ವೀರಾಜಪೇಟೆ, ಜ. 14: ವೀರಾಜಪೇಟೆಯಿಂದ 7 ಕಿ.ಮೀ ಅಂತರದಲ್ಲಿರುವ ಬಾಳುಗೋಡು ಗ್ರಾಮದ ಪೈಸಾರಿ ಸರ್ವೆ ನಂಬರ್ 337ರ ಎರಡೂವರೆ ಎಕರೆ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡಿರುವ 55 ಕುಟುಂಬಗಳನ್ನು ತೆರವುಗೊಳಿಸಲು ಇಂದು ತಾಲೂಕು ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಜಾಗ ತೆರವುಗೊಳಿಸುವಂತೆ ಆದೇಶಿಸಿದರೂ ಯಾವುದೇ ಕುಟುಂಬ ಆ ಜಾಗವನ್ನು ತೆರವುಗೊಳಿಸದೆ ಅದೇ ಜಾಗದಲ್ಲಿ ಪ್ರತಿಭಟನೆ ಮುಂದುವರೆಸಿದಾಗ ಮಹೇಶ್ ಅವರು ದೂರವಾಣಿ ಮೂಲಕ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿಯೇ ಹಾಜರಿದ್ದ ಬಹುಜನ ಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿಯ ಮೊಣ್ಣಪ್ಪ ಅಧಿಕಾರಿಗಳೊಂದಿಗೆ ಮಾತನಾಡಿ ನಿರಾಶ್ರಿತ ಕುಟುಂಬಗಳಿಗೆ ಇಲಾಖೆಯಿಂದ ಹಕ್ಕುಪತ್ರ ದೊರಕದ ಹೊರತು ಪ್ರತಿಭಟನಾಕಾರರು ಸ್ಥಳ ಬಿಟ್ಟು ಕದಲುವುದಿಲ್ಲ ಎಂದರು. ರಾಜ್ಯ ವಸತಿ ಹಕ್ಕು ಹೋರಾಟ ಸಮಿತಿಯ ಹೇಮಂತ್ ಮಾತನಾಡಿ ಅಧಿಕಾರಿಗಳ ನಡೆ ಸರಿಯಲ್ಲ ಎಂದರು. ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಪರಮೇಶ್ ಮಾತನಾಡಿ, ಹಕ್ಕುಪತ್ರ ದೊರೆಯುವವರೆಗೂ ಹೋರಾಟ ಮುಂದುವರೆಸಲು ಕರೆ ನೀಡಿದರು. ತಾಲೂಕು ತಹಶೀಲ್ದಾರ್ ಮಹೇಶ್ ಮಾತನಾಡಿ ವಸತಿ ರಹಿತ ಕುಟುಂಬಗಳನ್ನು ಗ್ರಾಮ ಪಂಚಾಯಿತಿವಾರು ಪಟ್ಟಿ ಮಾಡಲಾಗುವುದು. ನಂತರ ವಸತಿ ಯೋಜನೆಯಂತೆ ಮೂಲ ಸೌಲಭ್ಯಗಳಿಂದ ಕೂಡಿದ ಲೇಔಟ್ ನಿರ್ಮಿಸಿ ನಿವೇಶನಗಳನ್ನು ವಿತರಿಸಲಾಗುವುದು ಎಂದಿದಕ್ಕೆ ಸಂಘಟನೆಗಳ ನಾಯಕರು ಸಮ್ಮತಿ ಸೂಚಿಸಲಿಲ್ಲ. ಹೋರಾಟ ಮುಂದುವರೆಸುವುದಾಗಿ ಪಟ್ಟು ಹಿಡಿದರು.
ಕೆ.ಪಳನಿ ಪ್ರಕಾಶ್ ಮಾತನಾಡಿ ಈ ಪೈಸಾರಿ ಸರಕಾರದ ಯಾವುದೇ ಯೋಜನೆಗೆ ಮಂಜೂರಾಗಿರುವುದಿಲ್ಲ. ಪೈಸಾರಿ ಜಾಗ ಕಾನೂನು ಪ್ರಕಾರವಾಗಿ ನಿರಾಶ್ರಿತರಿಗೆ ಸೇರಬೇಕು. ಕಂದಾಯ ಅಧಿಕಾರಿಗಳು ಈ ಜಾಗವನ್ನು ವಸತಿ ರಹಿತರಿಗೆ ಹಂಚಲು ಕ್ರಮ ಕೈಗೊಳ್ಳಬೇಕು. ಇಲ್ಲಿದಿದ್ದರೆ ಪ್ರತಿಭಟನೆ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಕಂದಾಯ ಅಧಿಕಾರಿಗಳು ಇದಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಜೊತೆಯಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಪಳಂಗಪ್ಪ, ಐ.ಟಿ.ಡಿ.ಪಿ, ಅಧಿಕಾರಿ ಗುರುಶಾಂತಪ್ಪ, ಗ್ರಾಮಲೆಕ್ಕಿಗರು ಮತ್ತಿತರ ಅಧಿಕಾರಿಗಳು ಇದ್ದರು.
ಕಂದಾಯ ಅಧಿಕಾರಿಗಳ ಜೊತೆಯಲ್ಲಿಯೇ ಬಾಳುಗೋಡು ಪ್ರತಿಭಟನಾ ಸ್ಥಳಕ್ಕೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಚ್ಚಿಮಾಡ ಬೆಳ್ಳಿಯಪ್ಪ, ಪಂಚಾಯಿತಿ ಸದಸ್ಯರುಗಳಾದ ದಿನೇಶ್, ವಸಂತ್, ಬೋಪಯ್ಯ, ಪುಷ್ಪವಲ್ಲಿ ಹಾಗೂ ಕಾರ್ಯದರ್ಶಿ ಸ್ವರೂಪ್ ಭೇಟಿ ನೀಡಿ ಈ ಜಾಗ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗಾಗಿ ಗುರುತಿಸಿರುವ ಜಾಗವಾಗಿದೆ. ಇದನ್ನು ಪ್ರತಿಭಟನೆಕಾರರು ತೆರವು ಮಾಡಬೇಕು. ಕಸವಿಲೇವಾರಿಗಾಗಿ ಗ್ರಾಮ ವಿಕಸನ ಯೋಜನೆಯಡಿ ಗ್ರಾಮ ಪಂಚಾಯಿತಿಗೆ ರೂ ಒಂದು ಕೋಟಿ ಬಂದಿದ್ದು ಗ್ರಾಮ ಪಂಚಾಯಿತಿಗೆ ಈ ಜಾಗ ಅವಶ್ಯವಾಗಿದೆ ಎಂದು ಕಂದಾಯ ಅಧಿಕಾರಿ ಗಳಿಗೆ ಮನವಿ ಮಾಡಿದರು. ಬಾಳುಗೋಡು ಪೈಸಾರಿಯಲ್ಲಿ ಕಳೆದ 11ದಿನಗಳಿಂದ ಸುಮಾರು 55 ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಧರಣಿ ನಡೆಸುತ್ತಿದ್ದಾರೆ.