ಮಡಿಕೇರಿ, ಜ. 16: ಸ್ಥಳೀಯ ಗೋ ಸಂತತಿ, ತಳಿಗಳನ್ನು ರಕ್ಷಿಸುವ ಉದ್ದೇಶ ಹಾಗೂ ಬೀಡಾಡಿ ಜಾನುವಾರುಗಳಿಗೆ ನೆಲೆಕಲ್ಪಿಸುವ ನಿಟ್ಟಿನಲ್ಲಿ ವಿಶ್ವಕರ್ಮ ಸಮುದಾಯ ಜಾಗೃತಾ ಸೇವಾ ಟ್ರಸ್ಟ್ ವತಿಯಿಂದ ತೆರೆಯಲಾಗುತ್ತಿರುವ ಶ್ರೀಕೃಷ್ಣ ಗೋಶಾಲೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಭಾಗಮಂಡಲ ಸನಿಹದ ಚೆಟ್ಟಿಮಾನಿಯಲ್ಲಿ ಕೆದಂಬಾಡಿ ರಘುನಾಥ್ ಅವರು ಭೋಗ್ಯಕ್ಕೆ ನೀಡಿರುವ 6 ಎಕರೆ ಜಾಗದಲ್ಲಿ ಗೋಶಾಲೆ ತಲೆ ಎತ್ತಲಿದೆ. ಸಂಕ್ರಾಂತಿ ಹಬ್ಬವಾದ ನಿನ್ನೆ ಗೋಶಾಲೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಮತಟ್ಟಾಗಿರುವ ಜಾಗಕ್ಕೆ ಪ್ರವೇಶಿಸಲು ಮುಖ್ಯ ರಸ್ತೆಯಿಂದ ಹಿಟಾಚಿ ಯಂತ್ರದ ಮೂಲಕ ರಸ್ತೆ ನಿರ್ಮಿಸಲಾಗಿದೆ. ಜಾಗದ ಒತ್ತಿನಲ್ಲೇ ಇರುವ ಪಾಳುಬಿದ್ದ ಗದ್ದೆಗಳಲ್ಲಿನ ನೀರು ಬಸಿದು(ಮೊದಲ ಪುಟದಿಂದ) ಹೋಗಲು ಅನುಕೂಲವಾಗುವಂತೆ ಚರಂಡಿಗಳನ್ನು ನಿರ್ಮಿಸಲಾಗಿದೆ. ಇನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಶೀಟ್‍ಗಳನ್ನು ಬಳಸಿ ಶೆಡ್‍ಗಳನ್ನು ನಿರ್ಮಿಸಲಾಗುವುದು. ಗದ್ದೆಗಳಲ್ಲಿ ಜಾನುವಾರುಗಳ ಮೇವಿಗಾಗಿ ಹುಲ್ಲಿನ ಬೀಜ ಬಿತ್ತನೆ ಮಾಡಲಾಗುವುದು. ಬೇಸಿಗೆ ಕಾಲದಲ್ಲಿ ಮಾತ್ರ ಜಾನುವಾರುಗಳನ್ನು ಗದ್ದೆಯಲ್ಲಿ ಮೇಯಲು ಬಿಡಲಿದ್ದು, ಮಳೆಗಾಲದಲ್ಲಿ ಶೆಡ್‍ಗಳಲ್ಲಿ ಬಿಡಲಾಗುವುದೆಂದು ಟ್ರಸ್ಸ್‍ನ ಅಧ್ಯಕ್ಷ ಹರೀಶ್ ಆಚಾರ್ಯ ತಿಳಿಸಿದರು. ಗದ್ದೆ ಬಳಿಯಲ್ಲಿ ಕೆರೆಯೊಂದಿದ್ದು, ಜಾನುವಾರುಗಳಿಗೆ ಬೇಕಾಗುವಷ್ಟು ನೀರಿನ ಸೌಲಭ್ಯವಿದೆ. ಜಾಗದ ಸುತ್ತಲೂ ಬೇಲಿ ನಿರ್ಮಾಣ ಮಾಡಬೇಕಿದೆ. ಜೊತೆಗೆ ಮೇಯಲು ಬಿಡುವ ಜಾನುವಾರುಗಳಿಗೆ ವಿಶ್ರಾಂತಿ ಪಡೆಯಲು ಟೆಂಟ್‍ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಗೋಶಾಲೆಗೆ ಜಾನುವಾರುಗಳನ್ನು ಸೇರಿಸಲು ಇಚ್ಚಿಸುವವರು ಈಗಾಗಲೇ ಕರೆತಂದು ಬಿಡಬಹುದು. ರೈತರು ಸಲಹಿರುವ ವಯಸ್ಸಾದ ಜಾನುವಾರುಗಳನ್ನು ರಸ್ತೆಗೆ, ಕಾಡಿಗಟ್ಟದೆ ತಂದು ಗೋಶಾಲೆಗೆ ಬಿಟ್ಟರೆ ಬದುಕಿರುವಷ್ಟು ಸಮಯದವರೆಗೆ ಪಾಲನೆ ಮಾಡಲಾಗುವುದು. ನಗರ ವ್ಯಾಪ್ತಿಯಲ್ಲಿ ಸುಳಿದಾಡುತ್ತಿರುವ ಬೀಡಾಡಿ ಜಾನುವಾರುಗಳನ್ನು ಹಿಡಿದು ಸೇರಿಸಲು ನಗರಸಭೆ ಹಾಗೂ ಪೊಲೀಸ್ ಇಲಾಖೆಯವರಿಗೆ ಕೋರಿಕೆ ಸಲ್ಲಿಸಿರುವುದಾಗಿ ಹರೀಶ್ ತಿಳಿಸಿದರು.
ಗೋಶಾಲೆ ನಿರ್ಮಿಸಲು ಸಾಕಷ್ಟು ಖರ್ಚು - ವೆಚ್ಚಗಳಿದ್ದು, ದಾನಿಗಳು ಶೀಟ್, ಕಂಬಗಳು, ಬೇಲಿ ತಂತಿ, ಹುಲ್ಲು ಈ ರೀತಿಯಾಗಿ ನೆರವು ನೀಡಿದರೆ ಸ್ವೀಕರಿಸಲಾಗುವುದು. ಅಲ್ಲದೆ, ಶಾಲೆಗೆ ವಿದ್ಯುತ್ ಅವಶ್ಯಕತೆಯಿದ್ದು, ಸದ್ಯದ ಮಟ್ಟಿಗೆ ಯಾರಾದರೂ ಹಳೆಯ ಜನರೇಟರ್‍ಗಳಿದ್ದರೆ ನೀಡಿ ಸಹಾಯ ಮಾಡಿದರೆ ಅನುಕೂಲವಾಗಲಿದೆ. ದಾನಿಗಳು ಅವರ ಸಂಬಂಧಿಕರ ಹೆಸರಿನಲ್ಲಿ ಶೆಡ್‍ಗಳನ್ನು ನಿರ್ಮಿಸಲು ಮುಂದಾದಲ್ಲಿ ಅಂತಹವರ ಹೆಸರಿನಲ್ಲಿಯೇ ಶೆಡ್‍ಗಳನ್ನು ನಿರ್ಮಿಸಲಾಗುವುದೆಂದು ಹೇಳಿದರು. ನೆರವು ನೀಡಬಯಸುವವರು ಹಾಗೂ ಮಾಹಿತಿಗಾಗಿ ಮೊ. 9164857163 ಅನ್ನು ಸಂಪರ್ಕಿಸಬಹುದಾಗಿದೆ.