ಮಡಿಕೇರಿ, ಜ. 17: ಪೌರತ್ವ ತಿದ್ದುಪಡಿ ಕಾಯ್ದೆ - ಅಂಂ ಗೆ ಕೇಂದ್ರ ಸರಕಾರ ತಿದ್ದುಪಡಿ ಮಾಡಿದ್ದು; ಇದು ಯಾರದೇ ಪೌರತ್ವವನ್ನು ಕಿತ್ತುಕೊಳ್ಳು ವದಿಲ್ಲ. ಬದಲಿಗೆ ನೊಂದವರಿಗೆ, ಶೋಷಿತರಿಗೆ ಪೌರತ್ವ ನೀಡುವದಾಗಿದೆ. ಈ ಬಗ್ಗೆ ಅಲ್ಪಸಂಖ್ಯಾತರು ಸೇರಿದಂತೆ ಯಾರೂ ಕೂಡ ಆತಂಕ ಪಡ ಬೇಕಾಗಿಲ್ಲ ಎಂದು ಭಾರತೀಯ ಜನತಾ ಪಕ್ಷದ ಪ್ರಮುಖರು ಪ್ರತಿಪಾದಿಸಿದ್ದಾರೆ.ಬಿಜೆಪಿ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಅವರು; ಪೌರತ್ವ ಕಾಯ್ದೆ ಜಾರಿಗೆ ಬಂದರೆ ಮುಸಲ್ಮಾನರನ್ನು ದೇಶದಿಂದ ಹೊರಹಾಕ್ತಾರೆ; ಜೈಲಿಗೆ ಹಾಕುತ್ತಾರೆ ಎಂದು ಜಾತ್ಯತೀತ ವಾದಿಗಳು ಭಯ ಹುಟ್ಟಿಸುತ್ತಿದ್ದಾರೆ. ಪೌರತ್ವ ಕಾಯ್ದೆ ಪೌರತ್ವವನ್ನು ಕಿತ್ತು ಕೊಳ್ಳುವದಲ್ಲ; ಪೌರತ್ವ ಕೊಡುವ ಬಿಲ್ ಆಗಿದೆ. ಸಂವಿಧಾನದಲ್ಲಿ ಪ್ರಧಾನಿ, ಗೃಹ ಸಚಿವ, ಮುಖ್ಯ ಮಂತ್ರಿಗಳ ಹುದ್ದೆಗಳಿಗೆ ವಿಶೇಷವಾದ ಗೌರವವಿದೆ. ಅಂತಹವರು ಕೂಡ ಯಾವದೇ ತೊಂದರೆ ಇಲ್ಲವೆಂದು ಹೇಳಿದರೂ ಜಾತ್ಯತೀತವಾದಿಗಳು ಕೇಳುತ್ತಿಲ್ಲ ವೆಂದಾದರೆ ಏನು ಹೇಳಬೇಕು.? ಪ್ರತಿಭಟನೆಯ ಹೆಸರಲ್ಲಿ ಜಾತ್ಯತೀತ ವಾದಿಗಳು ಒಂದಾಗುತ್ತಿರುವ ಕಾರಣಗಳ ಬಗ್ಗೆ ತಿಳಿದುಕೊಳ್ಳ ಬೇಕಾಗಿದೆ ಎಂದು ಹೇಳಿದರು.

ತ್ರಿವಳಿ ತಲಾಖ್, ರಾಮಮಂದಿರ ತೀರ್ಪು ಬಂದಾಗ ಎಲ್ಲರೂ ಶಾಂತಿ ಕಾಪಾಡಿದ್ದಾರೆ. ಆದರೆ ಕೆಲವು ಅತೃಪ್ತ ಆತ್ಮಗಳು ಘರ್ಷಣೆಗೆ ಕಾಯ್ತಾ ಇದ್ದವು. ಇದೀಗ ಈ ಕಾಯ್ದೆಯನ್ನು ಅಸ್ತ್ರ ವಾಗಿಟ್ಟುಕೊಂಡು

(ಮೊದಲ ಪುಟದಿಂದ) ಆತ್ಮಗಳು ಒಂದಾಗಿ ಪ್ರತಿಭಟನೆ ಮಾಡುತ್ತಿವೆ ಎಂದು ವ್ಯಂಗ್ಯ ಮಾಡಿದರು.

ದೇಶದಲ್ಲಿರುವ ಯಾವದೇ ಮುಸ್ಲಿಮರಿಗೆ ಈ ಕಾಯ್ದೆಯಿಂದ ತೊಂದರೆ ಆಗುವದಿಲ್ಲ ಎಂದು ಪುನರುಚ್ಚಿಸಿದ ಅವರು, ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಬಂದು ಕಾಫಿ ತೋಟಗಳಲ್ಲಿ ಸೇರಿಕೊಂಡಿರುವ ಬಾಂಗ್ಲಾದೇಶಿಗರಿಗೆ ಪೌರತ್ವ ಸಿಗಲಿಕ್ಕಿಲ್ಲ. ನಾವು ನಮ್ಮವರ ರಕ್ಷಣೆ ಮಾಡದೆ ಪರಕೀಯರನ್ನು ರಕ್ಷಿಸಬೇಕಾ? ಎಂದು ಪ್ರಶ್ನಿಸಿದರು. ಯಾರೂ ಎಷ್ಟೇ ಹೋರಾಟ ಮಾಡಿದರೂ ಕಾಯ್ದೆ ಜಾರಿಗೆ ಬಂದೇ ಬರುತ್ತದೆ. ಇಲ್ಲೇ ಹುಟ್ಟಿ ಬೆಳೆದ ಮುಸ್ಲಿಮರಿಗೆ ಭಾರತೀಯ ಎಂಬ ಪೌರತ್ವವನ್ನು ಶೇ. 80 ರಷ್ಟಿರುವ ಹಿಂದೂಗಳು ಕೊಟ್ಟಾಗ ಈಗ ಪ್ರತಿಭಟನೆ ಮಾಡುತ್ತಿರುವ ಮುಸ್ಲಿಮರು ದೇಶಪ್ರೇಮಿಗಳ ಮುಂದೆ; ಬಿಜೆಪಿ ಮುಂದೆ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಬರಲಿದೆ ಎಂದು ಕಿವಿಮಾತು ಹೇಳಿದರು.

ವಲಸಿಗರಿಗೆ ಆಶ್ರಯ ಕೊಟ್ಟು ನಮ್ಮ ದೇಶ ಹಾಳಾಗಿ ಹೋಗಿದೆ. ಇಲ್ಲಿಯ ನೆಲ, ಜಲವನ್ನು ಸೇವಿಸುತ್ತಾ ಈ ಮಣ್ಣನ್ನು ಮುಂದಿನ ಪೀಳಿಗೆಗೆ ಉಳಿಸೋಣ. ಭಾರತೀಯ ಎಂದು ಹೇಳಿಕೊಳ್ಳೋಣ ಎಂದು ಅವರು ಹೇಳಿದರು.

ನೊಂದವರಿಗೆ ಪೌರತ್ವ

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಹಿಂದೆ ಹೊರದೇಶದಿಂದ ವಲಸೆ ಬಂದವರಿಗೆ ಪೌರತ್ವ ನೀಡಲು 12 ವರ್ಷ ಕಾಲಾವಕಾಶ ಬೇಕಿತ್ತು. ಇದೀಗ ಕಾಯ್ದೆ ತಿದ್ದುಪಡಿಯಿಂದ 5 ವರ್ಷಕ್ಕೂ ಪೌರತ್ವ ನೀಡಬಹುದಾಗಿದೆ. ಅಪ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೂ ಶೋಷಣೆ ಮಾಡಿದ ಹಿನ್ನೆಲೆಯಲ್ಲಿ 2ಲಕ್ಷಕ್ಕೂ ಅಧಿಕ ಮಂದಿ ಉಟ್ಟಬಟ್ಟೆಯಲ್ಲಿ ಕಣ್ಣೀರು ಹಾಕಿಕೊಂಡು ಭಾರತಕ್ಕೆ ಮರಳಿದ್ದಾರೆ. ಇಂದಿಗೂ ಅವರಿಗೆ ಪೌರತ್ವ ಸಿಕ್ಕಿಲ್ಲ. ಅಂತಹ ನೊಂದವರಿಗೆ ಪೌರತ್ವ ನೀಡುವ ಸಲುವಾಗಿ ತಿದ್ದುಪಡಿ ಮಾಡಲಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ನಮ್ಮ ದೇಶದಲ್ಲಿ ಇಟಲಿ ಪ್ರಜೆಗೆ, ಟಿಬೆಟ್‍ನ ದಲೈಲಾಮಾಗೆ, ಪಾಕ್‍ನ ಅದ್ನಾನ್‍ಸಮಿ ಸೇರಿದಂತೆ ಪಾಕಿಸ್ತಾನ ದಿಂದ ಬಂದಿರುವ 2830ಕ್ಕೂ ಅಧಿಕ ಮಂದಿಗೆ, ಅಪ್ಘಾನ್‍ನ 912, ಬಾಂಗ್ಲಾದೇಶದ 172 ಮಂದಿಗೆ ಪೌರತ್ವ ನೀಡಲಾಗಿದೆ. ಆದರೆ ಈಗ ನೊಂದವರಿಗೆ ಪೌರತ್ವ ನೀಡಲು ತಿದ್ದುಪಡಿ ತಂದರೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಪೆಟ್ಟಿಗೆಯಲ್ಲ

ಈ ಕಾಯ್ದೆಯಿಂದ ಓರ್ವ ಮುಸಲ್ಮಾನನಿಗೂ ತೊಂದರೆ ಯಾಗುವದಿಲ್ಲ. ಮುಸಲ್ಮಾನರು ಕಾಂಗ್ರೆಸ್‍ಗೆ ಮತ ಹಾಕುವ ಮತಪೆಟ್ಟಿಗೆ ಆಗಬಾರದು. ಯಾವದು ಸರಿ - ತಪ್ಪು ಎಂಬದನ್ನು ಯೋಚನೆ ಮಾಡಬೇಕು; ಗುಲಾಮತನ ಸರಿಯಲ್ಲವೆಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮಾತು ಕೇಳುವದೇ ಒಂದು ಅಪರಾಧವೆಂದು ಹೇಳಿದ ಅವರು; ಉದ್ದೇಶಪೂರ್ವಕ ವಾಗಿ ತಪ್ಪು ಮಾಡುತ್ತಿದ್ದಾರೆ. ಮುಸ್ಲಿಮರು ಅಬ್ದುಲ್ ಕಲಾಂ, ಮಹಮ್ಮದ್ ರಫಿ, ಬಿಸ್ಮಿಲ್ಲಾಖಾನ್‍ರಂತೆ ಆಗಬೇಕೇ ವಿನಃ ಕಾಂಗ್ರೆಸ್ಸಿಗರ ಮಾತು ಕೇಳಿ ತಪ್ಪಿತಸ್ತರಾಗಬಾರದೆಂದರು.

ಈ ಕಾಯ್ದೆ ಸಂವಿಧಾನ ವಿರೋಧಿಯಲ್ಲ; ಸಂವಿಧಾನದ ಪರಿಚ್ಛೇದ 14ರಲ್ಲಿ ಸಮಾನತೆಯನ್ನು ಸಾರುತ್ತದೆ. ಈ ದೇಶ ಯಾರಿಗೆ ಸಮಾನತೆ ಕೊಟ್ಟಿಲ್ಲ ಎಂದು ಪ್ರಶ್ನಿಸಿ ಅವರು; ಪಾಕಿಸ್ತಾನಕ್ಕೆ ಸಮಾನತೆ ಕೊಡಬೇಕೆ? ಇದು ಈ ದೇಶಕ್ಕೆ ಸೇರಿದ ಸಂವಿಧಾನ, ಇಷ್ಟೂ ಕೂಡ ಕಾಂಗ್ರೆಸ್ಸಿಗರಿಗೆ ತಿಳಿದಿಲ್ಲವೆಂದಾದರೆ ನಾಚಿಕೆಯಾಗಬೇಕು. ಇದು ಮಾನವೀಯ ಕಾನೂನು ದುಃಖ, ಕಷ್ಟದಲ್ಲಿರುವ, ನೊಂದವರ ಪರವಾದ ಕಾನೂನೆಂದು ಹೇಳಿದರು.

ಗೊಂದಲ ಸೃಷ್ಟಿಸುವ ಕೆಲಸ

ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು; 2014ಕ್ಕಿಂತ ಹಿಂದೆ ವಲಸೆ ಬಂದವರಿಗೆ ಪೌರತ್ವ ಸಿಕ್ಕಿಲ್ಲ; ಅಂತಹವರಿಗೆ ಪೌರತ್ವ ನೀಡುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚರ್ಚೆ ಆಗಿ ಜಾರಿಗೆ ತರಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಮೋದಿ ಸರಕಾರ ಬಂದ ಮೇಲೆ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಹಾಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟಿ ದೇಶದಿಂದಲೇ ಓಡಿಸಿ ಬಿಡುತ್ತಾರೆ ಎಂಬ ತಪ್ಪು ಮಾಹಿತಿ ನೀಡುತ್ತಿದೆ ಎಂದು ಹೇಳಿದರು. ರಾಷ್ಟ್ರದಲ್ಲಿ 23 ಕೋಟಿ ಮಂದಿ ಅಲ್ಪಸಂಖ್ಯಾತರಿದ್ದಾರೆ. ಪಾಕಿಸ್ತಾನ ದಲ್ಲಿರುವ 17 ಕೋಟಿ. ಅಲ್ಲಿ ಹಿಂದೂಗಳಿರುವದು ಕೇವಲ 1.5 ಕೋಟಿ ಮಂದಿ. ಇಲ್ಲಿಂದ ಯಾವದೇ ಮುಸಲ್ಮಾನರನ್ನು ಓಡಿಸುವದಿಲ್ಲ; ಪೌರತ್ವ ಸಿಗದವರಿಗೆ ಪೌರತ್ವ ನೀಡಲು ತೀರ್ಮಾನ ಮಾಡಿರುವದಾಗಿ ಹೇಳಿದರು.

ಆತಂಕದ ಸ್ಥಿತಿ

ಯಾರೂ ಕೂಡ ಭಯೋತ್ಪಾದನೆಗೆ ಸಹಕಾರ ಕೊಡಬಾರದು; ಕೊಡಗಿನಲ್ಲೂ ಭಯೋತ್ಪಾದಕರ ಸುಳಿವು ಕಂಡು ಬರುತ್ತಿರುವದು ಆತಂಕ ತಂದೊಡ್ಡಿದೆ. ಗೋಣಿಕೊಪ್ಪದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಿರುವದು; ಹೊಸ ತೋಟದಲ್ಲೂ ಉಗ್ರ ಸೆರೆಸಿಕ್ಕಿದ್ದ ಈ ಬಗ್ಗೆ ಎಚ್ಚರದಿಂದಿರಬೇಕು, ಭಯೋತ್ಪಾದಕರನ್ನು ನಮ್ಮ ದೇಶದಲ್ಲಿ ಇಟ್ಟುಕೊಳ್ಳಬೇಕಾ; ಮಟ್ಟ ಹಾಕೋದು ಬೇಡವಾ ಎಂದು ಪ್ರಶ್ನಿಸಿದರು.

ಇದೀಗ ಕಾಶ್ಮೀರದಲ್ಲೂ ಭಯೋತ್ಪಾದಕರಿಗೆ ಭಯ ಶುರು ವಾಗಿದೆ. ಪಾಕ್‍ಗೂ ನಡುಕ ಹುಟ್ಟಿದೆ. ನಮ್ಮ ರಾಷ್ಟ್ರಾಭಿಮಾನ, ರಾಷ್ಟ್ರದ ಸಂಸ್ಕøತಿ ಮೆರೆಯಬೇಕೆಂದು ಹೇಳಿದರು.

ಸ್ಪಷ್ಟತೆ ಇರಬೇಕು

ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ; ಪೌರತ್ವ ತಿದ್ದುಪಡಿ ಕಾಯ್ದೆ 1955ರಲ್ಲಿಯೇ ಜಾರಿಗೆ ಬಂದಿದೆ. ಅಂದಿನ ಪ್ರಧಾನಿ ನೆಹರೂ ಜಾರಿಗೆ ತಂದಿದ್ದಾರೆ. 2014ರಲ್ಲಿ ಒಮ್ಮೆ ತಿದ್ದುಪಡಿ ಆಗಿದೆ. ಯಾವಾಗ ಬೇಕಾದರೂ ಹಿಂಪಡೆಯಬಹುದು. ಆದರೆ ಹಿಂಪಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಅಮಿತ್ ಶಾ ಎದೆಗಾರಿಕೆ ಯಿಂದ ಈ ಕಾಯ್ದೆ ಮಾಡಿದ್ದಾರೆ. ಇದನ್ನು ದೇಶವೇ ಸ್ವಾಗತಿಸಿದೆ. ಜನರನ್ನು ತಪ್ಪುದಾರಿಗೆಳೆಯುತ್ತಿರುವ ಕಾಂಗ್ರೆಸ್ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ದಿಕ್ಕು ತಪ್ಪಿಸುತ್ತಿದೆ

ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ; ರಾಮಮಂದಿರ ತೀರ್ಪು ಬಂದಾಗ ಎಲ್ಲರೂ ಚಕಾರವೆತ್ತದೆ ಸ್ವಾಗತ ಮಾಡಿದ್ದಾರೆ. ನ್ಯಾಯಾಲಯ ರಾಮಜನ್ಮಭೂಮಿ ಬಗ್ಗೆ ದಾಖಲೆ ಕೇಳಿದಾಗ ಯಾರೂ ವಿರೋಧ ಮಾಡಿಲ್ಲ; ಇದೀಗ ಮನುಷ್ಯರ ದಾಖಲೆ ಕೇಳಿದರೆ ಯಾಕೆ ವಿರೋಧ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಇಲ್ಲಿ ಎಲ್ಲರೂ ಅನೋನ್ಯತೆಯಿಂದ ಬದುಕುತ್ತಿದ್ದಾರೆ. ಜಿಲ್ಲೆಯಲ್ಲಿ ಎಷ್ಟೊಂದು ಮಸೀದಿ, ಮೋದಿ ದೇಶಕ್ಕಾಗಿ ಕೆಲಸ ಮಾಡುವ ನಾಯಕ ಎಂದು ಹೇಳಿದರು.

ಭಯೋತ್ಪಾದಕರ ವಿರುದ್ಧ ಹೋರಾಟ ಮಾಡಿ

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ; ಪ್ರಜೆಗಳ ರಕ್ಷಣೆಗಾಗಿ ಜಾರಿಯಾದ ಕಾನೂನನ್ನು ಅಭಿನಂದಿಸುವ ಸಭೆ ಆಚರಿಸಬೇಕಾಗಿತ್ತು. ಆದರೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಭೆ ನಡೆಸುವಂತಾಗಿರುವದು ವಿಪರ್ಯಾಸವೆಂದು ಹೇಳಿದರು. ಕಾಯ್ದೆಯನ್ನು ವಿರೋಧಿಸುವ ಒಂದು ವರ್ಗದ ಜನರ ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಮಾಡುತ್ತಿವೆ.

ದೇಶ ಬೇಕೋ, ಪಾಕ್ ಬೇಕೋ ಎಂದು ಕಾಂಗ್ರೆಸ್ ನಿರ್ಧರಿಸಬೇಕಿದೆ. ದೇಶದ ಮುಸಲ್ಮಾನರು ಕಾಯ್ದೆಯನ್ನು ವಿರೋಧಿಸುತ್ತಾ ಶಕ್ತಿ ಪ್ರದರ್ಶನ ಮಾಡುತ್ತಿರುವದು ಕಂಡು ಬರುತ್ತಿದೆ. ಕಾಯ್ದೆ ಮೇಲೆ, ದೇಶದ ಮೇಲೆ ನಂಬಿಕೆ ಇದ್ದರೆ ಇಂದೇ ಪ್ರತಿಭಟನೆ ಹೇಳಿದ ಅವರು, ಇಲ್ಲಿ ಎಲ್ಲರೂ ಅಣ್ಣ-ತಮ್ಮಂದಿರಂತೆ ಇರುವಾಗ ಬೇರೆ ಮಾಡುವ ಕೆಲಸ ಮಾಡಬೇಡಿ. ಇನ್ನೂ ಮುಂದಾದರೂ ಭಾವೈಕ್ಯತೆಯಿಂದ ಬಾಳೋಣವೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಬಿ.ಬಿ. ಭಾರತೀಶ್, ಪೌರತ್ವ ಕಾಯ್ದೆ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗಿದೆ. ಪ್ರಧಾನಿ ಮೋದಿ ಅವರಿಂದ ಬದಲಾವಣೆ ಆಗುತ್ತಿದೆ. ಜನಸಂಘವನ್ನು ಕಟ್ಟಿ ಬೆಳೆಸಿದ ನಾಯಕರ ಕನಸನ್ನು ಈಗಿನ ಸರಕಾರ ನನಸು ಮಾಡುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ಪಕ್ಷ ಬಿಜೆಪಿ ಹಾಗೂ ಮೋದಿ ವಿರುದ್ಧ ಹೋರಾಟ ಮಾಡುತ್ತಿದೆ. ಕಾಯ್ದೆಯ ನೈಜಾಂಶವನ್ನು ತಿರುಚುವ ಕೆಲಸ ಮಾಡುತ್ತಿದೆ ಎಂದರು. ಇಂತಹದಕ್ಕೆ ಕಡಿವಾಣ ಹಾಕಬೇಕಿದೆ. ಕಾನೂನಡಿ ಯಲ್ಲಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು. ಸರಕಾರ ಉಜ್ವಲ ಯೋಜನೆಯಡಿ ಗ್ಯಾಸ್ ಕೊಡುವಾಗ; ವಿಮಾ ಯೋಜನೆ ಸೇರಿದಂತೆ ಇತರ ಯೋಜನೆ ಜಾರಿಗೊಳಿಸುವಾಗ ಎಲ್ಲರಿಗೂ ಮನೆಗಳನ್ನು ಕೊಡುವಾಗ ವಿರೋಧ ಮಾಡದವರು ಇದೀಗ ಏಕೆ ವಿರೋಧ ಮಾಡುತ್ತಿದ್ದಾರೆ. ಭಾರತೀಯರೆಲ್ಲರೂ ಒಂದೇ ರಕ್ತದವರೆಂದು ಮೋದಿ ಸರಕಾರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ವಿರೋಧಿಸುವವರಿಗೆ ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆಂದು ಹೇಳಿದರು.

ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೀನಾ ಪ್ರಕಾಶ್, ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೋಕೇಶ್, ಮಂಡಲ ಅಧ್ಯಕ್ಷರುಗಳಾದ ಕಾಂಗಿರ ಅಶ್ವಿನ್, ಮನು ಮಂಜುನಾಥ್, ಮನು ರೈ, ನೆಲ್ಲಿರ ಚಲನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಚೋಕಿಂ, ಜಿಲ್ಲಾ ಅಧ್ಯಕ್ಷ ಜಾಹಿರ್, ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಇತರರಿದ್ದರು. ಭಾರತಿ ರಮೇಶ್, ಪ್ರೇಮಾ ರಾಘವಯ್ಯ ದೇಶಭಕ್ತಿ ಗೀತೆ ಹಾಡಿದರೆ; ಬಿ.ಕೆ. ಅರುಣ್‍ಕುಮಾರ್ ನಿರೂಪಿಸಿದರು. ಮಡಿಕೇರಿ ನಗರ ಮಾಜಿ ಅಧ್ಯಕ್ಷ ಮಹೇಶ್ ಜೈನ್ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಶಾಲಪ್ಪ ವಂದಿಸಿದರು.