ಮಡಿಕೇರಿ, ಜ.16: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ, ತಾ. 17ರಂದು (ಇಂದು) ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಗಾಂಧಿಮೈದಾನದಲ್ಲಿ ಜನಜಾಗೃತಿ ಸಭೆ ಆಯೋಜಿಸಲಾಗಿದೆ. ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಬೃಹತ್ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಮಾತನಾಡಲಿದ್ದಾರೆ.
ಅಲ್ಲದೆ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು., ಮೇಲ್ಮನೆ ಸದಸ್ಯರು, ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಬಿಜೆಪಿ ಪ್ರಮುಖರು ನಗರದ ಮನೆಗಳು ಹಾಗೂ ಅಂಗಡಿಗಳಿಗೆ ತೆರಳಿ ಸಭೆಯಲ್ಲಿ ನಾಗರಿಕರು ಪಾಲ್ಗೊಳ್ಳುವಂತೆ ಸಂಪರ್ಕ ಅಭಿಯಾನ ನಡೆಸಿದರು. ಪೊಲೀಸ್ ಇಲಾಖೆಯಿಂದ ಸಂಘಟಕರಿಗೆ ಷರತ್ತುಗಳೊಂದಿಗೆ ಅನುಮತಿ ನೀಡಿದ್ದು, ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಸಹಕರಿಸುವಂತೆ ಸಲಹೆಯೊಂದಿಗೆ, ವ್ಯಾಪಕ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ಗೊತ್ತಾಗಿದೆ.