ಮಡಿಕೇರಿ, ಜ. 18: ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಲಭಿಸುವ ನಿಟ್ಟಿನಲ್ಲಿ ಕೊಡವರೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ ಯಶಸ್ಸು ಸಿಗಲಿದೆ. ಒಗ್ಗಟ್ಟು ಪ್ರದರ್ಶಿಸದಿದ್ದರೆ ಬುಡಕಟ್ಟು ಸ್ಥಾನಮಾನ ಪಡೆಯುವದು ಅಸಾಧ್ಯ ಎಂದು ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕಡಗದಾಳುವಿನ ಕ್ಯಾಪಿಟಲ್ ವಿಲೇಜ್ನಲ್ಲಿ ಕೊಡವ ಬುಡಕಟ್ಟು ಸ್ಥಾನಮಾನದ ಕುರಿತು ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬುಡಕಟ್ಟು ಸ್ಥಾನಮಾನ ಪಡೆಯಲು ಬೇಕಾಗಿರುವ ಸಂಸ್ಕøತಿ, ಆಚಾರ ವಿಚಾರ ಕೊಡವ ಜನಾಂಗದಲ್ಲಿ ಒಂದು ಪಟ್ಟು ಹೆಚ್ಚೇ ಇದೆ. ಆ ಸ್ಥಾನಮಾನ ಪಡೆಯಲು ಕೊಡವರು ಅರ್ಹರು. ಆದರೆ ಅದನ್ನು ಪಡೆಯುವ ನಿಟ್ಟಿನಲ್ಲಿ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಸಿಎನ್ಸಿ ಕೈಗೊಂಡಿರುವ ಹೋರಾಟಕ್ಕೆ ಕೊಡವರ ಪ್ರತಿಯೊಂದು ಮನೆಯಿಂದಲೂ ಬೆಂಬಲ ವ್ಯಕ್ತವಾಗಬೇಕು. ಎಲ್ಲರೂ ಒಂದಾಗಿ ಹೋರಾಟಕ್ಕೆ ಇಳಿಯುವಂತಾದರೆ ತಾನು ಕೂಡ ಕೈಜೋಡಿಸುವುದಾಗಿ ಕುಪ್ಪೇಂದ್ರ ರೆಡ್ಡಿ ಭರವಸೆಯಿತ್ತರು.