ಮೂರ್ನಾಡು, ಜ. 17 : ಕಳೆದ ಮಳೆಗಾಲದಿಂದ ತೀರ ಹದಗೆಟ್ಟಿರುವ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿ ಗಳಾಗಿರುವ ಮೂರ್ನಾಡು ಕುಂಬಳದಾಳು ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟು ಕುಂಬಳದಾಳು ನಿವಾಸಿಗಳು ಪ್ರತಿಭಟನೆ ನಡೆಸಿದರು.

ಮೂರ್ನಾಡು ಕುಂಬಳದಾಳು ರಸ್ತೆಯನ್ನು ಉತ್ತಮ ದರ್ಜೆಯ ರಸ್ತೆಯನ್ನಾಗಿಸಲು ಸರಕಾರದಿಂದ ಹಣ ಮಂಜೂರಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡ ಗುತ್ತಿಗೆದಾರರು ರಸ್ತೆಯ ಎರಡು ಬದಿಗಳನ್ನು ಜೆಸಿಬಿಯಿಂದ ಅಗೆದು ಇದ್ದ ಉತ್ತಮ ರಸ್ತೆಯನ್ನು ಹಾಳು ಮಾಡಿದ್ದಲ್ಲದೆ, ಇದ್ದ ಚರಂಡಿಯನ್ನು ಮುಚ್ಚಿ ಹಾಕಿದ್ದು, ನಂತರ ಈವರೆಗೆ ಗುತ್ತಿಗೆದಾರರು ಈ ಕಾಮಗಾರಿಯನ್ನು ಮುಂದುವರೆಸಿಲ್ಲ. ಈಗಾಗಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ಸು ಕೂಡ ಕಳೆದ ಮಾರ್ಚ್ ತಿಂಗಳಿನಿಂದ ಸಂಚಾರ ಸ್ಥಗಿತ ಗೊಳಿಸಿದ್ದು, ಸಾರ್ವಜನಿಕರ ಹಾಗೂ ಶಾಲಾ ಮಕ್ಕಳಿಗೆ ಓಡಾಡಲು ತುಂಬಾ ತೊಂದರೆಯಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳು ಮುಚ್ಚಿ ಹೋಗಿರುವುದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿಯೆ ನೀರು ಹರಿದು ದೊಡ್ಡ ದೊಡ್ಡ ಗುಂಡಿಗಳಾಗಿದ್ದು, ಯಾವುದೆ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಆಟೊ ರಿಕ್ಷಾಗಳು ಬಾಡಿಗೆ ಹೆಚ್ಚು ಕೊಡುತ್ತೇವೆಯೆಂದರೂ ಬರುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಸಂಸದರಾದ ಪ್ರತಾಪಸಿಂಹ ಮೂರ್ನಾಡು ಕುಂಬಳದಾಳು ಕೊಟ್ಟಮುಡಿ ರಸ್ತೆಯ ಡಾಮರೀಕರಣಕ್ಕೆ ಭೂಮಿ ಪೂಜೆ ನೆರವೇರಿದ್ದರೂ, ಈವರೆಗೆ ಈ ರಸ್ತೆಯಲ್ಲಿ ಸಾರ್ವಜನಿಕರಿಗೆ ಉಪಯೋಗ ವಾಗುವಂತಹ ಯಾವುದೆ ಕಾಮಗಾರಿಯಾಗಿಲ್ಲ.

ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟುಪ್ರತಿಭಟನೆ ನಡೆಸಿದ ನಿವಾಸಿಗಳು ಈ ರಸ್ತೆಯನ್ನು ಆದಷ್ಟು ಬೇಗ ಉತ್ತಮ ದರ್ಜೆಯ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೆವು. ಈ ರಸ್ತೆಯನ್ನು ಪರಿಶೀಲನೆ ಮಾಡಲು ಬರುವುದಾಗಿ ಭರವಸೆ ನೀಡಿದ್ದರೂ ಈವರೆಗೆ ಜಿಲ್ಲಾಧಿಕಾರಿಯಾಗಲಿ, ಬೇರೆ ಅಧಿಕಾರಿಗಳಾಗಲಿ, ಇಲ್ಲಿನ ನಿವಾಸಿಗಳಾಗಿರುವ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಲಿ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ ಜನಪ್ರತಿನಿಧಿಗಳಾಗಲಿ ಬರಲಿಲ್ಲ. ಆದಷ್ಟು ಬೇಗ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಮಂಜೂರಾಗಿರುವ ಕಾಮಗಾರಿಯನ್ನು ಪ್ರಾರಂಭ ಮಾಡಿ, ವಾಹನಗಳ ಸಂಚಾರಕ್ಕೆ, ಸಾರ್ವಜನಿಕರ ಓಡಾಟಕ್ಕೆ ಸುಗಮಗೊಳಿಸಿ ಕೊಡದಿದ್ದಲ್ಲಿ, ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಇಲ್ಲಿನ ನಾಗರಿಕರು, ವಾಹನ ಚಾಲಕರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಹೋರಾಟದ ಪ್ರಮುಖರಾದ ತೆಕ್ಕಡೆ ಯು. ಗಣಪತಿ, ತೆಕ್ಕಡೆ ಆರ್. ಸುನಂದ, ದಂಬೆಕೋಡಿ ಬಿ. ರಾಜೇಶ್, ದೇವಜನ ವಿಖ್ಯಾತ್ ನಾಣಯ್ಯ, ಪಾರೆಮಜಲು ಹರೀಶ್, ದೇವಜನ ಶಿವ ಪ್ರಕಾಶ್, ತೆಕ್ಕಡೆ ಪೂರ್ಣೆಶ್, ನೆರವಂಡ ಬೋಪಣ್ಣ, ದಂಬೆಕೋಡಿ ಲೋಕೇಶ್, ದೇವಜನ ಸುಜಿತ್ ಕುಮಾರ್, ಸಾರ್ವಜನಿಕರು, ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.