋನಿಕಾ ಕೆ.ಸಿ. (ಹ್ಯಾಂಡ್ ಬಾಲ್) ಸಾಧನೆ ತೋರಿದ್ದಾರೆ.
ಆಶಿಕ್ ಕೆ.ಹೆಚ್. (400 ಮೀ. ಹರ್ಡಲ್ಸ್) ದೀಪಕ್ ಎ. (ಟೇಬಲ್ ಟೆನ್ನಿಸ್), ಹರ್ಷದ್ ಪಿ.ಎಲ್. (ಶಟಲ್ ಬ್ಯಾಡ್ಮಿಂಟನ್), ಉತ್ತಯ್ಯ ಕೆ.ಟಿ. (ಗುಡ್ಡಗಾಡು ಓಟ) ಸಾಜಿದ್ ಖಾನ್ ಎಂ.ಯಸ್. (ಹ್ಯಾಂಡ್ ಬಾಲ್), ಸೂರಜ್ ಅಯ್ಯಪ್ಪ ಬಿ.ಟಿ. (ಹಾಕಿ ದ್ವಿತೀಯ ಸ್ಥಾನ), ಶಮನ್ ಅಪ್ಪಣ್ಣ ಎನ್.ಬಿ. (ಹ್ಯಾಂಡ್ ಬಾಲ್) ಮಿಲನ್ ಸಿ.ಜೆ. (110 ಮೀ. ಹರ್ಡಲ್ಸ್), ನೂಫೆಲ್ ಯಂ.ಹೆಚ್. (ಬಾಸ್ಕೆಟ್ ಬಾಲ್), ಭಾಷಿತ್ ಆಲಿ ಪಿ.ಬಿ. (ಡಿಸ್ಕಸ್), ಮೊಹಮ್ಮದ್ ಆದಿಲ್ ಪಿ.ಎ. (ವಾಲಿಬಾಲ್)ನಲ್ಲಿ ಗೆಲುವು ಪಡೆದಿದ್ದಾರೆ.
ಸಿದ್ದಾಪುರ: ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಅಂತರರಾಷ್ಟ್ರೀಯ ಅಥ್ಲೆಟ್ ತೀತಮಾಡ ಅರ್ಜುನ್ ದೇವಯ್ಯ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕೊಡಗು ವಿಕಸನ ಸಂಸ್ಥೆಯ ವತಿಯಿಂದ ಸಿದ್ದಾಪುರದ ಶ್ರೀ ಕೃಷ್ಣ ವಿದ್ಯಾಮಂದಿರಲ್ಲಿ ನಡೆದ “ಪರೀಕ್ಷೆ ಒಂದು ಕ್ರೀಡಾಂಗಣ” ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಾಠದ ಕಡೆ ಗಮನ ಹರಿಸಬೇಕು. ಏಕಾಗ್ರತೆಯಿಂದ ಪ್ರತಿದಿನ ಶ್ರಮವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಶೇ. 100 ರಷ್ಟು ಅಂಕ ಪಡೆದು ತೇರ್ಗಡೆಯಾಗಬಹುದು ಎಂದರು. ಕ್ರೀಡೆಯು ಕೂಡ ಧೈರ್ಯದಿಂದ ಎದುರಿಸಿದರೆ ಮಾತ್ರ ವಿಜಯ ಸಾಧ್ಯ ಎಂದರು. ಕೊಡಗು ವಿಕಸನ ಸಂಸ್ಥೆಯ ಸತ್ಯ ಗಣಪತಿ ಮಾತನಾಡಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಭಯವಿಲ್ಲದೇ ಎದುರಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ವಿದ್ಯಾ ಮಂದಿರದ ಮುಖ್ಯ ಶಿಕ್ಷಕರಾದ ರಸೀತಾ ರಾಜೀವ್ ವಹಿಸಿದ್ದರು. ಶಿಕ್ಷಣಾಧಿಕಾರಿ ಎಂ.ಹೆಚ್. ಹರೀಶ್, ಶ್ರೀ ಕೃಷ್ಣ ವಿದ್ಯಾ ಮಂದಿರದ ನಿರ್ದೇಶಕಿ ರಶ್ಮಿ, ಶಾಲಾ ಶಿಕ್ಷಕರು ಸೇರಿದಂತೆ ಇನ್ನಿತರರು ಇದ್ದರು.
ಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಂಘಕ್ಕೆ ಚಾಲನೆ ನೀಡಲಾಯಿತು.
ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಡಾ. ಉದಯಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇತಿಹಾಸ ತಿಳಿಯುವದರಿಂದ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವದರೊಂದಿಗೆ ಶಿಕ್ಷಣಕ್ಕೂ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪ್ರದೇಶದ ಇತಿಹಾಸ ತಿಳಿಯುವದರೊಂದಿಗೆ ಜಿಲ್ಲೆಯ ಎಲ್ಲ ಪ್ರಮುಖ ಸ್ಥಳಗಳ ಸಂಶೋಧನೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ಮಾತನಾಡಿ, ಇತಿಹಾಸವು ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯವಾಗಿದ್ದು, ಗತಕಾಲದ ವಿಷಯಗಳನ್ನು ತಿಳಿಯುವದರಿಂದ ನಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಎಲ್ಲ ವಿದ್ಯಾರ್ಥಿಗಳು ಇತಿಹಾಸದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹೆಬ್ಬಾಲೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ವೆಂಕಟನಾಯಕ್, ಬಿಟಿಸಿಜಿ ಕಾಲೇಜಿನ ಇತಿಹಾಸ ಉಪನ್ಯಾಸಕ ಸುನಿಲ್ಕುಮಾರ್ ಉಪಸ್ಥಿತರಿದ್ದರು.ಮಡಿಕೇರಿ: ಮೂರ್ನಾಡು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪನಮನವನ್ನು ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನಿವೃತ್ತ ಕಂದಾಯ ನಿರೀಕ್ಷಕ ಟಿ.ಸಿ. ಚಂದ್ರನ್ ಮಾತನಾಡಿ, ವಿವೇಕಾನಂದರು ಇಂದು ಕೂಡ ಎಲ್ಲರ ಮನ, ಮನೆಗಳಲ್ಲಿ ಜೀವಂತವಾಗಿದ್ದಾರೆ. ವಿದ್ಯಾರ್ಥಿಗಳು ಜೀವನಕ್ಕಾಗಿ ಓದಬೇಕೆ ಹೊರತು ಪರೀಕ್ಷೆಗಾಗಿ ಅಲ್ಲ ಎಂಬ ಕಿವಿಮಾತನ್ನು ಹೇಳಿದರು. ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಅತ್ಯುನ್ನತವಾದ ಗುರಿಯನ್ನು ಇಟ್ಟುಕೊಳ್ಳಬೇಕು. ಗುರಿ ಸಾಧಿಸಲು ಅಚಲವಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳಬೇಕು ಎಂಬದಾಗಿ ಅಭಿಪ್ರಾಯಪಟ್ಟರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ, ವಿವೇಕಾನಂದರು ಎಲ್ಲಾ ವರ್ಗದವರಿಗೂ ಸ್ಫೂರ್ತಿದಾಯಕರಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು ಎಂದು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.
ಸೋಮವಾರಪೇಟೆ: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್ಕ್ರಾಸ್ ಘಟಕದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಚಿಕ್ಕಅಳುವಾರ ಜ್ಞಾನಕಾವೇರಿ ಕಾಲೇಜಿನ ಉಪನ್ಯಾಸಕ ಜಮೀರ್ ಅಹ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸ್ವಾಮಿ ವಿವೇಕಾನಂದರ ಜೀವನ ಮೌಲ್ಯಗಳನ್ನು ತಿಳಿಸಿದರಲ್ಲದೇ, ಅವರ ಆದರ್ಶಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಅಂತೋಣಿರಾಜ್ ವಹಿಸಿದ್ದರು. ಜ್ಞಾನಕಾವೇರಿ ಕೇಂದ್ರದ ಉಪನ್ಯಾಸಕ ಹರೀಶ್, ಗಗನ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಕೆ.ಆರ್. ಶಿವಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಆನಂದ್, ರೆಡ್ಕ್ರಾಸ್ ಘಟಕದ ಭಾರ್ಗವ್ ಅವರುಗಳನ್ನು ಸನ್ಮಾನಿಸಲಾಯಿತು.
*ಗೋಣಿಕೊಪ್ಪಲು: ಆಂಧ್ರಪ್ರದೇಶದ ಗುಂಟೂರು ಗ್ರ್ರಾಮದಲ್ಲಿ ನಡೆದ ಜ್ಯೂನಿಯರ್ ನ್ಯಾಷನಲ್ಸ್ ಅಥ್ಲೆಟಿಕ್ಸ್ನಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿಕಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.
ಅಥ್ಲೆಟಿಕ್ಸ್ನ ಮಿಡ್ಲೆ ರಿಲೇಯನ್ನು ಕೇವಲ 2ನಿ.44 ಸೆಕೆಂಡ್ಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ಜತೆಗೆ 200 ಮೀ. ಮತ್ತು 400 ಮೀ. ರಿಲೇ ಓಟದಲ್ಲಿ ಪ್ರಥಮ ಸ್ಥಾನ ಹಾಗೂ 400 ಮೀ. ಹರ್ಡಲ್ಸ್ನಲ್ಲಿ ದ್ವೀತಿಯ ಸ್ಥಾನಗಳಿಸಿ ಕಾಲೇಜಿನ ಕೀರ್ತಿಯನ್ನು ಬೆಳಗಿದ್ದಾಳೆ.
ಕಾವೇರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಜ್ಯೋತಿಕ ಈ ಹಿಂದೆ ಪಂಜಾಬಿನ ಸಂಗ್ರೂರ್ನಲ್ಲಿ ನಡೆದ 65ನೇ ರಾಷ್ಟ್ರೀಯ ಸ್ಕೂಲ್ಗೇಮ್ಸ್ ಫೆಡರೇಷನ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 4x400 ರಿಲೇ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ 400 ಮೀ. ಹರ್ಡಲ್ಸ್ನಲ್ಲಿ ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾಳೆ. ಇದೇ ಸ್ಪರ್ಧೆಯಲ್ಲಿ ಕಾಲೇಜಿನ ಪೂರ್ಣಿಮಾ 100ಮೀ ಹರ್ಡಲ್ಸ್ನ್ನು ಕೇವಲ 15.20 ಸೆಕೆಂಡ್ಗಳಲ್ಲಿ ಕ್ರಮಿಸಿ ವೈಯಕ್ತಿಕ ದಾಖಲೆಯೊಂದಿಗೆ ಆರನೇ ಸ್ಥಾನ ಪಡೆದುಕೊಂಡಿದ್ದಾಳೆ.
ಪದವಿಪೂರ್ವ ಶಿಕ್ಷಣ ಇಲಾಖೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜ್ಯೋತಿಕಾ 400 ಮೀ. ಹರ್ಡಲ್ಸ್ನ್ನು 1ನಿ. 07 ಸೆಕೆಂಡ್ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದು, 400 ಮೀ.ನಲ್ಲಿ ದ್ವಿತೀಯ ಸ್ಥಾನ ಮತ್ತು 200 ಮೀ.ನಲ್ಲಿ ತೃತೀಯ ಸ್ಥಾನ ಹಾಗೂ ಪೂರ್ಣಿಮಾ ವಿ. 100 ಮೀ. ಹರ್ಡಲ್ಸ್ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸೋಮವಾರಪೇಟೆ: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಠಾಣಾಧಿಕಾರಿ ಶಿವಶಂಕರ್ ಅವರು ವಿದ್ಯಾರ್ಥಿಗಳಿಗೆ ಸುರಕ್ಷಿತ ವಾಹನ ಚಾಲನೆಯ ಬಗ್ಗೆ ಮಾಹಿತಿ ನೀಡಿದರು. ವಾಹನ ಸವಾರರು ಕಡ್ಡಾಯವಾಗಿ ವಾಹನಕ್ಕೆ ಸಂಬಂಧಿಸಿದ ದಾಖಲಾತಿಯನ್ನು ತಮ್ಮ ಬಳಿಯಲ್ಲಿ ಇರಿಸಿಕೊಂಡಿರಬೇಕು. ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು ಎಂದರು.
ಕಾಲೇಜಿನಲ್ಲಿ ಯಾವದೇ ಮಾದಕÀ ಪದಾರ್ಥ ಬಳಸಬಾರದು. ಬಳಸುವದು ಹಾಗೂ ಸರಬರಾಜು ಮಾಡಿದ್ದಲ್ಲಿ ಠಾಣೆಗೆ ಮಾಹಿತಿ ನೀಡಬೇಕು. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಯಾವದೇ ಕಾರಣಕ್ಕೂ ರ್ಯಾಗಿಂಗ್ ಮಾಡಬಾರದು. ರ್ಯಾಗಿಂಗ್ ನಡೆಸಿದಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಶಿವಮೂರ್ತಿ, ಎಎಸ್ಐ ಕೃಷ್ಣೇಗೌಡ ಉಪಸ್ಥಿತರಿದ್ದರು.
ಸುಂಟಿಕೊಪ್ಪ: ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಪ್ರಾಂಶುಪಾಲರಾಗಿ ಮುಂಬಡ್ತಿ ಪಡೆದ ಪಿ. ಸೋಮಚಂದ್ರ ಮತ್ತು ಬೆಳ್ಳಿಯಪ್ಪ ಅವರುಗಳಿಗೆ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಪಿ. ಸೋಮಚಂದ್ರ, ತಾನು ಈ ಕಾಲೇಜಿನಲ್ಲಿ ಇದ್ದಷ್ಟು ದಿನ ಒಂದು ಅವಿಭಕ್ತ ಕುಟುಂಬದ ವಾತಾವರಣವನ್ನು ಕಂಡುಕೊಂಡಂತ್ತಾಗಿತ್ತು. ಎಲ್ಲ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತುಂಬ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಹಿರಿಯ ಉಪನ್ಯಾಸಕ ಬೆಳ್ಳಿಯಪ್ಪ ಅವರು, ಸಂಸ್ಥೆಯ ಮುಂದಿನ ಅಭಿವೃದ್ಧಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಎಸ್. ಜಾನ್ ಅವರು ಇಂದು ತಮ್ಮ ಸಂಸ್ಥೆ ಎರಡು ಅನಘ್ರ್ಯ ರತ್ನಗಳನ್ನು ಕಳೆದುಕೊಳ್ಳುತ್ತಿದೆ ಎಂದರು.ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ರಶ್ಮಿ ಅವರಿಗೆ 53 ಸಾವಿರ ರೂಪಾಯಿ ಮೌಲ್ಯದ ಕ್ಯಾಮರಾ ಉಡುಗೊರೆ ನೀಡಲಾಗಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗ, ಹಳೇ ವಿದ್ಯಾರ್ಥಿ ಸಂಘ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ಈ ಕೊಡುಗೆ ನೀಡಲಾಗಿದೆ.
ಕೊಡಗು ಪ್ರೆಸ್ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು ಇಪ್ಪತ್ತು ದಾನಿಗಳಿಂದ ಆರ್ಥಿಕ ನೆರವು ಪಡೆಯುವುದರ ಮೂಲಕ ಹೊಸ ಕ್ಯಾಮರಾ ಖರೀದಿಸಿ ನೀಡಲಾಗಿದೆ. ಕೊಡಗು ಪ್ರೆಸ್ ಕ್ಲಬ್ ರೂ. 5 ಸಾವಿರ ನೆರವು ನೀಡಿದೆ. ಕಾಲೇಜಿನಲ್ಲಿ ಛಾಯಾಚಿತ್ರ ಕುರಿತು ನಡೆದ ಕಾರ್ಯಾಗಾರದಲ್ಲಿ ವಿಘ್ನೇಶ್ ಎಂ. ಭೂತನಕಾಡು ಕ್ಯಾಮರಾ ಹಸ್ತಾಂತರಿಸಿದರು.
ಛಾಯಾಚಿತ್ರ ಕ್ಷೇತ್ರದಲ್ಲಿ ನಿರಂತರ ಕಲಿಕೆ ಮೂಲಕ ಸಾಧನೆ ಸಾಧ್ಯ. ತಂತ್ರಜ್ಞಾನದಲ್ಲಿನ ಬದಲಾವಣೆಗಳನ್ನು ಗ್ರಹಿಸಬೇಕೆಂದು ಛಾಯಾಚಿತ್ರ ಬಗ್ಗೆ ವಿಷಯ ಮಂಡಿಸಿದ ವಿಜಯವಾಣಿ ಮಂಗಳೂರು ಛಾಯಾಗ್ರಾಹಕ ಅಪುಲ್ ಆಳ್ವಾ ಹೇಳಿದರು. ಹವ್ಯಸಿ ಛಾಯಾಗ್ರಾಹಕ ಸುಧಾಮ ಪೆರಾಜೆ ಸಲಹೆ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ. ಚೌರೀರ ಜಗತ್ ತಿಮ್ಮಯ್ಯ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಪ್ರಧಾನ ಕಾರ್ಯದರ್ಶಿ ಬೊಳ್ಳಜೀರ ಬಿ. ಅಯ್ಯಪ್ಪ, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಪಾಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕಿ ಯಶೋಧಾ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೋನಿಕಾ ಇದ್ದರು.