ಸೋಮವಾರಪೇಟೆ, ಜ. 12: ತಾಲೂಕಿನ ಸೂರ್ಲಬ್ಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಮಿತಿ ವತಿಯಿಂದ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ವಿವಿಧ ಕ್ರೀಡಾಕೂಟ ನಡೆಯಿತು.

ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಮಿತಿ ವತಿಯಿಂದ ಆಯೋಜಿಸ ಲಾಗಿರುವ ಗುರುವಂದನ ಕಾರ್ಯಕ್ರಮದ ಅಂಗವಾಗಿ ಶಾಲಾ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿ ಗಳಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆದವು.

ಶಾಲಾ ಮೈದಾನದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ಕಬಡ್ಡಿ, ಭಾರದ ಗುಂಡು ಎಸೆತ, ಮಡಿಕೆ ಒಡೆಯುವದು, ವಾಲಿಬಾಲ್, ತೆಂಗಿನ ಕಾಯಿಗೆ ಗುಂಡು ಹೊಡೆಯುವದು ಮತ್ತು ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.

ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿಂದ ಹಳೆಯ ವಿದ್ಯಾರ್ಥಿ ಹಾಗೂ ನಿವೃತ್ತ ಯೋಧ ತಂಬುಕುತ್ತಿರ ಸೋಮಯ್ಯ ಅವರು ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತಂದರು. ನಂತರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸೂರ್ಲಬ್ಬಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್ ಮಾತನಾಡಿ, ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ ವಾಗಿದೆ. ಇಂದಿನ ಕ್ರೀಡಾಕೂಟವು ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಭಾವೈಕ್ಯತೆ ಬೆಳೆಸಲು ಸಹಕಾರಿಯಾಗಿದೆ ಎಂದರು.

ಇಲ್ಲಿನ ಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಹೊರ ಜಿಲ್ಲೆ, ಹೊರ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಗ್ರಾಮದಲ್ಲಿ ಒಟ್ಟಾಗಿ ಸೇರಿ ಗುರುಗಳಿಗೆ ಗೌರವವಂದನೆ ಸಲ್ಲಿಸುತ್ತಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪುದಿಯತಂಡ ಲೋಕೇಶ್ ಮಾತನಾಡಿ, ತಾವು ಕಲಿತ ಶಾಲೆಯ ಅಭಿವೃದ್ಧಿ ಹಾಗೂ ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಗುರುನಮನ ಸಲ್ಲಿಸುವ ಮೂಲಕ ಇಡೀ ನಾಡಿನ ಜನರನ್ನು ಒಂದೆಡೆ ಸೇರಿಸಿದ ಸಂತೃಪ್ತಿ ನಮಗಿದೆ ಎಂದರು.

ವೇದಿಕೆಯಲ್ಲಿ ಗರ್ವಾಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಾಮೇರ ಪಳಂಗಪ್ಪ, ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾಪಂಡ ದೊಡ್ಡಯ್ಯ, ಕಾರ್ಯದರ್ಶಿ ತಂಬುಕುತ್ತಿರ ರಮೇಶ್, ಸಹಕಾರ್ಯದರ್ಶಿ ಮೇದುರ ಕಂಠಿ ನಾಣಿಯಪ್ಪ, ಪದಾಧಿಕಾರಿಗಳಾದ ಮುದ್ದಂಡ ಮಧು, ತಂಬುಕುತ್ತೀರ ಸುಬ್ಬಯ್ಯ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬಿ.ಎಂ. ಸುಂದರಿ, ಸಹಶಿಕ್ಷಕ ಎಂ.ಟಿ. ಪೂವಯ್ಯ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ. ಧರ್ಮಪ್ಪ ಉಪಸ್ಥಿತರಿದ್ದರು.