ಮಡಿಕೇರಿ ಜ.17 : ಮಾರಕ ರೋಗ ಪೋಲಿಯೋ ನಿರ್ಮೂಲನೆಯ ಹಿನ್ನೆಲೆಯಲ್ಲಿ ತಾ.19 ರಂದು ವರ್ಷದ ಪ್ರಥಮ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸುವಂತೆ ಸಂತನೋತ್ಪತ್ತಿ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ (ಆರ್‍ಸಿಹೆಚ್‍ಓ) ಡಾ. ಬಿ. ಗೋಪಿನಾಥ್ ಮನವಿ ಮಾಡಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 39,466 ಮಕ್ಕಳಿದ್ದು, ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 34,810 ಮಕ್ಕಳು ಹಾಗೂ ನಗರ ಪ್ರದೇಶದಲ್ಲಿ 4,656 ಮಕ್ಕಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 645 ವಲಸೆ ಪ್ರದೇಶಗಳನ್ನು ಗುರುತಿಸಿದ್ದು, ಒಟ್ಟು ವಲಸಿಗರ ಜನಸಂಖ್ಯೆ 1,31,607. ಇವರಲ್ಲಿ 5 ವರ್ಷದೊಳಗಿನ ಒಟ್ಟು 9,337 ಮಕ್ಕಳನ್ನು ಗುರುತಿಸಲಾಗಿದ್ದು, ಈ ಮಕ್ಕಳಿಗೆ ಪಲ್ಸ್ ಪೆÇೀಲಿಯೋ ಹಾಕಲು 6 ಸಂಚಾರಿ ತಂಡವನ್ನು ರಚಿಸಲಾಗಿದೆ. ಇವರು ದುರ್ಗಮ ಪ್ರದೇಶಗಳನ್ನು ಗುರಿಯಾಗಿಸಿ ಆ ಪ್ರದೇಶಗಳಲ್ಲಿ 3 ದಿನಗಳು ಮಕ್ಕಳಿಗೆ ಲಸಿಕೆಯನ್ನು ನೀಡುತ್ತಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ 466 ಬೂತ್: ಜಿಲ್ಲೆಯಾದ್ಯಂತ ಒಟ್ಟು 466 ಬೂತ್‍ಗಳು, 21 ಟ್ರಾನ್ಸಿಟ್ ಬೂತ್‍ಗಳು ಹಾಗೂ 6 ಸಂಚಾರಿ ತಂಡಗಳು ಕಾರ್ಯನಿರ್ವಹಿಸಲಿವೆ. ಈ ಸಂಚಾರಿ ತಂಡಗಳು ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ತಲಾ 2ರಂತೆ ಕಾರ್ಯನಿರ್ವಹಿಸಲಿವೆಯೆಂದು ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ ಲಸಿಕಾ ಬೂತ್‍ಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 1,960 ಲಸಿಕೆ ಹಾಕುವವರನ್ನು 87 ಮಂದಿ ಮೇಲ್ವಿಚಾರಕರನ್ನು ನಿಯೋಜಿಲಾಗಿದೆ. 2 ನೇ ಹಾಗೂ 3ನೇ ದಿನದಂದು ಮನೆ ಮನೆ ಭೇಟಿ ನೀಡಲು 980 ತಂಡಗಳನ್ನು ರಚಿಸಲಾಗಿದೆ. ಕಾರ್ಯಕ್ರಮದಲ್ಲಿ ಲಸಿಕೆ ನೀಡಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ನೀಡಲು ಅವಶ್ಯಕತೆ ಇರುವ ಕಡೆಗಳಲ್ಲಿ ತರಬೇತಿಯಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ನಗರ ಪ್ರದೇಶದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳು, ಪ್ರವಾಸಿ ಸ್ಥಳಗಳು, ಜನ ಸಂದಣಿ ಹೆಚ್ಚು ಇರುವ ಕಡೆ ಟ್ರಾನ್ಸಿಟಿ ಬೂತ್‍ಗಳನ್ನು ತೆರೆಯಲಾಗಿದ್ದು, ಲಸಿಕಾ ಕಾರ್ಯಕರ್ತೆಯರು ಇಂತಹ ಪ್ರದೇಶದಲ್ಲಿ ಕಂಡು ಬರುವ ಮಕ್ಕಳಿಗೆ ಲಸಿಕೆಯನ್ನು ನೀಡಲಿದ್ದಾರೆ. ಅಲ್ಲದೇ, ಭಾನುವಾರದಂದು ಸಂತೆ ನಡೆಯುವ ಸ್ಥಳಗಳಲ್ಲಿಯೂ ಸಹ ಟ್ರಾನ್ಸಿಟ್ ಬೂತ್‍ಗಳನ್ನು ತೆರೆದು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು. ಅಲ್ಲದೆ, ಕಾರ್ಮಿಕರು ಹೆಚ್ಚಾಗಿ ಇರುವ ತೋಟಗಳನ್ನು ಗುರಿಯಾಗಿಸಿ, ಮನೆ-ಮನೆ ಭೇಟಿ ನೀಡಿ ಅಲ್ಲಿ ಲಸಿಕೆ ಹಾಕದೇ ಇರುವ ಮಕ್ಕಳಿಗೆ ಲಸಿಕೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾ ವ್ಯಾಪ್ತಿಯ ಬಸ್‍ನಿಲ್ದಾಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿನ ಪಲ್ಸ್ ಪೆÇೀಲಿಯೋ ಕೇಂದ್ರಗಳು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿವೆ. ರೋಟರಿ, ಲಯನ್ಸ್, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರ್‍ಟಿಒ, ಕೆಎಸ್‍ಆರ್‍ಟಿಸಿ, ಪೆÇಲೀಸ್ ಇಲಾಖೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪಲ್ಸ್ ಪೆÇೀಲಿಯೋ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ ಎಂದರು.

ಕೊಡಗು ಜಿಲ್ಲೆಯ ಸಾರ್ವಜನಿಕರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ದಿನದಂದು ತಮ್ಮ ಮನೆಯಲ್ಲಿರುವ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಮನವಿ ಮಾಡಿದ ಡಾ. ಬಿ. ಗೋಪಿನಾಥ್ ತಮ್ಮ ಮನೆ ಸಮೀಪವಾಗಲಿ ಅಥವಾ ತಮ್ಮ ತೋಟದಲ್ಲಿ ಕಾರ್ಮಿಕರ ಮಕ್ಕಳೇ ಇರಲಿ ಹಾಗೂ ತಮ್ಮ ಗಮನಕ್ಕೆ ಬರುವ ಯಾವುದೇ ಮಗುವನ್ನು ಹತ್ತಿರದ ಲಸಿಕಾ ಬೂತ್‍ಗಳಲ್ಲಿ ಲಸಿಕೆಯನ್ನು ಹಾಕಿಸಿಕೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ಪೋಲಿಯೋ ಮೇಲಿನ ಗೆಲುವನ್ನು ಮುಂದುವರೆಸಲು ಸಹಕರಿಸುವಂತೆ ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಭಾರತ ಪೆÇೀಲಿಯೋ ಮುಕ್ತ ದೇಶವಾಗಿದ್ದರು ಮುಂಜಾಗ್ರತಾ ಕ್ರಮವಾಗಿ ಪ್ರತಿವರ್ಷ ಪಲ್ಸ್ ಪೆÇೀಲಿಯೋ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಸಾರ್ವಜನಿಕರು ತಮ್ಮ ಮನೆಯಲ್ಲಿರುವ 5 ವರ್ಷದೊಳಗಿನ ಮಕ್ಕಳನ್ನು ಪೋಲಿಯೋ ಬೂತ್‍ಗಳಿಗೆ ಕರೆತಂದು ತಪ್ಪದೇ ಪೋಲಿಯೋ ಲಸಿಕೆಯನ್ನು ಹಾಕಿಸುವಂತೆ ಮನವಿ ಮಾಡಿದರು.

ಮಡಿಕೇರಿ ರೋಟರಿ ಅಧ್ಯಕ್ಷ ರತನ್ ತಮ್ಮಯ್ಯ ಮಾತನಾಡಿ, ಪ್ರತಿವರ್ಷ ಪಲ್ಸ್ ಪೋಲಿಯೋ ಕಾರ್ಯಕ್ರಮಗಳಿಗೆ ರೋಟರಿ ಮಿಸ್ಟಿಹಿಲ್ಸ್ ಪೋಲಿಯೋ ಕಾರ್ಯಕ್ರಮಗಳಿಗೆ ಸರಕಾರದೊಂದಿಗೆ ಸಹಕಾರ ನೀಡುತ್ತಿದ್ದು, ಅದರಂತೆ ಪಲ್ಸ್ ಪೋಲಿಯೋ ಕಾರ್ಯಕ್ರಮದಂದು ಜಿಲ್ಲೆಯಲ್ಲಿರುವ ಎಲ್ಲಾ ಬೂತ್‍ಗಳಿಗೆ ಭೇಟಿ ನೀಡಿ ಬೂತ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಮಧ್ಯಾಹ್ನನ ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿದೆ ಎಂದರು.

ಮಡಿಕೇರಿ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಎಲ್. ಮೋಹನ್ ಕುಮಾರ್ ಮಾತನಾಡಿ, ವೀರಾಜಪೇಟೆ ತಾಲೂಕಿನ ಎಲ್ಲಾ ಹಾಡಿಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಜೊತೆಗೆ ಲಯನ್ಸ್ ಕ್ಲಬ್‍ನಿಂದ ಯುವಕರ ತಂಡವನ್ನು ರಚಿಸಿ ಹಾಡಿಗಳಲ್ಲಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಲಾಗುವುದೆಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ರೋಟರಿ ಮಿಸ್ಟಿಹಿಲ್ಸ್‍ನ ಅಧ್ಯಕ್ಷ ಎಮ್.ಆರ್. ಜಗದೀಶ್ ಉಪಸ್ಥಿತರಿದ್ದರು.