ಕುಶಾಲನಗರ, ಜ. 13: ಪ್ರಕೃತಿ, ಪರಿಸರ, ನದಿ ಮೂಲಗಳನ್ನು ಆರಾಧಿಸುವ ಮೂಲಕ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕರಾದ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಹುಣ್ಣಿಮೆ ಅಂಗವಾಗಿ ನದಿಗೆ 102ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಆರತಿ ಕಾರ್ಯಕ್ರಮದ ಅಂಗವಾಗಿ ಅರ್ಚಕ ಕೃಷ್ಣಮೂರ್ತಿ ಭಟ್ ಪೂಜಾ ವಿಧಿ ನೆರವೇರಿಸಿದರು. ಅಷ್ಟೋತ್ತರ, ಮಹಾಮಂಗಳಾರತಿ ಬಳಿಕ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು.

ಈ ಸಂದರ್ಭ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ. ಎನ್. ವಸಂತಕುಮಾರ್, ಗೌರವ ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸರಾವ್, ಕಾವೇರಿ ರಿವರ್ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಎಂ. ಎನ್. ಚಂದ್ರಮೋಹನ್, ಉಪಾಧ್ಯಕ್ಷ ಡಿ. ಆರ್. ಸೋಮಶೇಖರ್, ಕೆ.ಆರ್.ಶಿವಾನಂದ, ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಬೋಸ್ ಮೊಣ್ಣಪ್ಪ, ಹಾಜರಿದ್ದರು.

ಕುಶಾಲನಗರ ಕೊಪ್ಪ ಬಳಿಯ ಕಾವೇರಿ ಪ್ರತಿಮೆಗೆ ಹುಣ್ಣಿಮೆ ಅಂಗವಾಗಿ ಅಭಿಷೇಕ, ಅರ್ಚನೆ ಕಾರ್ಯಕ್ರಮಗಳು ಜರುಗಿದವು. ಬಾರವಿ ಕನ್ನಡ ಸಂಘ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್ ಮತ್ತಿತರರು ಇದ್ದರು. ಪೂಜಾ ಕಾರ್ಯಕ್ರಮ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.