ಚೆಟ್ಟಳ್ಳಿ, ಜ. 17: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈರಳೆವಳಮುಡಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಅನುದಾನ ಹಾಗೂ ಉದ್ಯೋಗ ಖಾತರಿಯಡಿ ಒಟ್ಟು ಸೇರಿ ಸುಮಾರು ರೂ. 25 ಲಕ್ಷದ ಕಾಂಕ್ರಿಟ್ ರಸ್ತೆಯನ್ನು ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಊರಿನವರು ಸೇರಿ ಉದ್ಘಾಟಿಸಲಾಯಿತು.

ಬಲ್ಲಾರಂಡ ಮಣಿ ಉತ್ತಪ್ಪ ಅವರ ರೂ. 6 ಲಕ್ಷದ ತಾಲೂಕು ಪಂಚಾಯಿತಿ ಅನುದಾನ ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಪೊರಿಮಂಡ ಧನು ದೇವಯ್ಯ ಅವರ ಮುತುವರ್ಜಿಯಲ್ಲಿ ಉದ್ಯೋಗ ಖಾತರಿಯಡಿ ಒಟ್ಟು ಸೇರಿ ರೂ. 25 ಲಕ್ಷ ವೆಚ್ಚದಲ್ಲಿ ಈರಳೆವಳಮುಡಿ ಗ್ರಾಮದಿಂದ ಭೂತನಕಾಡು ಸಂಪರ್ಕ ರಸ್ತೆಗೆ ಡಾಮರೀಕರಣ ಮಾಡಲಾಗಿದೆ.

ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, 7 ವರ್ಷಗಳ ಹಿಂದೆ ಅಪ್ಪಚ್ಚು ರಂಜನ್ ಶಾಸಕರಾಗಿದ್ದ ಸಮಯದಲ್ಲಿ ತಾನು ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದು, ರೂ. 1 ಕೋಟಿ ಅನುದಾನದಲ್ಲಿ ಇದೇ ರಸ್ತೆಗೆ ಡಾಮರೀಕರಣ ಮಾಡಲಾಗಿದ್ದು, ರಸ್ತೆಗಳು ಅತಿವೃಷ್ಟಿಯಿಂದಾಗಿ ಸಂಪೂರ್ಣ ಹಾಳಾಗಿದ್ದು ತಾಲೂಕು ಪಂಚಾಯಿತಿ ಅನುದಾನ ಹಾಗೂ ಉದ್ಯೋಗ ಖಾತರಿ ಹಣದಲ್ಲಿ ಕಾಂಕ್ರಿಟ್ ರಸ್ತೆ ಮಾಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಶಾಸಕರ ರೂ. 1 ಕೋಟಿ ಅನುದಾನದಲ್ಲಿ ಗ್ರಾಮದ ಹಲವು ಕಾಮಗಾರಿಗಳಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ, ಪೊರಿಮಂಡ ಧನು ದೇವಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅಡಿಕೇರ ಜಯ ಮುತ್ತಪ್ಪ, ಚೋಳಪಂಡ ನಾಣಯ್ಯ, ಗುತ್ತಿಗೆದಾರ ಅಂಬುದಾಸ್ ಗ್ರಾಮಸ್ಥರು ಹಾಜರಿದ್ದರು.