ಒಂದು ದಟ್ಟ ಅರಣ್ಯದ ಮಧ್ಯದಲ್ಲಿ ಒಂದು ಹೊಳೆ ತುಂಬಿ ಹರಿಯುತ್ತಿತ್ತು. ಅಲ್ಲಿ ಕಾಡಿನ ಪ್ರಾಣಿಗಳೆಲ್ಲ ನೀರು ಕುಡಿದು ತಮ್ಮ ದಣಿವನ್ನಾರಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದವು. ಹೊಳೆಯನ್ನು ದಾಟಿ ಪ್ರಾಣಿಗಳು ಅತ್ತಲ್ಲಿಂದ ಇತ್ತಲಿಗೆ ಓಡಾಡುತ್ತಿದ್ದವು.

ಆ ಹೊಳೆಗೆ ಒಮ್ಮೆ ಒಂದು ಮೊಸಳೆ ಬಂದು ಸೇರಿಕೊಂಡಿತ್ತು. ಹಾಗಾಗಿ ನೀರು ಕುಡಿಯಲು ಮತ್ತು ಹೊಳೆದಾಟಿ ಬರುವ ಪ್ರಾಣಿಗಳಿಗೆ ಅದರಿಂದ ತುಂಬಾ ತೊಂದರೆಯಾಗುತ್ತಿತ್ತು. ಮೊಸಳೆಯ ಬಾಯಿಗೆ ಒಂದೊಂದೇ ಪ್ರಾಣಿಗಳು ಆಹಾರವಾಗುತ್ತಾ ಬರುತ್ತಿದ್ದವು.

ಪ್ರಾಣಿಗಳೆಲ್ಲ ಒಂದುಗೂಡಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಧರಿಸಿ, ಎಲ್ಲಾ ಪ್ರಾಣಿಗಳು ಸೇರಿ ಒಂದು ಉಪಾಯ ಮಾಡಿದವು. ನದಿಯ ದಡದಲ್ಲಿದ್ದ ಹೆಮ್ಮರವನ್ನು ಕಾಡುಕೋಣ, ಕರಡಿ, ಹಂದಿಗಳೆಲ್ಲ ಸೇರಿ ಉರುಳಿಸಿ ಹೊಳೆಗೆ ಸೇತುವೆ ನಿರ್ಮಿಸಿ ಹೊಳೆ ದಾಟಲು ಪ್ರಾರಂಭಿಸಿದವು. ಇದರಿಂದ ಮೊಸಳೆಯ ಬಾಯಿಗೆ ತುತ್ತಾಗುವ ಅಪಾಯ ಇಲ್ಲವಾಯಿತು. ಸಣ್ಣ ಪುಟ್ಟ ಪ್ರಾಣಿಗಳು ಆ ಮರದ ಮೇಲಿಂದ ದಾಟುವಾಗ ಆಕಸ್ಮಿಕ ಕಾಲು ಜಾರಿ ಬಿದ್ದರೆ ಮಾತ್ರ ಮೊಸಳೆಗೆ ಆಹಾರ ಸಿಗುತ್ತಿತ್ತು. ಎಷ್ಟೋ ದಿನ ಆಹಾರವಿಲ್ಲದೆ ಮೊಸಳೆ ಉಪವಾಸ ಬಿದ್ದಿತು. ಹಸಿವು ತಾಳಲಾರದೆ ಮೊಸಳೆ ಹೇಗಾದರೂ ಮಾಡಿ ಮರದ ಸೇತುವೆಯನ್ನು ನಾಶ ಮಾಡಲು ಯೋಚಿಸಿತು. ಅದಕ್ಕೊಂದು ಉಪಾಯ ಹೊಳೆಯಿತು. ಹೊಳೆಯ ಹತ್ತಿರ ಕಾಡ್ಗಿಚ್ಚು ಉರಿಯುತ್ತಿತ್ತು. ಅಲ್ಲಿಂದ ಉರಿಯುತ್ತಿದ್ದ ಸೌದೆಕೊಳ್ಳಿಯನ್ನು ಬಾಯಿಂದ ಕಚ್ಚಿ ತಂದು ಮರದ ದಿಮ್ಮಿಗೆ ಇಟ್ಟಿತು. ನೆಮ್ಮದಿಯಿಂದ ಹೊಳೆಯ ಮಧ್ಯದಲ್ಲಿ ನಿದ್ದೆಹೋಯಿತು. ಮರಕ್ಕೆ ಹತ್ತಿದ ಬೆಂಕಿ ಮರವನ್ನು ಸುಡುತ್ತಾ ಬಂದಿತ್ತು. ಮರವು ಒಂದು ಬದಿಯಿಂದ ಸುಟ್ಟು ಹೊಳೆಗೆ ಉರುಳಿತು. ಇದನ್ನರಿಯದ ಮೊಸಳೆ, ಮರ ಹೊಳೆಗೆ ಬಿದ್ದರೆ ಮೊದಲಿನಂತೆ ಪ್ರಾಣಿಗಳು ನನ್ನ ಬಾಯಿಗೆ ಆಹಾರವಾಗುತ್ತವೆ ಎಂಬ ಸಂತಸದಲ್ಲಿತ್ತು. ಆದರೆ ಸುಟ್ಟು ಉರುಳಿದ ಮರ ಮೊಸಳೆಗೆ ಒಮ್ಮೆಗೆ ಜೋರಾಗಿ ಬಡಿದು ಅಪ್ಪಳಿಸಿತು.

ನಿದ್ರಿಸುತ್ತಿದ್ದ ಮೊಸಳೆ ನೋವಿನಿಂದ ಒದ್ದಾಡಿ ಪ್ರಾಣ ಬಿಟ್ಟಿತು. ಬೇರೆ ಪ್ರಾಣಿಗಳಿಗೆ ಅಪಾಯ ಉಂಟುಮಾಡಲು ಯೋಚಿಸಿದ ಮೊಸಳೆ ತಾನೇ ಅಪಾಯಕ್ಕೊಳ ಗಾಯಿತು.