ಸುಂಟಿಕೊಪ್ಪ, ಜ. 14: ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು, ಶಾರೀರಿಕವಾಗಿ ಸದೃಢವಾಗಲು ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸುಂಟಿಕೊಪ್ಪ ವರ್ತುಲ ಕಾರ್ಯಕರ್ತೆ ಸಾವಿತ್ರಿ ಹೇಳಿದರು.
ಇಲ್ಲಿನ ಮುತ್ತಪ್ಪ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ವರ್ತುಲ ಕಾರ್ಯಕರ್ತೆಯರಿಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸರಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ತರಬೇತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅದನ್ನು ತಿಳಿದುಕೊಂಡು ಮಕ್ಕಳು, ಗರ್ಭಿಣಿ ಸ್ತ್ರೀಯರಿಗೆ ಸರಕಾರದಿಂದ ಲಭಿಸುವ ಸೌಲಭ್ಯವನ್ನು ನೀಡಬೇಕು. ಯಾವದೇ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು. ಮಕ್ಕಳಲ್ಲಿ ಏನೇ ನ್ಯೂನ್ಯತೆಯಿದ್ದರೂ ಅದನ್ನು ಸರಿಪಡಿಸಿಕೊಂಡು ಅವರು ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ಅವಕಾಶ ಕಲ್ಪಿಸಬೇಕೆಂದು ಕರೆ ನೀಡಿದರು. ಚೆಟ್ಟಳ್ಳಿ ಅಂಗನವಾಡಿ ಶಿಕ್ಷಕಿ ತಾಹಿರಾ ಗರ್ಭಿಣಿ ಸ್ತ್ರೀಯರ ಮತ್ತು ಮಕ್ಕಳ ಆರೋಗ್ಯದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವ ಕುರಿತು ತರಬೇತಿ ನೀಡಿದರು. ಸೆಲಿನಾ ಜೆಫ್ರಿ ಪ್ರಾರ್ಥಿಸಿ, ಲೀಲಾ ಸ್ವಾಗತಿಸಿ, ಜಯಶೀಲ ನಿರೂಪಿಸಿ, ಜೆಸ್ಸಿ ಡಿಸೋಜ ವಂದಿಸಿದರು.