ಶನಿವಾರಸಂತೆ ಸಮೀಪದ ಬೆಂಬಳೂರು ಗ್ರಾಮದಲ್ಲಿ ತಾ.16 ರಂದು ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಪ್ರತಿ ವರ್ಷ ಮಕರ ಸಂಕ್ರಾತಿಯ ಮಾರನೇ ದಿನ ನಡೆಯುವ ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಭಕ್ತಾದಿಗಳ ಹರಕೆ ಈಡೇರುತ್ತದೆ. ಎಂಬ ನಂಬಿಕೆಯೂ ಜನ ಮನದಲ್ಲಿದ್ದು, ಜಾತ್ರೆಗೆ ಕೊಡ್ಲಿಪೇಟೆ, ಯಸಳೂರು ಶನಿವಾರಸಂತೆ ಮುಂತಾದ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.

ಜಾತ್ರಾ ಹಿನ್ನಲೆ : ಗ್ರಾಮದ ಬಾಣಂತಮ್ಮ ದೇವಿಗೆ 7 ಜನ ಗಂಡು ಮಕ್ಕಳು ಪತಿ ಗೋಪಾಲಕೃಷ್ಣ ದೇವರನ್ನು ಕೆರೆ ಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದೆ. 7 ಜನ ಮಕ್ಕಳಲ್ಲಿ ಹಿರಿಯರಾದ ದೊಡ್ಡಯ್ಯನನ್ನು ಕೊಂಗಳ್ಳೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಪ್ರತಿ ವರ್ಷ ಅಲ್ಲಿ ಸಂಕ್ರಾಂತಿ ಹಬ್ಬದ ನಂತರ ದೊಡ್ಡಯ್ಯನ ಜಾತ್ರೆ ನಡೆಯುತ್ತದೆ. ಎರಡನೇ ಮಗ ಕುಮಾರಲಿಂಗೇಶ್ವರ ಸ್ವಾಮಿಯನ್ನು ಶಾಂತಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿ ವರ್ಷ ಜ.15ರಂದು ಕುಮಾರಲಿಂಗೇಶ್ವರ ಜಾತ್ರೆ ನಡೆಯುತ್ತದೆ. ಮೂರನೇ ಮಗನನ್ನು ಹುಲುಕೋಡು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದು ಹುಲುಕೋಡಯ್ಯನ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ 4ನೇ ಮಗ ದೊಡ್ಡಕುಂದೂರು ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಪ್ರತಿ ವರ್ಷ ಜನವರಿ 17 ರಂದು ಒಬ್ಬೆ ಕುಮಾರಲಿಂಗೇಶ್ವರ ಹೆಸರಿನಲ್ಲಿ ಈ ಜಾತ್ರೆ ನಡೆಯುತ್ತದೆ.

5ನೇ ಮಗನನ್ನು ಹೆತ್ತೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದೆ ಇಲ್ಲಿ ಪ್ರತಿ ವರ್ಷ ಜ.16 ರಂದು ಹೆತ್ತೂರು ಕುಮಾರಲಿಂಗೇಶ್ವರ ಎಂಬ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ 6ನೇ ಮಗ ಕಿತ್ತೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದು, ಅಲ್ಲಿಯೂ ತಾ. 16 ರಂದು ಕಿತ್ತೂರು ಶ್ರೀ ಕುಮಾರಲಿಂಗೇಶ್ವರ ಎಂಬ ಹೆಸರಿನಲ್ಲಿ ಜಾತ್ರೆ ನಡೆಯುತ್ತಿರುವುದು ಐತಿಹಾಸಿಕವಾಗಿದೆ.

ಬಾಣಂತಮ್ಮ ದೇವಿಯ ಕೊನೆಯ ಮಗನೇ ಕುಂಟ ಶ್ರೀ ಕುಮಾರಲಿಂಗೇಶ್ವರ ಈತನು ತನ್ನನ್ನು ತೊರೆದು ಬೇರೆಡೆಗೂ ಹೋಗುತ್ತಾನೆ ಎಂದು ಭಾವಿಸಿ ತಾಯಿ ಬಾಣಂತಮ್ಮ ದೇವಿ ದೊಣ್ಣೆಯಿಂದ ಮಗನ ಕಾಲಿಗೆ ಹೊಡೆದು ಒಂದು ಕಾಲನ್ನು ಮುರಿದು ಕೂರಿಸಿದಳೆನ್ನಲಾಗಿದೆ. ತಾನು ಬೆಂಬಳೂರು ಗ್ರಾಮದಲ್ಲೇ ಉಳಿದರೆ ತನಗೇನು ಕೊಡುವೆ ಎಂದು ಮಗ ತಾಯಿಯನ್ನು ಪ್ರಶ್ನಿಸಿದಾಗ ಪ್ರತಿ ವರ್ಷ ಮಕರ ಸಂಕ್ರಾಂತಿಯ ಮರುದಿನ ನಡೆಯುವ ಜಾತ್ರೆಯಲ್ಲಿ ಒಪ್ಪೊತ್ತಿನ ಜಾತ್ರೆಯನ್ನು ಬಿಟ್ಟುಕೊಡುವುದಾಗಿ ಮಾತು ಕೊಟ್ಟ ಪ್ರಕಾರ ಪ್ರತಿ ವರ್ಷ ಬೆಳಿಗ್ಗೆಯಿಂದ ಸಂಜೆ ತನಕ ನಡೆಯುವ ಒಂದು ದಿನದ ಜಾತ್ರೆಗೆ ಬೆಳಿಗ್ಗೆ ತಾಯಿ ಶ್ರೀಮತಿ ಬಾಣಂತಮ್ಮನ ಹೆಸರಿನಲ್ಲಿ ನಡೆದರೆ ಮದ್ಯಾಹ್ನದ ನಂತರ ಕುಂಟ ಶ್ರೀ ಕುಮಾರಲಿಂಗೇಶ್ವರನ ಹೆಸರಿನಲ್ಲಿ ನಡೆಯುತ್ತದೆ. ಕುದುರೆಯ ಮೇಲೆ ಕುಳಿತ ಕುಮಾರಲಿಂಗೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಕುಂಟುತ್ತಲೇ ಮೆರವಣಿಗೆಯಲ್ಲಿ ತರಲಾಗುತ್ತದೆ.

ಬೆಂಬಳೂರು ಗ್ರಾಮದ ಗೌಡನಮನೆ ಕಲ್ಲೇಗೌಡ್ರು ತೋಡಿಸಿದ ದೊಡ್ಡ ಕೆರೆಯಲ್ಲಿ ನೀರು ಬಾರದಿದ್ದಾಗ ಶ್ರೀಮತಿ ಬಾಣಂತಮ್ಮ ದೇವಿಯನ್ನು ಪೂಜಿಸಲಾಗಿ ಕೆರೆಯು ನೀರಿನಿಂದ ತುಂಬಿತುಳುಕಿತೆನ್ನ ಲಾಗಿದೆ. ಅಂದಿನಿಂದ ಬಾಣಂತಮ್ಮ ಅಲ್ಲಿಯೇ ಪ್ರತಿಷ್ಠಾಪಿಸಲ್ಪಟ್ಟು ಪ್ರತಿ ವರ್ಷ ಪೂಜೆ ನಡೆದು ಜಾತ್ರೆ ನಡೆಯುತ್ತದೆ. ಜ. 15 ರಂದೇ ಶ್ರೀಮತಿ ಬಾಣಂತಮ್ಮ ಜಾತ್ರೆಯ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಅಂದು ಬೆಳಗ್ಗೆಯಿಂದ ಸಂಜೆಯ ತನಕ ಮಡೆ ಪೂಜೆಗಾಗಿ ಭಕ್ತಾದಿಗಳಿಂದ ಹರಕೆಯ ರೂಪದಲ್ಲಿ ಅಕ್ಕಿ, ಬೆಲ್ಲ, ತರಕಾರಿಗಳನ್ನು ಊರ ಪಟೇಲರ ಮನೆಯಲ್ಲಿ ಸ್ವೀಕರಿಸಲಾಗುತ್ತದೆ. ಮತ್ತು ಸಂಜೆ 5.30 ಗಂಟೆಗೆ ಬಾಣಂತಮ್ಮ ಮತ್ತು ಕುಮಾರ ಲಿಂಗೇಶ್ವರ ದೇವರಿಗೆ ಗಂಗಾಸ್ನಾನ ಮಾಡಿಸಲಾಗುವುದು. ರಾತ್ರಿ 9.30 ಕ್ಕೆ ಮಡೆ ಪೂಜೆ ಮಾಡಿ ಉಪವಾಸ ಇರುವ ಗ್ರಾಮಸ್ಥರು ಪಟೇಲರ ಮನೆಯಿಂದ ಮಡೆಯನ್ನು ವಾದ್ಯಗೋಷ್ಟಿಯೊಂದಿಗೆ ಬಾಣಂತಮ್ಮನ ಕೆರೆಯ ಬಳಿ ಕೊಂಡೊಯ್ಯುತ್ತಾರೆ. ಉಪವಾಸ ಇದ್ದವರು ರಾತ್ರಿ ಅಲ್ಲಿಯೇ ಉಳಿದುಕೊಂಡು ಅಡುಗೆ ಮಾಡಿ ಮಾರನೆಯ ದಿನ ದೇವರಿಗೆ ಎಡೆ ಇಟ್ಟು ಜಾತ್ರೆಗೆ ಬಂದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡುತ್ತಾರೆ. ತಾ. 16 ರಂದು ಬೆಳಿಗ್ಗೆ 8 ಗಂಟೆಯಿಂದಲೇ ಜಾತ್ರೆ ಆರಂಭವಾಗಿ ಶ್ರೀಮತಿ ಬಾಣಂತಮ್ಮನನ್ನು ಪೂಜಿಸಿ ಮೆರವಣಿಗೆ ಮಾಡಲಾಗುತ್ತದೆ. 1 ಗಂಟೆಗೆ ಪೂಜಾ ವಿಧಿವಿಧಾನಗಳು ಪೂರ್ಣಗೊಳ್ಳುತ್ತವೆ. ಮದ್ಯಾಹ್ನ 2 ರಿಂದ ಶ್ರೀ ಕುಂಟ ಕುಮಾರಲಿಂಗೇಶ್ವರ ಜಾತ್ರೆ ಪ್ರಾರಂಭವಾಗಿ ಸಂಜೆ 5.00ಗೆ ಮುಗಿಯುತ್ತದೆ ಎಂದು ಜಾತ್ರೆ ಸಮಿತಿಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

- ನರೇಶ್ಚಂದ್ರ, ಶನಿವಾರಸಂತೆ.