ಸಿದ್ದಾಪುರ, ಜ. 17: ವಾಲ್ನೂರು-ತ್ಯಾಗತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನೆಲ್ಲಿಹುದಿಕೇರಿಯ ಮಳೆಹಾನಿ ಸಂತ್ರಸ್ತರಿಗೆ ನಿವೇಶನ ನೀಡಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿರುವ ಅವರು ವಾಲ್ನೂರು-ತ್ಯಾಗತೂರು ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಸ್ಥಳೀಯರಿಗೆ ಮೀಸಲಿಡಬೇಕೆಂದು ಒತ್ತಾಯಿಸಿದ್ದಾರೆ. ವಿವಿಧ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ವಸತಿ ರಹಿತ ಸುಮಾರು 300 ಕುಟುಂಬಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಕುಟುಂಬಗಳಿಗೆ ನಿವೇಶನವನ್ನು ಹಂಚಲು 7 ಎಕರೆ ಪ್ರದೇಶದ ಜಿಪಿಎಸ್ ಸರ್ವೆ ಕೂಡ ಮಾಡಲಾಗಿದೆ. ಆದರೆ ಇದೀಗ ಉಪವಿಭಾಗಾಧಿಕಾರಿಗಳು ಈ ಜಾಗವನ್ನು ಮಳೆಯಿಂದ ಮನೆ ಕಳೆದುಕೊಂಡಿರುವ ನೆಲ್ಲಿಹುದಿಕೇರಿಯ ಸಂತ್ರಸ್ತರಿಗೆ ಹಂಚಿಕೆ ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ. ಇದಕ್ಕೆ ತಮ್ಮ ವಿರೋಧವಿದೆ ಎಂದು ತಿಳಿಸಿರುವ ಅಂಚೆಮನೆ ಸುಧಿ, ಸರ್ವೆಯಾಗಿರುವ ಜಾಗವನ್ನು ಈಗಾಗಲೇ ಗುರುತಿಸಿರುವ ವಾಲ್ನೂರು-ತ್ಯಾಗತೂರು ಗ್ರಾ.ಪಂ. ವ್ಯಾಪ್ತಿಯ 300 ಕುಟುಂಬಗಳಿಗೇ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.