ಮಡಿಕೇರಿ, ಜ. 16: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಾನಿಪುರದ ಸರ್ಕಾರಿ ಜಾಗದಲ್ಲಿ ಕಳೆದ ಎರಡು ದಶಕಗಳಿಂದ ಕೃಷಿ ನಡೆಸಿಕೊಂಡು ಬದುಕು ಕಟ್ಟಿಕೊಂಡಿರುವ 70ಕ್ಕೂ ಹೆಚ್ಚಿನ ಕೃಷಿಕರ ಜಮೀನನ್ನು ತೆರವು ಗೊಳಿಸಿರುವÀ ಕ್ರಮವನ್ನು ವಿರೋಧಿಸಿ, ಫೆ. 1 ರಿಂದ ಮಡಿಕೇರಿಯ ಗಾಂಧಿ ಮಂಟಪದ ಎದುರು ಅಹೋರಾತ್ರಿ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ, ಕಳೆದ ಎರಡು ಮೂರು ದಿನಗಳ ಅವಧಿಯಲ್ಲಿ 6ನೇ ಹೊಸಕೊಟೆ ಗ್ರಾಮದ ಅಂದಾನಿಪುರದ ಅಂದಾಜು 80 ಎಕರೆ ಕೃಷಿ ಜಾಗವನ್ನು ‘ಪೊಲೀಸ್ ತರಬೇತಿ ಕೇಂದ್ರಕ್ಕೆ’ ಮೀಸಲಿಟ್ಟ ಜಾಗವೆನ್ನುವ ಕಾರಣ ನೀಡಿ, ನೂರಾರು ಪೊಲೀಸರನ್ನು ಬಳಸಿ ತೆರವುಗೊಳಿಸಲಾಗಿದೆ ಎಂದು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಪೊಲೀಸ್ ತರಬೇತಿ ಕೇಂದ್ರಕ್ಕೆ ಜಾಗ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಬಡ ರೈತರು ಕೃಷಿ ಮಾಡಿರುವ ಜಾಗವನ್ನು ಕಿತ್ತುಕೊಳ್ಳುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

ಬಡವರ ಭೂಮಿಯ ಹಕ್ಕಿಗಾಗಿ ಈ ಹಿಂದೆ ದಿಡ್ಡಳ್ಳಿಯಲ್ಲಿ ದೊಡ್ಡ ಪ್ರಮಾಣದ ಹೋರಾಟವನ್ನು ಕೈಗೊಳ್ಳಲಾಗಿತ್ತು. ಅಲ್ಲಿಯ ನಿವಾಸಿಗಳಿಗೆ ಕನಿಷ್ಟ 3 ಎಕರೆ ಜಾಗ ಮಂಜೂರು ಮಾಡಬೇಕೆಂದು ಒತ್ತಾಯಿಸಲಾಗಿತ್ತು. ಆದರೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಅವರನ್ನು ಮೂರು ಮುಕ್ಕಾಲು ಸೆಂಟ್ ಜಾಗಕ್ಕೆ ಸೀಮಿತಗೊಳಿಸಿದ್ದಾರೆ. ಇದೀಗ ಆ ಮಂದಿ ಜಾಗವೂ ಇಲ್ಲದೆ, ಕೆಲಸವೂ ಇಲ್ಲದೆ ಬೀದಿ ಪಾಲಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನೆಲೆ ಜಿಲ್ಲೆಯ ಎಲ್ಲಾ ಬಡ ಜನರ ಭೂಮಿಯ ಹಕ್ಕಿಗಾಗಿ ದಿಡ್ಡಳ್ಳಿ ಹೋರಾಟಕ್ಕಿಂತಲೂ ದೊಡ್ಡದಾದ ಹೋರಾಟಕ್ಕೆ ಕರ್ನಾಟಕ ರೈತ ಸಂಘ ಚಿಂತನೆ ನಡೆಸಿದ್ದು, ಇದರ ಪ್ರಥಮ ಹಂತವಾಗಿ ಫೆ. 1 ರಿಂದ ಮಡಿಕೆÉೀರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮಿಕೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಇ. ಸಣ್ಣಪ್ಪ, ಜಿಲ್ಲಾ ಸಂಚಾಲಕ ಎಸ್.ಆರ್. ಮಂಜುನಾಥ್, 6ನೇ ಹೊಸಕೋಟೆಯ ಹೆಚ್.ಕೆ. ಸುರೇಶ್ ಹಾಗೂ ಹೆಚ್.ಎಸ್. ಶಿವಪ್ಪ ಉಪಸ್ಥಿತರಿದ್ದರು.