ಮಡಿಕೇರಿ, ಜ. 18: ಕರ್ನಾಟಕ ಸರಕಾರವು ಭೂ ಕಬಳಿಕೆ ತಡೆಯುವ ದಿಸೆಯಲ್ಲಿ ಸರಕಾರಿ ಜಮೀನು ಸಂರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕರೂ, ವಿಧಾನಸಭೆಯ ಮಾಜೀ ಅಧ್ಯಕ್ಷರಾದ ಕೆ.ಜಿ. ಬೋಪಯ್ಯ ಅವರನ್ನು ನೇಮಕಗೊಳಿಸಿದೆ.ಈ ಸಮಿತಿಯು ಸರಕಾರದ ಜಮೀನಿನ ಸಂರಕ್ಷಣೆಯೊಂದಿಗೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆಯಂತಹ ದಂಧೆಯನ್ನು ತಡೆಗಟ್ಟುವ ದಿಸೆಯಲ್ಲಿ ಕಾರ್ಯನಿರ್ವಹಿಸಲಿದೆ. ಕೆ.ಜಿ. ಬೋಪಯ್ಯ ನೇತೃತ್ವದ ಸಮಿತಿಯಲ್ಲಿ ವಿವಿಧ ಪಕ್ಷಗಳನ್ನು ಪ್ರತಿನಿಧಿಸುವ ಶಾಸಕರುಗಳಾದ ಎ.ಟಿ. ರಾಮಸ್ವಾಮಿ, ರಾಜಶೇಖರ ಬಸವರಾಜ್ ಪಾಟೀಲ್, ಅರಗ ಜ್ಞಾನೇಂದ್ರ, ಎಸ್.ಆರ್. ವಿಶ್ವನಾಥ್, ರಾಜುಗೌಡ ಇವರುಗಳು ಸದಸ್ಯರಾಗಿರುತ್ತಾರೆ ಎಂದು ನಿನ್ನೆ ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಗಿದೆ.ಕೆ.ಜಿ.ಬಿ. ಪ್ರತಿಕ್ರಿಯೆ : ಕರ್ನಾಟಕ ಭೂ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಈಗಷ್ಟೇ ಸಚಿವ ಸಂಪುಟದ ನಿರ್ಧಾರ ಹೊರಬಿದ್ದಿದೆ. ಅಧ್ಯಕ್ಷ ಸ್ಥಾನದ ಕಾರ್ಯವ್ಯಾಪ್ತಿ ಅನುಸರಿಸಬೇಕಾದ ಕ್ರಮಗಳು, ಇನ್ನಿತರ ಅಂಶಗಳ ಕುರಿತು ಪೂರ್ಣ ಪರಿಶೀಲನೆ ಬಳಿಕ ತಮ್ಮ ಅಭಿಪ್ರಾಯ ಪ್ರಕಟಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.