ಸೋಮವಾರಪೇಟೆ, ಜ.18: ಅಪೆಂಡಿಕ್ಸ್-ಇ ಮತ್ತು ಕೊಡಗು ಪ್ಯಾಕೇಜ್ ಯೋಜನೆಯಡಿ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ವ್ಯಕ್ತವಾದ ಹಿನ್ನೆಲೆ ಗುಣಭರವಸೆ ಅಧಿಕಾರಿಗಳು ಕಾಮಗಾರಿಯನ್ನು ಪರೀಕ್ಷಿಸಿದರು.

ಬಹುತೇಕ ಕಾಮಗಾರಿಗಳು ಅಂದಾಜುಪಟ್ಟಿಯಂತೆ ನಡೆಯುತ್ತಿಲ್ಲ ಎಂದು ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್‍ಕುಮಾರ್ ಅವರು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮುಖ್ಯ ಅಭಿಯಂತರರಿಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಮಡಿಕೇರಿ ಲೋಕೋಪಯೋಗಿ ಇಲಾಖೆಯ ಗುಣಭರವಸೆ ಅಧಿಕಾರಿ ಗಿರೀಶ್ ಹಾಗು ಎಇಇ ಬಾಲಕೃಷ್ಣ ಅವರು ಬಾಣಾವರ-ಗಣಗೂರು- ಶನಿವಾರಸಂತೆ ಹಾಗೂ ಬೀಟಿಕಟ್ಟೆ-ಚನ್ನಾಪುರ- ಹಿರಿಕರ- ತಣ್ಣೀರುಹಳ್ಳ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ರಸ್ತೆಗಳಿಗೆ ಡಬ್ಲ್ಯೂ. ಎಂ.ಎಂ. ಮಿಶ್ರಣವನ್ನು ನಿಗದಿತ ಪ್ರಮಾಣ ಹಾಕದಿರುವದು ಬೆಳಕಿಗೆ ಬಂದಿದ್ದು, ಪೂರ್ಣ ವರದಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವದು ಎಂದು ಗ್ರಾಮಸ್ಥರಿಗೆ ಅಧಿಕಾರಿಗಳು ತಿಳಿಸಿದರು. ಮುಂದಿನ ಆದೇಶ ಬರುವವರೆಗೆ ಡಾಂಬರು ಹಾಕದಂತೆ ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚಿಸಿದರು.

ಅಂದಾಜು ಪಟ್ಟಿಯ ಪ್ರಕಾರ ವೆಟ್‍ಮಿಕ್ಸ್, ಮ್ಯಾಕ್‍ಡ್ಯಾಮ್ 6 ರಿಂದ 8ಇಂಚು ದಪ್ಪದಲ್ಲಿ ಹಾಕಬೇಕು. ಆದರೆ ಕಾಮಗಾರಿ ನಡೆಯುವ ರಸ್ತೆಗಳನ್ನು ಪರಿಶೀಲಿಸಿದಾಗ 3 ರಿಂದ 4ಇಂಚು ದಪ್ಪದಲ್ಲಿ ಹಾಕಿ ಡಾಮರೀಕರಣ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಬಗ್ಗನ ಅನಿಲ್ ಅವರು ಅಧಿಕಾರಿಗಳ ಗಮನ ಸೆಳೆದರು.

ಇದರೊಂದಿಗೆ ವೆಟ್‍ಮಿಕ್ಸ್‍ನಲ್ಲಿ ಐ.ಆರ್.ಸಿ. ನಿಗದಿಪಡಿಸಿರುವ ಕಚ್ಚಾ ಸಾಮಗ್ರಿಗಳು ಇರುವದಿಲ್ಲ. ಮತ್ತು ಜೆಲ್ಲಿಪುಡಿ ಅಧಿಕವಾಗಿ ಬಳಸಲಾಗುತ್ತಿದೆ. ರಸ್ತೆಗಳಿಗೆ ಹಾಕಿರುವ ವೆಟ್‍ಮಿಕ್ಸ್ ಕಾಂಪ್ಯಾಕ್ಸನ್ ಆಗಿರುವದಿಲ್ಲ. ಇಂಜಿನಿಯರ್‍ಗಳು ಕೂಡ ಸ್ಥಳದಲ್ಲಿ ಇದ್ದು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿಲ್ಲ. ಎಂದು ಅನಿಲ್‍ಕುಮಾರ್ ದೂರಿದರು.

ಡಾಮರೀಕರಣ ಮಾಡುವ ಸಮಯದಲ್ಲಿ ಹಾಟ್‍ಮಿಕ್ಸ್ ಪ್ಲಾಂಟ್ ಮತ್ತು ಡಾಂಬರನ್ನು ಗುಣಭರವಸೆ ಅಧಿಕಾರಿಗಳು ಪರೀಕ್ಷಿಸಿ ನಂತರವೇ ಕಾಮಗಾರಿ ಪ್ರಾರಂಭ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕೆಂದು ಮನವಿ ಮಾಡಿದರು.