ಶ್ರೀಮಂಗಲ, ಜ. 16: ಬಾಕ್ಸಿಂಗ್ ಕ್ರೀಡೆಗೆ ಉತ್ತಮ ಭವಿಷ್ಯವಿದ್ದು, ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯವಾಗಲಿದೆ. ಪೋಷಕರು ತಮ್ಮ ಮಕ್ಕಳಿಗೆ ಬಾಕ್ಸಿಂಗ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕೆಂದು ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ನ ಅಧ್ಯಕ್ಷರು ಮತ್ತು ಭಾರತೀಯ ಬಾಕ್ಸಿಂಗ್ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿರುವ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಚೇನಂಡ ಸಿ. ಮಾಚಯ್ಯ ಅಭಿಪ್ರಾಯಪಟ್ಟರು.
ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಪೊನ್ನಂಪೇಟೆಯ ಚಿಕ್ಕಮುಂಡೂರು ಗ್ರಾಮದಲ್ಲಿರುವ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಬಾಕ್ಸಿಂಗ್ ಟೂರ್ನಮೆಂಟ್ನ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೆ ಬಾಕ್ಸಿಂಗ್ ಕಲಿಸುವುದರಿಂದ ಸ್ವಯಂ ರಕ್ಷಣೆಗೆ ಮತ್ತು ಉತ್ತಮ ಆರೋಗ್ಯ ಹಾಗೂ ಶಿಕ್ಷಣದೊಂದಿಗೆ ಬಾಕ್ಸಿಂಗ್ ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಯಾಗಲಿದೆ. ಕೊಡಗಿನಲ್ಲಿ ಬಾಕ್ಸಿಂಗ್ ಕ್ರೀಡೆಗೆ ಇದೀಗ ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಮೂಲಕ ಉತ್ತೇಜನ ದೊರೆಯುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು. ಈ ಸಂದರ್ಭ ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ನಿಂದ ಸಾಧನೆ ಮಾಡಿದ್ದ ಸಾಧಕರನ್ನು ಸನ್ಮಾನಿಸಲಾಯಿತು. ಹವಲ್ದಾರ್ ದಿ. ಐಯಮಂಡ ರವಿ ಅವರ ಪರವಾಗಿ ಅವರ ಪತ್ನಿ ಬಿಂದು ರವಿ, ಅಂತರರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಮಹಮದ್ ಆಲಿ ಜೊತೆ ಮೂರು ಸುತ್ತು ಬಾಕ್ಸಿಂಗ್ ಪ್ರದರ್ಶನ ನೀಡಿದ್ದ ಭಾರತದ ಏಕೈಕ ಬಾಕ್ಸಿಂಗ್ ಪಟು ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಚೇನಂಡ ಸಿ. ಮಾಚಯ್ಯ, ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಕೀತಿಯಂಡ ನಾಣಯ್ಯ, ಕ್ಯಾಪ್ಟನ್ ಧನಂಜಯನ್, ಕ್ಯಾಪ್ಟನ್ ಚಂದ್ರಶೇಖರ್, ಸುಭೇದಾರ್ ದೇಯಂಡ ಮೇದಪ್ಪ, ಸುಭೇದಾರ್ ಕರಿನೆರವಂಡ ಎ. ಚಂಗಪ್ಪ, ಸುಭೇದಾರ್ ಸಂತೋಷ್, ಕೊಡಗು ವೆಲ್ನೆಸ್ ಫೌಂಡೇಷನ್ನ ಸ್ಥಾಪಕಿ ನಿಕ್ಕಿ ಪೊನ್ನಪ್ಪ, ಅಂತರರಾಷ್ಟ್ರೀಯ ಕರಾಟೆ ಪಟು ಚೆಪ್ಪುಡೀರ ಅರುಣ್ ಮಾಚಯ್ಯ, ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿ, ಚೆಪ್ಪುಡೀರ ಪಿ. ಬೋಪಣ್ಣ, ತರಬೇತುದಾರ ರೂಪೇಶ್ಕುಮಾರ್, ಪಿ.ಪಿ. ಶರತ್, ಮಹಿಳಾ ತರಬೇತು ಗಾರರಾದ ಶಮಕಾ ಪರ್ಡೆ ಅವರನ್ನು ಸನ್ಮಾನಿಸಲಾಯಿತು.
ಟ್ರೋಫಿ ದಾನಿಗಳು: ಬಾಕ್ಸರ್ ಐಯಮಂಡ ರವಿ ಜ್ಞಾಪಕಾರ್ಥವಾಗಿ ಸ್ಥಾಪಿಸಿರುವ ಉತ್ತಮ ಬಾಕ್ಸರ್ಗೆ ನೀಡುವ ರೋಲಿಂಗ್ ಟ್ರೋಫಿಯನ್ನು ಕರ್ನಲ್ ಚೋಂದಂಡ ಅಯ್ಯಪ್ಪ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದಿಗಳೊಂದಿಗೆ ನಡೆದ ಕಾದಾಟದಲ್ಲಿ ಹುತಾತ್ಮರಾದ ಬಾಕ್ಸರ್ ಸುಭೇದಾರ್ ವೀರೇಶ್ ಕುರಹಟ್ಟಿ ಅವರ ಜ್ಞಾಪಕಾರ್ಥವಾಗಿ ಕರ್ನಲ್ ಸಿ.ಪಿ. ಮುತ್ತಣ್ಣ ಸ್ಥಾಪಿಸಿರುವ ಭವಿಷ್ಯದ ಭರವಸೆಯ ಬಾಕ್ಸರ್ ಪಟು (ಹುಡುಗರ ವಿಭಾಗ)ಕ್ಕೆ ಟ್ರೋಫಿಗಳನ್ನು ನೀಡಿದರು.
ಈ ಸಂದರ್ಭ ಚೆನೈನ ಸೇನಾ ತಂಡದ ಎಂಎಜಿ (ಮಡ್ರಾಸ್ ಇಂಜಿನಿಯರಿಂಗ್ ಗ್ರೂಪ್) ಬಾಕ್ಸರ್ಗಳ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗುತ್ತು.
ವೇದಿಕೆಯಲ್ಲಿ ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ನ ಅಧ್ಯಕ್ಷ ಕರ್ನಲ್ ಚೋಂದಂಡ ಅಯ್ಯಪ್ಪ, ಉಪಾಧ್ಯಕ್ಷ ಕಳ್ಳಿಚಂಡ ಎಸ್. ಪ್ರಸಾದ್, ಕಾರ್ಯದರ್ಶಿ ಕರ್ನಲ್ ಚೆಪ್ಪುಡೀರ ಪಿ. ಮುತ್ತಣ್ಣ, ಖಜಾಂಚಿ ಐನಂಡ ಕೆ. ಮಂದಣ್ಣ, ನಿರ್ದೇಶಕರು ಗಳಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಚೆಪ್ಪುಡೀರ ಎಂ. ಪೊನ್ನಪ್ಪ, ಮತ್ರಂಡ ಪಿ. ಅಪ್ಪಚ್ಚು, ಬೊಳಿಯಂಗಡ ದಾದು ಪೂವಯ್ಯ, ಚೆಟ್ರುಮಾಡ ತಮ್ಮಯ್ಯ, ಕಾಳಿಮಾಡ ಮೋಟಯ್ಯ, ಕೇಚೆಟ್ಟಿರ ಕಾಮುಣಿ ಪೂಣಚ್ಚ ಹಾಜರಿದ್ದರು.