ಯುಧಿಷ್ಠಿರ (ಧರ್ಮರಾಜ)ನು ಲೋಮಶರನ್ನು ಕುರಿತು ಕೇಳಿದನು “ದ್ವಿಜೋತ್ತಮ, ಧೀಮಂತರಾದ ಅಗಸ್ತ್ಯ ಮಹರ್ಷಿಗಳು ಸಾಧಿಸಿದ ಇತರ ಕಾರ್ಯಗಳನ್ನೂ ಸಹ ನಾನು ವಿಸ್ತಾರವಾಗಿ ಕೇಳಲಿಚ್ಛಿಸಿದ್ದೇನೆ. ದಯೆಯಿಟ್ಟು ಹೇಳಿರಿ”
ಲೋಮಶರು ವಿವರಿಸುತ್ತಾರೆ “ಮಹಾರಾಜ, ಅತಿ ಮಾನುಷ ಪ್ರಭಾವವುಳ್ಳ, ಮಹಾ ತೇಜಸ್ವಿಗಳಾದ ಅಗಸ್ತ್ಯರ ದಿವ್ಯವಾದ ಮತ್ತು ಅದ್ಭುತವಾದ ಇತರ ಕಾರ್ಯಗಳನ್ನೂ ಹೇಳುತ್ತೇನೆ; ಕೇಳುವವನಾಗು. ಕೃತಯುಗದಲ್ಲಿ ಯುದ್ಧ ವಿಶಾದರಾದ, ಮದದಿಂದ ಕೊಬ್ಬಿದ, ಅತಿಭಯಂಕರರಾದ ಕಾಲೇಯರೆಂಬ ಹೆಸರಿನ ರಾಕ್ಷಸರಿದ್ದರು. ಈ ಕಾಲೇಯ ದಾನವರು ಮತ್ತೊಬ್ಬ ಬಲಾಢ್ಯ ಅಸುರ ರಾಜನಾದ ವೃತ್ರಾಸುರನನ್ನು ಆಶ್ರಯಿಸಿದ್ದರು. ಆತನ ಸಹಕಾರ ಪಡೆಯುವದರೊಂದಿಗೆ ಅನೇಕ ಶಕ್ತ್ಯಾಯುಧಗಳನ್ನೂ ಹೊಂದಿದ್ದರು. ದೇವೇಂದ್ರನನ್ನು, ದೇವತೆಗಳನ್ನೂ ಸಹ ನಿಂತಲ್ಲಿ ನಿಲ್ಲಲು ಬಿಡದೆ ಕಾಟ ಕೊಡುತ್ತಿದ್ದರು. ದೇವತೆಗಳು ಈ ಬಲಾಢ್ಯ ಅಸುರರ ಭಯಕ್ಕೆ ಹೆದರಿ ಮೂರು ಲೋಕಗಳನ್ನೂ ಸುತ್ತುತ್ತ ಅಸುರ ಪ್ರಹಾರದಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತಿದ್ದರು.
ದೇವತೆಗಳಿಗೆ ಮುಂದೇನು ಮಾಡಬೇಕೆಂದೇ ತೋರದಾಯಿತು. ಕಾಲೇಯರಿಗೆ ಆಶ್ರಯವನ್ನಿತ್ತ ವೃತ್ರಾಸುರನನ್ನು ಸಂಹರಿಸುವದು ಅವರಿಗೆ ಅನಿವಾರ್ಯವೆನಿಸಿತು.
ಇಂದ್ರನನ್ನು ಮುಂದು ಮಾಡಿಕೊಂಡು ದೇವತೆಗಳೆಲ್ಲ್ಲ ಬ್ರಹ್ಮನ ಬಳಿಗೆ ತೆರಳಿದರು. ಅಂಜಲಿ ಬದ್ಧರಾಗಿ ನಿಂತಿದ್ದ ದೇವತೆಗಳನ್ನು ನೋಡಿ ಬ್ರಹ್ಮನು ಅವರನ್ನು ಕುರಿತು ಕೇಳಿದನು: “ದೇವತೆಗಳಿರಾ, ನೀವಿಲ್ಲ್ಲಿಗೆ ಯಾವ ಕಾರಣದಿಂದ ಬಂದಿರುವಿರೆಂಬ ವಿಷಯವು ನನಗೆ ತಿಳಿದಿರುವದು. ನೀವು ಧಾಳಿಕೋರರಾದ ಕಾಲೇಯರೆಂಬ ಅಸುರರಿಗೆ ಆಶ್ರಯ ನೀಡಿರುವ ವೃತ್ರಾಸುರನನ್ನು ಮೊದಲು ಸಂಹಾರ ಮಾಡುವ ಬಗೆ ಹೇಗೆ ಎಂದು ತಿಳಿಯಲೋಸುಗ ಬಂದಿರುವಿ ರಲ್ಲವೇ ? ಯಾವ ಉಪಾಯದಿಂದ ನೀವು ವೃತ್ರಾಸುರನನ್ನು ಸಂಹರಿಸಬಹುದೆಂಬುದನ್ನು ನಾನು ನಿಮಗೆ ತಿಳಿಯಪಡಿಸುವೆನು.
ಭೂಲೋಕದಲ್ಲಿ ಮಹಾತ್ಮನಾದ ದಧೀಚಿಯೆಂಬ ಮಹರ್ಷಿಯಿ ದ್ದಾನೆ. ನೀವೆಲ್ಲರೂ ಇಂದ್ರನ ನೇತೃತ್ವದಲ್ಲಿ ಆ ಮಹರ್ಷಿಗಳ ಬಳಿಗೆ ತೆರಳಿ ವರವೊಂದನ್ನು ಯಾಚಿಸಿರಿ. ಧರ್ಮಾತ್ಮನಾದ ದಧೀಚಿಯು ಸುಪ್ರೀತನಾಗಿ ನಿಮಗೆ ವರ ಕೊಡುವನು. ಆ ಸಂದರ್ಭ ನೀವುಗಳು ತಕ್ಷಣವೇ “ನಮಗೆ ನಿಮ್ಮ ದೇಹದ ಮೂಳೆಗಳನ್ನು ದಯಪಾಲಿಸು” ಎಂದು ಕೇಳಿಕೊಳ್ಳಿ. ಅವನು ತನ್ನ ವಚನಕ್ಕೆ ಬದ್ಧನಾಗಿ ತನ್ನ ಮೂಳೆಗಳನ್ನು ನೀಡಲು ತನ್ನ ಪ್ರಾಣವನ್ನೇ ತೊರೆಯುವನು. ಅವನ ಮೂಳೆಗಳನ್ನು ತೆಗೆದುಕೊಂಡು ಅವುಗಳಿಂದ ಬಹು ಭಯಂಕರ ವಾದ, ಬಹು ಶಕ್ತಿಯುತವಾದ ವಜ್ರಾಯುಧವನ್ನು ನಿರ್ಮಿಸಿರಿ. ದಧೀಚಿ ಮಹರ್ಷಿಗಳ ಮೂಳೆ ಯಿಂದ ಸಿದ್ಧಗೊಳಿಸುವ, ಘೋರ ವಾದ, ಶಬ್ದಯುಕ್ತವಾದ ಆ ವಜ್ರಾಯುಧವು ಷಟ್ಕೋಣಾಕೃತಿ ಹೊಂದಲಿದ್ದು ಎಂತಹ ಪ್ರಬಲ ಶತ್ರುವನ್ನೂ ವಿನಾಶಗೊಳಿಸಲು ಸಮರ್ಥವಾಗುವದು. ಈ ವಜ್ರಾಯುಧದಿಂದಲೇ ಇಂದ್ರನು ವೃತ್ರಾಸುರನನ್ನು ಸಂಹರಿಸಲು ಸಾಧ್ಯವಾಗುತ್ತದೆ.
ಬ್ರಹ್ಮನ ಮಾತನ್ನು ಶಿರಸಾ ಪಾಲಿಸಿದ ದೇವತೆಗಳು ಇಂದ್ರನ ನೇತೃತ್ವ ದಲ್ಲಿ ಭೂಲೋಕಕ್ಕೆ ಇಳಿದು ಸರಸ್ವತಿ ನದೀ ತೀರದಲ್ಲಿ ದಧೀಚಿ ಮಹರ್ಷಿಗಳ ಆಶ್ರ್ರಮಕ್ಕೆ ತೆರಳಿದರು. ಅವರ ಪ್ರಾರ್ಥನೆಗೆ ತಕ್ಷಣ ಮನ್ನಣೆ ನೀಡಿ “ಪರೋಪಕಾರಾರ್ಥಮಿದಂ ಶರೀರಂ” ಎಂಬಂತೆ ಧರ್ಮದ ಉಳಿವಿಗೋಸ್ಕರ ದುಶ್ಶಕ್ತಿಗಳನ್ನು ವಿನಾಶಗೊಳಿಸಲು ದೇವತೆಗಳಿಗೆ ನೆರವಾಗುವದಕ್ಕೋಸ್ಕರ ದಧೀಚಿ ಮಹರ್ಷಿಯು ಉಸಿರನ್ನು ಎಲ್ಲ ಕಡೆಯಿಂದಲೂ ದಿಗ್ಬಂಧಿಸಿ ತನ್ನ ಶರೀರವನ್ನು ಪರಿತ್ಯಾಗ ಮಾಡಿ ತ್ಯಾಗ ಮೂರ್ತಿಯೆನಿಸಿದನು. ಬ್ರಹ್ಮನ ನಿರ್ದೇಶನದಂತೆ ದೇವತೆಗಳು ದಧೀಚಿಯ ಅಸ್ಥಿಯನ್ನು ತೆಗೆದುಕೊಂಡರು. ದೇವತೆಗಳ ಶಿಲ್ಪಿಯಾದ ತ್ವಷ್ಟøವಿನ ಬಳಿಗೆ ತೆರಳಿ ಆತನಿಗೆ ಒಪ್ಪಿಸಿದರು. ತ್ವಷ್ಟøವು ಆ ಮೂಳೆಗಳನ್ನು ಬಳಸಿ ಅತ್ಯಂತ ಶಕ್ತಿಯುಕ್ತ್ತವಾದ ವಜ್ರಾಯುಧವನ್ನು ನಿರ್ಮಿಸಿದನು. ಆ ವಜ್ರಾಯುಧ ವನ್ನು ಇಂದ್ರನಿಗೆ ಒಪ್ಪಿಸಿದನು. ಇಂದ್ರನು ಆ ವಜ್ರಾಯುಧದ ಪ್ರಭಾವ ದಿಂದ ವೃತ್ರಾಸುರನನ್ನು ಸಂಹರಿಸಿದನು. ತಮ್ಮ ರಕ್ಷಕನಾಗಿದ್ದ ವೃತ್ರಾಸು ರನ ಹತ್ಯೆಯಿಂದ ಆತನ ಸಹಚರರಾಗಿದ್ದ ಕಾಲೇಯ ರಾಕ್ಷಸರು ಉದ್ವಿಗ್ನಗೊಂಡರು. ಆದರೂ ಆ ಸಂದರ್ಭ ದೇವತೆಗಳ ಕೈ ಮೇಲಾದು ದನ್ನು ಗಮನಿಸಿದ ಕಾಲಕೇಯರು ಸದ್ಯಕ್ಕೆ ತಮ್ಮ ಪ್ರಾಣ ಉಳಿಸಿ ಕೊಳ್ಳಲು ಪಲಾಯನ ಸೂತ್ರ ಅನುಸರಿಸಿದರು. ಆಗ ಅವರಿಗೆ ಕಂಡುಬಂದ ಸುರಕ್ಷಿತ ಸ್ಥಳ ವೆಂದರೆ ಸಮುದ್ರದ ತಳವೊಂದೇ! ನೇರವಾಗಿ ಸಮುದ್ರದ ತಳ ಸೇರಿದ ಕಾಲಕೇಯರು ಅಲ್ಲಿ ಬಚ್ಚಿಟ್ಟು ಕೊಂಡರು.
ಸಮುದ್ರ ತಳದಲ್ಲಿ ವಾಸ ಮಾಡುವ ವಿಶೇಷ ಶಕ್ತಿ ಹೊಂದಿದ್ದ ಕಾಲೇಯ ಅಸುರರು ಪರಮ ಬಲಿಷ್ಠನಾಗಿದ್ದ, ಅಜೇಯ ನಾಗಿದ್ದ ಹಾಗೂ ಬ್ರಾಹ್ಮಣ ಕುಲದಲ್ಲಿ ಜನಿಸಿದ್ದ ತಮ್ಮ ಮಾರ್ಗದರ್ಶಿ ವೃತ್ರಾಸುರನ ಸಾವಿಗೆ ಮೂಲ ಕಾರಣ ದಧೀಚಿಯ ಅಸ್ಥಿಯ ಬಲದ ಪ್ರಭಾವ ಎಂಬದನ್ನು ಮನಗಂಡರು. ಇದರಿಂದ ಕಾಲೇಯರಿಗೆ ತಪೋನಿರತ ಋಷಿಗಳ ಮೇಲೆ ಎಲ್ಲಿಲ್ಲದ ಸಿಟ್ಟು ಆವರಿಸಿತು. ಅವರು ನಡೆಸುವ ಯಜ್ಞ ಯಾಗಾದಿಗಳ ಮೇಲೆ ಕಣ್ಣು ಬಿದ್ದಿತು. ಋಷಿ ಮುನಿಗಳನ್ನು, ತಪಸ್ವಿಗಳನ್ನೂ, ಬ್ರಹ್ಮಚಾರಿಗಳನ್ನು, ಧರ್ಮಾತ್ಮರನ್ನು, ಯಜ್ಞ-ಯಾಗಾದಿ ಮಾಡುವವರನ್ನು ವಿಶ್ವದಲ್ಲಿ ನಿರ್ನಾಮ ಮಾಡಿಬಿಡಬೇಕೆಂದು ಸಂಕಲ್ಪ ಕೈಗೊಂಡರು. ಯಜ್ಞದಲ್ಲಿ ದೊರಕುವ ಹವಸ್ಸಿನಿಂದಲೇ ದೇವತೆಗಳು ಬಲಿಷ್ಠರಾಗುತ್ತಾರೆ. ಈ ಯಜ್ಞವನ್ನೇ ಇಲ್ಲದಂತೆ ಮಾಡಿದರೆ ಅವರ ಬಲವೂ ಕ್ಷೀಣಗೊಳ್ಳ್ಳುತ್ತದೆ. ಧಾರ್ಮಿಕ ಪ್ರವಚನ, ತಪಸ್ಸು, ಸ್ವಾಧ್ಯಾಯ ಮಾಡುವವರನ್ನೆ ಗುರಿಯಾಗಿಸಲು ತೀರ್ಮಾನಿಸಿದರು. ಯಜ್ಞ ಯಾಗಾದಿಗಳು ಪ್ರಾರಂಭÀಗೊಳ್ಳು ವಾಗಲೇ ಅವರೆಲ್ಲರನ್ನೂ ಮುಗಿಸಿ ಬಿಟ್ಟರೆ ಲೋಕವೆಲ್ಲ್ಲ ದುರ್ಭಿಕ್ಷಕ್ಕೊಳಗಾಗಿ ಸಂಕಟಪಟ್ಟರೆ ತಾವು ಸುಖಿಗಳಾಗುತ್ತೇವೆ ಎಂದು ಭಾವಿಸಿ ಈ ದಿಸೆಯಲ್ಲ್ಲಿ ಸಮಾಲೋಚಿಸಿ ಒಮ್ಮತದ ನಿರ್ಧಾರ ಕೈಗೊಂಡರು.
ಸಮುದ್ರವನ್ನೇ ತಮ್ಮ ಕಾರ್ಯಾಚರಣೆಯ ಕೇಂದ್ರ ಮಾಡಿಕೊಂಡ ಕಾಲೇಯರು ತಾವು ಮಾಡಿದ ಯೋಜನೆಗನುಸಾರ ವಾಗಿ ಪ್ರಪಂಚದ ವಿನಾಶ ಕಾರ್ಯಕ್ಕೆ ತೊಡಗಿದರು. ಈ ಕಾಲೇಯರು ಹಗಲು ವೇಳೆ ಸಮುದ್ರದ ತಳಭಾಗದಲ್ಲಿ ನಿರಾಳವಾಗು ತ್ತಿದ್ದರು. ರಾತ್ರಿ ವೇಳೆ ಸಮುದ್ರದಿಂದ ಹೊರ ಬಂದು ಗುಂಪು ಗುಂಪಾಗಿ ಸೇರಿಕೊಂಡು ಆಶ್ರಮಗಳಲ್ಲ್ಲಿಯೂ, ಪುಣ್ಯಕ್ಷೇತ್ರ ಗಳಲ್ಲಿಯೂ ಇರುತ್ತಿದ್ದ ಋಷಿ-ಮುನಿಗಳನ್ನು ಕೋಪಾವಿಷ್ಟರಾಗಿ ಭಕ್ಷಿಸಲಾರಂಭಿಸಿದರು. ಈ ದುರಾತ್ಮರು ವಸಿಷ್ಠ ಮಹರ್ಷಿಗಳ ಆಶ್ರಮಕ್ಕೆ ತೆರಳಿ 188 ಮಂದಿ ಬ್ರಾಹ್ಮಣರನ್ನು ತಿಂದು ಹಾಕಿದರು. ಅಲ್ಲದೆ, 9 ಮಂದಿ ತಪಸ್ವಿಗಳನ್ನೂ ಭಕ್ಷಿಸಿಬಿಟ್ಟರು. ಅಲ್ಲಿಂದ ಈ ಗುಂಪು ಚ್ಯವನ ಮಹರ್ಷಿಗಳ ಆಶ್ರಮಕ್ಕೂ ನುಗ್ಗಿತು. ಅಲ್ಲಿ ತಪೋನಿರತರಾಗಿದ್ದ ನೂರು ಮಂದಿ ಬಾಹ್ಮಣರನ್ನು ಸ್ವಾಹಾ ಮಾಡಿಬಿಟ್ಟರು. ಕೇವಲ ನೀರು-ಗಾಳಿಯನ್ನೇ ಆಹಾರವಾಗಿಸಿ ಕೊಂಡು ತಪಸ್ಸು ಗೈಯುತ್ತ ಭರದ್ವಾಜ ಮಹರ್ಷಿಗಳ ಆಶ್ರಮದಲ್ಲಿ ತಂಗಿದ್ದ ಇಪ್ಪತ್ತು ಮಂದಿ ಬ್ರಹ್ಮಚಾರಿಗಳನ್ನು ಈ ದುಷ್ಟರು ಆಹಾರವಾಗಿ ಸೇವಿಸಿ ಬಿಟ್ಟರು. ಈ ಪಾಪ ಕಾರ್ಯಗಳನ್ನೆಲ್ಲ ಕಾಲೇಯ ರಾಕ್ಷಸರು ರಾತ್ರಿ ವೇಳೆ ಮಾಡಿ ಮುಗಿಸಿ ಬೆಳಗಿನ ಜಾವ ಸಮುದ್ರ ಸೇರಿಕೊಳ್ಳುತ್ತ್ತಿದ್ದರು. ಇದರಿಂದಾಗಿ ಆಶ್ರಮಗಳಲಿದ್ದ ಪುಣ್ಯವಂತರ ಸಂಖ್ಯೆ ಕ್ಷೀಣಗೊಳ್ಳುತ್ತ ಹೋಯಿತು. (ಮುಂದಿನ ವಾರ: ಕಾಲೇಯರನ್ನು ಸಂಹರಿಸಲು ಇಂದ್ರಾದಿ ದೇವತೆಗಳಿಂದ ಅಗಸ್ತ್ಯರಲ್ಲಿ ಮೊರೆ)