ಶ್ರೀಮಂಗಲ, ಜ. 18: ದ.ಕೊಡಗಿನ ಇತಿಹಾಸ ಪ್ರಸಿದ್ಧ ಮತ್ತು ರಾಜ್ಯದ ಏಕೈಕ ಮೃತ್ಯುಂಜಯ ದೇವಸ್ಥಾನವೆಂದು ಹೆಸರು ಪಡೆದಿರುವ ಬಾಡಗರಕೇರಿಯ ಮೃತ್ಯುಂಜಯ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಅನ್ನದಾನದ ಸಂದರ್ಭ ಕುರ್ಚಿ ಹಾಕಿ ಕೂರಿಸಿಲ್ಲ ಎಂದು ದೇವಸ್ಥಾನದಲ್ಲಿ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುವ ಯುವಕನಿಗೆ ಟಾರ್ಚರ್ ನೀಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ಪೊಲೀಸ್ ಅಧಿಕಾರಿಯ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ತಾ. 12 ರಂದು ಮೃತ್ಯುಂಜಯ ದೇವಸ್ಥಾನಕ್ಕೆ ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು. ದೇವರ ದರ್ಶನ ಮತ್ತು ಮಹಾ ಪೂಜೆ ಆದ ನಂತರ ಭಕ್ತರಿಗೆ ದೇವಸ್ಥಾನದ ವತಿಯಿಂದ ಸಾಮೂಹಿಕ ಅನ್ನದಾನವಿರುತ್ತದೆ. ಅನ್ನ ಪ್ರಸಾದವನ್ನು ದೇವಸ್ಥಾನದ ಅನ್ನಪೂರ್ಣ ಎಂಬ ಭೋಜನ ಸಭಾಂಗಣದಲ್ಲಿ ನೆಲದ ಮೇಲೆ ಕೂರಿಸಿ ಬಡಿಸಲಾಗುತ್ತದೆ.
ಅನ್ನದಾನದ ಸಭಾಂಗಣವೊಮ್ಮೆ ತುಂಬಿದ ನಂತರ ಎರಡನೇ ಅವಧಿಯ ಊಟದವರೆಗೆ ಭಕ್ತಾಧಿಗಳು ಹೊರಗಿದ್ದು ಕಾಯಬೇಕಾಗುತ್ತದೆ. ವೃತ್ತ ನಿರೀಕ್ಷಕರು ಆಗಮಿಸಿದ ಸಂದರ್ಭ ಊಟದ ಸಭಾಂಗಣ ತುಂಬಿರುತ್ತದೆ. ತಮಗೆ ಮತ್ತು ತಮ್ಮೊಂದಿಗೆ ಆಗಮಿಸಿದ್ದ ಇತರ 8-10 ಸಿಬ್ಬಂದಿಗಳಿಗೆ ಸಭಾಂಗಣದಲ್ಲಿ ಊಟಕ್ಕೆ ಅವಕಾಶ ಮಾಡಿಕೊಡುವಂತೆ ವೃತ್ತ ನಿರೀಕ್ಷಕರು ಅಲ್ಲಿದ್ದ ಸ್ವಯಂ ಸೇವಕ ಯುವಕ ಎ.ಜಿ. ಮಂಜುನಾಥ್ ಎಂಬಾತನನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ಸಭಾಂಗಣ ಪೂರ್ತಿಯಾಗಿದ್ದು, ಇದಾದ ನಂತರ ಮುಂದಿನ ಪಂತಿನಲ್ಲಿ ಅವಕಾಶವಾಗಲಿದೆ ಎಂದು ಯುವಕ ಹೇಳಿದ್ದಾನೆ.
ಇದಕ್ಕೆ ರೇಗಿದ ವೃತ್ತ ನಿರೀಕ್ಷಕರು ನಮ್ಮಂತ ಅಧಿಕಾರಿಗಳಿಗೆ ಪ್ರಾಧಾನ್ಯತೆ ನೀಡಬೇಕು. ಕುರ್ಚಿ ಹಾಕಿ ಕೂರಿಸಿ ಊಟ ನೀಡಬೇಕೆಂದು ಹೇಳಿದ್ದಾರೆ.
ಈ ಸಂದರ್ಭ ಯುವಕ ನೀವು ಹೊಸದಾಗಿ ಬಂದಿರುವುದಾ ನಿಮ್ಮನ್ನು ನಾನು ಇದೇ ಮೊದಲು ಕಂಡಿದ್ದು ಎಂದು ಹೇಳಿದ್ದಕ್ಕೆ ವೃತ್ತ ನಿರೀಕ್ಷಕರು ಯುವಕನ ಮೇಲೆ ಮತ್ತೇ ತೀವ್ರವಾಗಿ ರೇಗಾಡಿದ್ದಾರೆ. ಇದಾದ ನಂತರ ಶ್ರೀಮಂಗಲ ಪೊಲೀಸ್ ಠಾಣೆಗೆ ವೃತ್ತ ನಿರೀಕ್ಷಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತಾ.12 ರ ಅಪರಾಹ್ನ ಠಾಣೆಯಿಂದ ದೇವಸ್ಥಾನ ಆಡಳಿತ ಮಂಡಳಿಯ ಪರಿಚಿತ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಮಂಜುನಾಥ್ನನ್ನು ಠಾಣೆಗೆ ಬರುವಂತೆ ಹೇಳಿ ಅವನ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ತಾ. 13 ರಂದು ಶ್ರೀಮಂಗಲ ಠಾಣಾಧಿಕಾರಿ ದಿನೇಶ್ಕುಮಾರ್ ಸಿಬ್ಬಂದಿಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಮಂಜುನಾಥ್ ಏಕೆ ಠಾಣೆಗೆ ಬಂದಿಲ್ಲ. ಅವನನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ. ಅವನನ್ನು ಠಾಣೆಗೆ ಬರಲು ಹೇಳಿ. ಅವನು ಬರದಿದ್ದರೆ ಅವನ ಮೇಲೆ ಪ್ರಕರಣ ಹಾಕಲಾಗುವುದು ಎಂದು ಹೇಳಿ ಹೋಗಿದ್ದಾರೆ. ಇದಾದ ನಂತರ ಮಂಜುನಾಥ್ ಅವರ ತಾಯಿ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಳ ರೋಗಿಯಾಗಿ ದಾಖಲಾಗಿರುವುದರಿಂದ ಅವರ ಚಿಕಿತ್ಸೆಗಾಗಿ ಓಡಾಡುತ್ತಿರುವ ಮಂಜುನಾಥ್ ಠಾಣೆಗೆ ಹೋಗಿರಲಿಲ್ಲ.
ಆದರೂ, ಪೊಲೀಸ್ ಇಲಾಖೆಯವರು ಮತ್ತೆ ಮಂಜುನಾಥ್ನ ಬೆನ್ನು ಹತ್ತಿದ್ದು, ತಾ. 17 ರಂದು ಬಿರುನಾಣಿ ಉಪಠಾಣೆಯ ಎರಡು ಪೊಲೀಸ್ ಕಾನ್ಸ್ಟೇಬಲ್ಗಳು ದೇವಸ್ಥಾನಕ್ಕೆ ಆಗಮಿಸಿ ಮಂಜುನಾಥ್ ಅವರನ್ನು ಕರೆತರಲು ಬಂದಿರುವುದಾಗಿ ದೇವಸ್ಥಾನ ಸಮಿತಿಯವರೊಂದಿಗೆ ಹೇಳಿದ್ದಾರೆ.
ಯುವಕ ಎ.ಜಿ. ಮಂಜುನಾಥ್ ದೇವಸ್ಥಾನದ ಸಮೀಪವೆ ಮನೆ ಇದ್ದು, ಈ ಹಿಂದೆ ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡಿದ್ದರು. ಇದಲ್ಲದೆ, ಬಿಡುವಿನಲ್ಲಿ ದೇವಸ್ಥಾನದ ಊಟ ಬಡಿಸುವದು ಸೇರಿದಂತೆ ಇತರೆ ಕೆಲಸಗಳಲ್ಲಿ ಸ್ವಯಂ ಸೇವಕನಾಗಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ. ಮನೆಯಲ್ಲಿ ಯುವಕ ಮಾತ್ರ ಕಳೆದ 2 ತಿಂಗಳಿನಿಂದ ವಾಸವಿದ್ದು, ತಾಯಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವಸ್ಥಾನದ ನೀತಿ ನಿಯಮದಂತೆ ಊಟದ ಸಭಾಂಗಣ ಪೂರ್ತಿಯಾದ ನಂತರ ಮತ್ತೊಂದು ಸಭೆಯಲ್ಲಿ ಊಟಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ, ನಿಮ್ಮನ್ನು ಕಂಡಿಲ್ಲ, ನೀವು ಹೊಸಬರಿರಬಹುದು ಎಂದು ಹೇಳಿದ್ದೇನೆ. ಆ ಸಂದರ್ಭ ವೃತ್ತ ನೀರಿಕ್ಷಕರು ನಿನ್ನನ್ನು ದಿನ ಠಾಣೆಗೆ ಹತ್ತಿಸುತ್ತೇನೆ. ದಿನನಿತ್ಯ ನನ್ನನ್ನು ಕಾಣುವಂತೆ ಮಾಡುತ್ತೇನೆ ಎಂದು ಬೆದರಿಕೆ ರೀತಿಯಲ್ಲಿ ಮಾತನಾಡಿದರು. ನನ್ನಿಂದ ಅವರಿಗೆ ಯಾವುದೇ ಅವಮಾನ ಆಗಿಲ್ಲ. ಇಲಾಖೆಯ ವರ್ತನೆಯಿಂದ ನಾನು ತೀವ್ರ ನೊಂದಿದ್ದೇನೆ. ತಾಯಿ ಆರೋಗ್ಯಕ್ಕಾಗಿ ಹರಕೆ ಹೊತ್ತು ಸ್ವಯಂ ಸೇವಕನಾಗಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಎ.ಜಿ.ಮಂಜುನಾಥ್ ‘ಶಕ್ತಿ’ಗೆ ತಿಳಿಸಿದ್ದಾರೆ.
ತಾ. 12 ರಂದು 500ಕ್ಕೂ ಹೆಚ್ಚು ಜನರ ಪೂಜೆ ಇತ್ತು. ಅಧಿಕಾರಿಗಳು, ವಿಐಪಿಗಳು ದೇವಸ್ಥಾನದ ನೀತಿ ನಿಯಮ ಪಾಲಿಸಿ ಸಹಕಾರ ನೀಡಬೇಕು. ತುರ್ತು ಕೆಲಸವಿದ್ದರೆ ಮಾಹಿತಿ ನೀಡಿದರೆ ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ತುಂಬ ವಯಸ್ಕರು, ನೆಲದಲ್ಲಿ ಕೂರಲು ಸಾಧ್ಯವಾಗದವರಿಗೆ ಕುರ್ಚಿಯಲ್ಲಿ ಕೂತು ಊಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ ಸಭಾಂಗಣ ಸಂಪೂರ್ಣ ವಾದ ಸಂದರ್ಭದಲ್ಲಿ ಅಧಿಕಾರಿಗಳು ಬಂದು ಪ್ರಾಮುಖ್ಯತೆ ನೀಡಿ ಎಂದರೆ ಕಷ್ಟ ಸಾಧ್ಯ. ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಸಹ ದೇವಸ್ಥಾನಕ್ಕೆ ಕುಟುಂಬದೊಂದಿಗೆ ಆಗಮಿಸಿ ಭಕ್ತಾಧಿಗಳೊಂದಿಗೆ ನೆಲದಲ್ಲಿಯೇ ಕೂತು ಊಟ ಮಾಡಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕಾಯಪಂಡ ಕಾವೇರಪ್ಪ ಹೇಳಿದರು.
ಈ ವಿಚಾರದ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಸೂಚಿಸಲಾಗುವುದು ಎಂದು ಎಸ್ಪಿ ಡಾ. ಸುಮನ್ ತಿಳಿಸಿದ್ದಾರೆ.
ದೇವಸ್ಥಾನದ ವಿಚಾರದಲ್ಲಿ ವೃತ್ತ ನಿರೀಕ್ಷಕರು ನಡೆದುಕೊಂಡ ರೀತಿ ಬಗ್ಗೆ ವಿವರ ಪಡೆಯಲಾಗುವುದು. ಯುವಕ ಮಂಜುನಾಥ್ಗೆ ಪೊಲೀಸ್ ಠಾಣೆಗೆ ಬರಲು ಹೇಳಿದ ಬಗ್ಗೆ ವಿಚಾರಿಸಿದ್ದು, ಅವರಿಗೆ ಬುದ್ದಿ ಹೇಳಲು ಕರೆಸಿರುವುದಾಗಿ ವೃತ್ತ ನಿರೀಕ್ಷಕರು ಹೇಳಿದ್ದಾರೆ. ಮುಂದೆ ಯುವಕನಿಗೆ ಇಲಾಖೆಯಿಂದ ಯಾವುದೇ ವಿಚಾರಣೆ ಹಾಗೂ ಕಿರುಕುಳ ನೀಡದಂತೆ ಸೂಚಿಸಲಾಗಿದೆ. ಯುವಕನೊಂದಿಗೆ ಖುದ್ದು ದೂರವಾಣಿ ಕರೆ ಮಾಡಿ ಅವರಿಗೆ ಈ ಬಗ್ಗೆ ದೈರ್ಯ ಹೇಳಲಾಗುವುದು ಎಂದು ಡಿವೈಎಸ್ಪಿ ಜಯಕುಮಾರ್ ತಿಳಿಸಿದ್ದಾರೆ.
ವೆಸ್ಟ್ ನೆಮ್ಮಲೆಯಲ್ಲಿ ಕಾಫಿ ಕೊಯ್ಯುವ ವೇಳೆ 1.9 ವರ್ಷದ ಮಗು ಕಾಣೆಯಾಗಿತ್ತು. ಆ ಮಗು ಸಿಕ್ಕಿದರೆ ಮೃತ್ಯುಂಜಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲು ಹರಕೆ ಹೊತ್ತಿದ್ದೆ, ಅದನ್ನು ತೀರಿಸಲು ಸಿಬ್ಬಂದಿಗಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಯುವಕ ಮಂಜುನಾಥ್ ಹಾಗೂ ದೇವಸ್ಥಾನ ಸಮಿತಿಯ ಚಂಗಪ್ಪ ಅವರು ಅಸಹಕಾರ ತೋರಿದರು. ಮುಂದೆ ಯಾರಿಗೂ ಈ ರೀತಿಯ ಅಸಹಕಾರ ಆಗಬಾರದೆಂದು ಠಾಣೆಗೆ ಕರೆದು ವಿಚಾರಣೆ ಮಾಡಲು ಸೂಚಿಸಿದ್ದೆ ಎಂದು ಸಿಐ ಪರಶಿವಮೂರ್ತಿ ಸ್ಪಷ್ಟನೆ ನೀಡಿದ್ದಾರೆ.
ಪದೇ ಪದೇ ವಿಚಾರಣೆಗೆ ಆಗಮಿಸುವಂತೆ ತಾಯಿ ಅನಾರೋಗ್ಯದಿಂದ ಕಂಗಲಾಗಿರುವ ಯುವಕನನ್ನು ವಿಚಾರಣೆಗೆ ಕರೆಯುವುದು ಸರಿಯಲ್ಲ. ಇದರಿಂದ ಆ ಯುವಕನಿಗೆ ಮಾನಸಿಕವಾಗಿ ಎಷ್ಟು ನೊಂದು ಭಯಪಟ್ಟಿರಬಹುದು. ಪೊಲೀಸ್ ಇಲಾಖೆ ಸಮಾಜದಲ್ಲಿ ಪ್ರತಿಷ್ಠೆಗಾಗಿ ಭಯದ ವಾತಾವರಣ ಮೂಡಿಸಬಾರದು. ಅಧಿಕಾರಿಗಳ ಇಂತಹ ನಡಾವಳಿಕೆ ವಿರುದ್ಧ ತೀವ್ರ ತರದ ಹೋರಾಟ ನಡೆಸಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹ ಮತ್ತು ಅಪರಾಧ ನಿಯಂತ್ರಣ ಸಮಿತಿ ಅಧ್ಯಕ್ಷೆ ಡಾ. ಗೀತಾ ಮಂದಣ್ಣ ತಿಳಿಸಿದ್ದಾರೆ.