ಮಡಿಕೇರಿ, ಜ. 16 : ಹೊರರಾಜ್ಯದವರು ಕೊಡಗಿನಲ್ಲಿ ತಂದು ಮಾರಾಟ ಮಾಡುತ್ತಿರುವ ನಕಲಿ ಚಾಕಲೇಟ್ ದಂಧೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಕೊಡಗಿನ ಹೆಸರು ಹಾಳಾಗುತ್ತಿದ್ದು, ಕೊಡಗಿನಲ್ಲಿರುವ ನೈಜ ಹೋಂ ಮೇಡ್ ತಿನಿಸುಗಳ ತಯಾರಕರಿಗೆ ತೀವ್ರ ಹೊಡೆತ ಬಿದ್ದಿದೆ ಎಂದು ಮಡಿಕೇರಿ ರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ. ಕೆಲವು ಕಡೆ ಮಾರಾಟವಾಗುತ್ತಿರುವ ಹೋಂ ಮೇಡ್ ವೈನ್ ಹೆಸರಿನ ರಾಸಾಯನಿಕ ದ್ರವದ ಕುರಿತು ಕೂಡ ಸಮಗ್ರ ತನಿಖೆ ಕೈಗೊಂಡು ಇವುಗಳ ಮೂಲ, ಇದನ್ನು ಕೊಡಗಿನಲ್ಲಿ ಮಾರಾಟ ಮಾಡುತ್ತಿರುವ ಜಾಲಗಳು ಯಾವುದು ಮತ್ತು ಇಲ್ಲಿಂದ ಬಂದ ಆದಾಯವನ್ನು ತೆರಿಗೆ ತಪ್ಪಿಸಿ ಯಾವ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಕುರಿತು ತನಿಖೆಯಾಗಬೇಕು ಎಂದು ಅಧ್ಯಕ್ಷ ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.
ಇಲ್ಲಿಯವರೆಗೆ ನಡೆದಿರುವ ದಂಧೆಯ ಕುರಿತು ಎಲ್ಲ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗೆ ಮಡಿಕೇರಿ ರಕ್ಷಣಾ ವೇದಿಕೆ ನೀಡಿದ್ದರೂ ಏನೂ ಕ್ರಮ ಕೈಗೊಳ್ಳದೆ ಜನರ ಆರೋಗ್ಯದ ಜೊತೆಯಲ್ಲಿ ಚೆಲ್ಲಾಟವಾಡುತ್ತಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ನಕಲಿ ಚಾಕಲೇಟ್ ದಂಧೆ ಕುರಿತು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸಂಬಂಧಿಸಿದವರ ಗಮನ ಸೆಳೆದ ಬಗ್ಗೆ ಹಾಗೂ ಅವರ ನಿಲುವನ್ನು ಶ್ಲಾಘಿಸಿದ್ದಾರೆ.