ಸೋಮವಾರಪೇಟೆ, ಜ. 12: ಮಾನಸಿಕ ಅಸ್ವಸ್ಥನಾಗಿ ರಸ್ತೆ ಬದಿಯಲ್ಲಿ ಅಲೆಯುತ್ತಿದ್ದ ಯುವಕನೋರ್ವ ಕಳೆದ ಎರಡು ದಿನಗಳಿಂದ ಕಾಣೆಯಾಗಿರುವ ಬಗ್ಗೆ ಆತನ ಪೋಷಕರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಮೀಪದ ಕಾಗಡಿಕಟ್ಟೆ ಗ್ರಾಮದ ರಾಜೇಶ್ (26) ಎಂಬಾತ ಕಳೆದ ಕೆಲ ವರ್ಷಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ರಸ್ತೆಯ ಬದಿಯಲ್ಲಿಯೇ ಓಡಾಡಿಕೊಂಡಿದ್ದ. ಈತನಿಗೆ ಚಿಕಿತ್ಸೆ ಕೊಡಿಸಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ತಾ. 9 ರಂದು ಮಧ್ಯಾಹ್ನ 2.30ರ ಸುಮಾರಿಗೆ ಕಾಗಡಿಕಟ್ಟೆ ಗ್ರಾಮದಿಂದ ರಾಜೇಶ್ ನಾಪತ್ತೆಯಾಗಿರುವದಾಗಿ ಆತನ ಪೋಷಕರು ಪೊಲೀಸ್ ದೂರು ನೀಡಿದ್ದಾರೆ.

ತಾ. 9ರಂದು ಮಧ್ಯಾಹ್ನ ಅಪರಿಚಿತ ಚಾಲಿಸುತ್ತಿದ್ದ ಬೈಕ್‍ನ್ನು ತಡೆದು ನಿಲ್ಲಿಸಿ, ಅದರ ಹಿಂಬದಿಯಲ್ಲಿ ಕುಳಿತುಕೊಂಡು ಹೋದವನು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ರಾಜೇಶನ ಸುಳಿವು ಇದ್ದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ದೂ: 08276 282040 ಸಂಖ್ಯೆಗೆ ಮಾಹಿತಿ ನೀಡಬೇಕೆಂದು ಠಾಣಾಧಿಕಾರಿ ಶಿವಶಂಕರ್ ಮನವಿ ಮಾಡಿದ್ದಾರೆ.