ವೀರಾಜಪೇಟೆ, ಜ. 13: ಕೊಡಗಿನ ಭಕ್ತಾದಿಗಳ ಅವಿಭಾವನಾತ್ಮಕ ಸಂಬಂಧ ಹೊಂದಿರುವ ಹಾಗೂ ಶತಮಾನದ ಐತಿಹಾಸಿಕ ಹಿನ್ನೆಲೆಯುಳ್ಳ ಕೇರಳದ ಹುಳಿಕಲ್‍ನಲ್ಲಿರುವ ಆದಿ ಬೈತೂರು ದೇವಸ್ಥಾನದ ವಾರ್ಷಿಕ ಉತ್ಸವವು ತಾ.15ರಿಂದ 26ರವರೆಗೆ ನಡೆಯಲಿದ್ದು ಉತ್ಸವಕ್ಕೆ ತಾ.15ರಂದು ಚಾಲನೆ ನೀಡಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟ್ ಅಧ್ಯಕ್ಷ ಬಿ.ದಿವಾಕರನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿವಾಕರನ್ ಆದಿ ಬೈತೂರಪ್ಪ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉತ್ಸವವನ್ನು ಹಮ್ಮಿಕೊಂಡಿದ್ದು ತಾ. 22ರಂದು ಪುಗ್ಗೇರ ಕುಟುಂಬದ ಎತ್ತುಪೋರಾಟ, ಅಕ್ಕಿ ಅಳೆಯುವುದು, ತಾ. 23ರಂದು ಅಪರಾಹ್ನ ಹಾಗೂ ರಾತ್ರಿ ಉತ್ಸವದ ಪೂಜೆಗಳು, ಅದೇ ದಿನ ರಾತ್ರಿ 10ಗಂಟೆಗೆ ಬೇಟೆಕುರ್ಮ ದೇವರಿಗೆ 1000 ತೆಂಗಿನಕಾಯಿ ಈಡುಗಾಯಿ ಹಾಕುವುದು. ತಾ.24ರಂದು ದೇವರ ದರ್ಶನ, ಆನೆ ಅಂಬಾರಿ, ಉತ್ಸವ ಮೂರ್ತಿಯ ತಡಂಬು ಕಾರ್ಯಕ್ರಮ, ಚಂಡೆಮೇಳದೊಂದಿಗೆ ಮೆರವಣಿಗೆ ದೇವಾಲಯದ ಸುತ್ತ ಪ್ರದಕ್ಷಿಣೆ ಬರಲಿದೆ.ಅದೇ ದಿನ ಪತ್ತೂಟ್ ಕಾರ್ಯಕ್ರಮ ಜರುಗಲಿದೆ. ತಾ25ರಂದು ಕೊಡಗಿನವರ ದೇವರ ದರ್ಶನ ಜರುಗಲಿದ್ದು ಹತ್ತು ದಿನಗಳವರೆಗೆ ನಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಬೈತೂರು ದೇವಾಲಯದ ಟ್ರಸ್ಟ್‍ನ ಪುಗ್ಗೇರ ನಂದಾ ಸುಬ್ಬಯ್ಯ ಮಾತನಾಡಿ ಬೈತೂರು ಉತ್ಸವದಲ್ಲಿ ಕೊಡಗಿನವರು ಸಾಂಪ್ರದಾಯಿಕ ಕೊಡಗಿನ ಉಡುಪನ್ನು ಧರಿಸಿ ಬರಬೇಕು. ಅನ್ನ ಸಂತರ್ಪಣೆಗೆ ಅಕ್ಕಿ, ತರಕಾರಿ ಇತರ ಧವಸ ಧಾನ್ಯಗಳನ್ನು ನೀಡುವವರು ಕಿರಣ್ ಮೊ. 9448531717 ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಬೈತೂರು ಉತ್ಸವದಲ್ಲಿ ಭಾಗಿಯಾಗುವ ಕೊಡಗಿನ ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ಮೊ. 9447519276 ಇಲ್ಲವೇ 9480556625 ನಂಬರ್‍ನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಟ್ರಸ್ಟಿ ಪುಗ್ಗೇರ ರಂಜಿದೇವಯ್ಯ ಮಾತನಾಡಿ ಬೈತೂರು ದೇವಾಲಯದಲ್ಲಿ ನಿರ್ಮಿಸಿರುವ ಭೋಜನಾಲಯದ ಕಟ್ಟಡದ ಕಾಮಗಾರಿ ಇನ್ನು ಅಪೂರ್ಣಗೊಂಡಿದ್ದು ಕೊಡಗಿನ ದಾನಿಗಳು ಇದನ್ನು ಪೂರ್ಣಗೊಳಿಸಲು ಸಹಾಯ ಮಾಡುವಂತೆ ಕೋರಿದರು.
ಗೋಷ್ಠಿಯಲ್ಲಿ ಉತ್ಸವ ಸಮಿತಿ ಉಪಾಧ್ಯಕ್ಷ ಪಿ.ಕುಂಞರಾಮನ್, ಉತ್ಸವ ಸಮಿತಿ ಪ್ರಮುಖರಾದ ಪಿ.ಪಿ.ಕುಂಞನ್, ಟ್ರಸ್ಟಿ ವಿನು ಪುದುಚೇರಿ, ಟ್ರಸ್ಟಿ ಪುಗ್ಗೇರ ಪೊನ್ನಪ್ಪ, ಮಾಳೇಟಿರ ರತನ್ ಸುಬ್ಬಯ್ಯ, ಮತ್ತಿತರರು ಹಾಜರಿದ್ದರು.