ವೀರಾಜಪೇಟೆ, ಜ. 12: ವೃದ್ಧಾಪ್ಯರು, ವಿಧವಾ ವೇತನ, ಸರಕಾರದ ಇತರ ಪೆನ್ಷನ್ ಸ್ಕೀಂಗಳ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡದೆ ಸತಾವಣೆ ಮಾಡುತ್ತಿದ್ದ ಇಲ್ಲಿನ ತಾಲೂಕು ಕಚೇರಿಯ ಸಿಬ್ಬಂದಿ ತಾನ್ಸಿಯಾ ಭಾನು ಅವರನ್ನು ಜಿಲ್ಲಾ ಉಪ ಆಯುಕ್ತ ಜವರೇಗೌಡ ತರಾಟೆಗೆ ತೆಗೆದುಕೊಂಡು ಕರ್ತವ್ಯ ನಿಷ್ಠೆಗೆ ಸಂಬಂಧಿಸಿದಂತೆ ಈ ಸಿಬ್ಬಂದಿಗೆ ಕಾರಣ ಕೇಳಿ ತಕ್ಷಣ ನೋಟೀಸ್ ಜಾರಿ ಮಾಡುವಂತೆ ತಹಶೀಲ್ದಾರ್ ಮಹೇಶ್ ಅವರಿಗೆ ಆದೇಶ ಮಾಡಿದರು.

ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆಯ ವತಿಯಿಂದ ಪೆನ್ಷನ್ ಅದಾಲತ್ ಆಯೋಜಿಸ ಲಾಗಿತ್ತು. ಸುಮಾರು 22 ಮಂದಿಗೆ ಪೆನ್ಷನ್ ದೃಢೀಕರಣ ಪತ್ರವನ್ನು ನೀಡಲಾಯಿತು.

ಆದರೆ ಪೆನ್ಷನ್ ಸಿಬ್ಬಂದಿ ನಾಲ್ಕು ತಿಂಗಳ ಹಿಂದೆ ಅರ್ಜಿ ಕೊಟ್ಟವರಿಗೆ ಈಗ ಪೆನ್ಷನ್ ದೃಢೀಕರಣ ಪತ್ರ ನೀಡುತ್ತಿರುವುದು ಜವರೇಗೌಡ ಅವರ ಗಮನಕ್ಕೆ ಬಂದಾಗ ಸಿಬ್ಬಂದಿಯನ್ನು ಕರೆಸಿ ವಿಚಾರಿಸಿದರು. ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯ ಹಾಗೂ ವಿಳಂಬದ ಲೋಪ ಎಸಗಿರುವುದು ಕಂಡು ಬಂದಿದ್ದು ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮಕ್ಕೆ ಆಗ್ರಹಿಸಿದರು.

ಅದಾಲತ್‍ನ್ನುದ್ದೇಶಿಸಿ ಮಾತನಾಡಿದ ಜವರೇಗೌಡ, ಸರಕಾರದ ಯೋಜನೆಯಾದ ಯಾವುದೇ ಪೆನ್ಷನ್ ಅರ್ಜಿಯನ್ನು ತಕ್ಷಣ ವಿಲೇವಾರಿ ಮಾಡಬೇಕು. ಇದು ಸರಕಾರ, ಬಡ ಬಗ್ಗರು, ವೃದ್ಧಾಪ್ಯರು, ಅರ್ಹ ಫಲಾನುಭವಿಗಳಿಗೆ ನೀಡಿರುವ ಸೌಲಭ್ಯ.

ಇದನ್ನು ಯಾರು ಕಸಿದುಕೊಳ್ಳುವಂತಿಲ್ಲ. ಅರ್ಜಿಗಳನ್ನು ವಿಲೇವಾರಿ ಮಾಡದೆ ಉದಾಸೀನ ಮನೋಭಾವನೆ ತೋರುವಂತಿಲ್ಲ. ಫಲಾನುಭವಿಗಳಿಗೆ ಮುಕ್ತವಾಗಿ ಕರ್ತವ್ಯ ನಿಷ್ಠೆಯ ಮನೋಭಾವದಿಂದ ಸ್ಪಂದಿಸಿ. ಇನ್ನು ಮುಂದೆ ಇಂತಹ ಅರ್ಜಿಗಳು ನಿಗದಿತ ಅವಧಿಯ ಇಪ್ಪತ್ತೆರಡು ದಿನಗಳೊಳಗೆ ವಿಲೇವಾರಿ ಮಾಡಿ ಪೆನ್ಷನ್‍ನ ದೃಢೀಕರಣ ಪತ್ರ ನೀಡುವಂತಾಗಬೇಕು. ಈ ಸಂಬಂಧದಲ್ಲಿ ತಹಶೀಲ್ದಾರ್ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಅದಾಲತ್‍ನಲ್ಲಿ ತಾಲೂಕು ತಹಶೀಲ್ದಾರ್ ಮಹೇಶ್, ರೆವಿನ್ಯೂ ಇನ್ಸ್‍ಪೆಕ್ಟರ್ ಸಿ.ಕೆ. ಪಳಂಗಪ್ಪ, ರೆವಿನ್ಯೂ ಸಿಬ್ಬಂದಿಗಳು, ಫಲಾನುಭವಿಗಳು ಹಾಜರಿದ್ದರು.