ಶನಿವಾರಸಂತೆ, ಜ. 14: ಗಡಿ ಗ್ರಾಮದಲ್ಲಿ ತಾ. 31 ಮತ್ತು ಫೆಬ್ರವರಿ 1 ರಂದು ಪ್ರಥಮ ಬಾರಿಗೆ ನಡೆಯಲಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಿಡ್ತ ಹಬ್ಬವನ್ನು ಯಶಸ್ವಿಗೊಳಿಸಲು ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು ಚುರುಕು ಗೊಂಡು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಅಭಿಪ್ರಾಯಪಟ್ಟರು.
ಸಮೀಪದ ನಿಡ್ತ ಗ್ರಾಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಡೆದ ಸಮ್ಮೇಳನದ ಉಪಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಮುಖ್ಯ ಉಪಸಮಿತಿಗಳಾದ ಆರ್ಥಿಕ, ಆಹಾರ, ಮೆರವಣಿಗೆ, ದ್ವಾರ ಸಮಿತಿಗಳಿಗೆ ಮತ್ತಷ್ಟು ಸದಸ್ಯರನ್ನು ಸೇರಿಸಿಕೊಳ್ಳುವ, ಸಮ್ಮೇಳನ ನಡೆಯುವ 1 ವಾರಕ್ಕೆ ಮೊದಲೇ ದ್ವಾರಗಳ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಸಭೆಗೂ ಮುನ್ನ ಇತ್ತೀಚೆಗೆ ನಿಧನರಾದ ಪ್ರಚಾರ ಸಮಿತಿ ಸದಸ್ಯ ಪತ್ರಕರ್ತ ವಿ.ಸಿ. ಸುರೇಶ್ ಹಾಗೂ ದ್ವಾರ ಸಮಿತಿ ಅಧ್ಯಕ್ಷ ಕರುಣೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕರುಣೇಶ್ ಅವರ ಸ್ಥಾನಕ್ಕೆ ಎಚ್.ಪಿ. ಮೋಹನ್ ಅವರನ್ನು ಆಯ್ಕೆ ಮಾಡಲಾಯಿತು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ವಿಜೇತ್, ಸದಸ್ಯರು, ಹೋಬಳಿ ಘಟಕದ ಪದಾಧಿಕಾರಿಗಳು, ಪ್ರಮುಖರಾದ ಪ್ರಸನ್ನ, ಡಿ.ಬಿ. ಧರ್ಮಪ್ಪ, ಸುಬ್ಬಪ್ಪ, ಡಿ.ಬಿ. ಸೋಮಪ್ಪ, ಎನ್.ಬಿ. ನಾಗಪ್ಪ, ಎಚ್.ಪಿ. ಶೇಷಾದ್ರಿ, ಹರೀಶ್ ಕುಮಾರ್, ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.