ಮಡಿಕೇರಿ, ಜ. 12: ಯುವ ಜನತೆಗೆ ಸ್ವಾಮಿ ವಿವೇಕಾನಂದರು ಆದರ್ಶ. ಆದ್ದರಿಂದ ಯುವ ಜನತೆ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಿಳಿದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವಂತಾಗ ಬೇಕು ಎಂದು ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ತ್ರಿನೇತ್ರ ಯುವಕ ಸಂಘ ಹಾಕತ್ತೂರು ಇವರ ಸಂಯುಕ್ತಾಶ್ರಯ ದಲ್ಲಿ ಭಾನುವಾರ (ಮೊದಲ ಪುಟದಿಂದ) ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆಯ ‘ರಾಷ್ಟ್ರೀಯ ಯುವ ದಿನಾಚರಣೆ’ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ, ಯುವ ಸಬಲೀಕರಣ ಕೇಂದ್ರ ಉದ್ಘಾಟನೆ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಅಪಾರ ರಾಷ್ಟ್ರ ಪ್ರೇಮ, ವಿಶ್ವ ಭ್ರಾತೃತ್ವ ಹೊಂದಿದ್ದರು, ಸ್ವಾಮಿ ವಿವೇಕಾನಂದರ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ಅಪ್ಪಚ್ಚು ರಂಜನ್ ತಿಳಿಸಿದರು.

ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮೀಜಿ ಮೇದಾನಂದರು ಮಾತನಾಡಿ ರವೀಂದ್ರನಾಥ ಠಾಕೂರ್ ಅವರು ವಿದೇಶಿ ಸಾಹಿತಿ ರೋಮೈನ್ ರಾಲ್ಡ್ ಅವರಿಗೆ ತಿಳಿಸಿದಂತೆ ಭಾರತವನ್ನು ಅಧ್ಯಯನ ಮಾಡಬೇಕೆಂದರೆ, ದೇಶ ಸುತ್ತುವ ಅಗತ್ಯವಿಲ್ಲ. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಧ್ಯಯನ ಮಾಡಿದರೆ ಸಾಕು ಎಂದು. ಅಂತಹ ಮಹಾನ್ ಚೇತನ ಸ್ವಾಮಿ ವಿವೇಕಾನಂದರು ಎಂದು ತಿಳಿಸಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜವರಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದರು ಬಹು ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದರು. ಯುವ ಜನರೂ ಸಹ ಹೆಚ್ಚು ಭಾಷೆಗಳನ್ನು ಕಲಿಯಬೇಕು ಎಂದರು.

ಜಿಲ್ಲಾ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತಹಶೀಲ್ದಾರ್ ಪಿ.ಎಸ್. ಮಹೇಶ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಾಧ್ಯಾಪಕ ದಯಾನಂದ ನಿರೂಪಿಸಿದರು. ವಿದ್ಯಾರ್ಥಿ ಶಿವ ಪ್ರಾರ್ಥಿಸಿದರು, ಕಾಲೇಜಿನ ಪ್ರಾಂಶುಪಾಲೆ ಪ್ರೊ. ವೈ. ಚಿತ್ರಾ ಸ್ವಾಗತಿಸಿದರು. ಕೆ.ಪಿ. ಕುಸುಮ ವಂದಿಸಿದರು.