ಸೋಮವಾರಪೇಟೆ,ಜ.14: ಮನುಷ್ಯರಾದವರು ಧರ್ಮಾಚರಣೆ ಮಾಡಿದರೆ ಮಾತ್ರ ಆದರ್ಶ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಸನಾತನ ಸಂಸ್ಥೆಯ ದೀಪಾ ತಿಲಕ್ ಅಭಿಪ್ರಾಯಿಸಿದರು. ಇಲ್ಲಿನ ಕೊಡವ ಸಮಾಜದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮಾಚರಣೆ ಮಾಡಲು ಆಧ್ಯಾತ್ಮಿಕ ಸಾಧನೆಯ ಅವಶ್ಯಕತೆ ಇದೆ ಎಂದ ಅವರು, ಇಂದು ಮಂದಿರಗಳ ರಕ್ಷಣೆಗೆ ಎಲ್ಲಾ ಹಿಂದೂಗಳು ಒಂದಾಗಬೇಕು. ಆ ಮೂಲಕ ಜಾಗೃತ ಹಿಂದೂ ಸಮಾಜ ನಿರ್ಮಾಣಮಾಡಬೇಕು ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ನಮ್ಮ ಮಾತು ಕೃತಿ ಒಂದೇ ಆಗಿರಬೇಕು. ಮೊದಲು ಮನೆಗಳಲ್ಲಿ ಧಾರ್ಮಿಕ ಜಾಗೃತಿ ಆಗಬೇಕು ಎಂದು ಅಭಿಪ್ರಾಯಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಮೈಸೂರು ವಕ್ತಾರ ಶಿವರಾಮ್ ಮಾತನಾಡಿದರು.
ಸಮಿತಿಯ ಶ್ರೀಲಕ್ಷ್ಮೀ ರವಿಚಂದ್ರ ಅವರು ಕಾರ್ಯಕ್ರಮ ನಿರ್ವಹಿಸಿದರು. ಸನಾತನ ಸಂಸ್ಥೆಯ ಗ್ರಂಥ ಪ್ರದರ್ಶಿನಿ ಮತ್ತು ಸಾತ್ವಿಕ ವಸ್ತುಗಳ ಪ್ರದರ್ಶನ ಮತ್ತು ಆಪತ್ಕಾಲೀನ ಆಯುರ್ವೇದ ಸಸ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.