ಸೋಮವಾರಪೇಟೆ, ಜ.18: ಮದ್ಯಪಾನ ಮಾಡಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ತನ್ನ ತಂದೆಯನ್ನು ಪುತ್ರನೇ ಹತ್ಯೆ ಮಾಡಿರುವ ಘಟನೆ ಸಮೀಪದ ಗೋಣಿ ಮರೂರು ಗ್ರಾಮದ ಜೇನುಕುರುಬರ ಹಾಡಿಯಲ್ಲಿ ಸಂಭವಿಸಿದ್ದು, ತಾಯಿ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಗೋಣಿಮರೂರು ಹಾಡಿ ನಿವಾಸಿ ಕರಿಯಪ್ಪ (46) ಎಂಬವರನ್ನು ಅವರ ಪುತ್ರ ಲೋಕೇಶ್(25) ಹತ್ಯೆ ಮಾಡಿದ್ದು, ಇವನ ತಾಯಿ ಲೀಲಾ (38) ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಎಲ್ಲರೂ ಮನೆಯಲ್ಲಿದ್ದ ಸಂದರ್ಭ ಪುತ್ರ ಲೋಕೇಶ್, ಮದ್ಯಪಾನ ಮಾಡಲು ತಂದೆ ಕರಿಯಪ್ಪ ಅವರಲ್ಲಿ ಹಣ ಕೇಳಿದ್ದಾನೆ. ಈ ಸಮಯದಲ್ಲಿ ಹಣ ನೀಡಲು ನಿರಾಕರಿಸಿದ್ದರಿಂದ ಮರದ ದೊಣ್ಣೆಯಿಂದ ತಲೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಲೀಲಾ ಅವರ ಮೇಲೂ ಹಲ್ಲೆ ನಡೆಸಿರುವ ಆರೋಪಿ ಮನೆಯೊಳಗೆ ದಾಂಧಲೆ ಎಬ್ಬಿಸಿದ್ದಾನೆ.
ತಲೆ ಭಾಗಕ್ಕೆ ಗಂಭೀರ ಗಾಯವಾದ ಹಿನ್ನೆಲೆ ಕರಿಯಪ್ಪ ಅವರು ಸ್ಥಳದಲ್ಲೇ ಬಿದ್ದು ಅಸುನೀಗಿದ್ದಾರೆ. ತಾಯಿ ಲೀಲಾ ಅವರ ಮೇಲೂ ಹಲ್ಲೆ ನಡೆಸಿದ್ದರಿಂದ ಗಂಭೀರ ಪ್ರಮಾಣದ ಗಾಯಗಳುಂಟಾಗಿದ್ದು, ಸೋಮವಾರಪೇಟೆ, ಮಡಿಕೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ನಂತರ ನಿನ್ನೆ ರಾತ್ರಿಯಿಂದ ಆರೋಪಿ ಲೋಕೇಶ್ ತಲೆಮರೆಸಿಕೊಂಡಿದ್ದು, ಇಂದು ಮಧ್ಯಾಹ್ನ ಬಾಣಾವರ ಸಮೀಪದಲ್ಲಿ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್‍ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 302 ಮತ್ತು 307 ಅನ್ವಯ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
ಮೃತ ಕರಿಯಪ್ಪ ಅವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು, ಆರೋಪಿ ಲೋಕೇಶ್ ಪ್ರಥಮ ಪುತ್ರನಾಗಿದ್ದಾನೆ. ಈತನಿಗೂ ವಿವಾಹವಾಗಿದ್ದು, ಕಳೆದ ಕೆಲ ಸಮಯದಿಂದ ಪತ್ನಿಯನ್ನು ತೊರೆದು ಪೋಷಕರೊಂದಿಗೆ ಗೋಣಿಮರೂರು ಹಾಡಿಯಲ್ಲಿ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.