ಪರೀಕ್ಷೆ ಎನ್ನುವುದು ಬಹುಪಾಲು ವಿದ್ಯಾರ್ಥಿಗಳಿಗೆ ಶಿಕ್ಷೆ. ಕೆಲವರಿಗೆ ಜೀವನದ ಕೈದೀವಿಗೆ. ಇದರಲ್ಲಿ ಗಳಿಸಿದ ಅಂಕಗಳ ಮೇಲೆಯೇ ಹಲವರ ಭವಿಷ್ಯವು ನಿರ್ಧಾರವಾಗುತ್ತದೆ. ಈ ವಿಚಾರ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಪ್ರಮುಖ ಎನಿಸದಿದ್ದರೂ, ಪ್ರತೀ ಪೋಷಕರ ಪಾಲಿಗೆ ಇದೇ ಪ್ರಮುಖ ಅಳತೆಗೋಲು.

ಆದರೆ, ಬಹುತೇಕ ಶಿಕ್ಷಕರಿಗೆ ವಿದ್ಯಾರ್ಥಿಯ ಅಧಿಕ ಅಂಕ ಗಳಿಕೆ, ಅಥವಾ ಸಂಸ್ಥೆಯ ಶೇಕಡವಾರು ಫಲಿತಾಂಶವೇ ತಮ್ಮ ಹೊಟ್ಟೆಪಾಡಿಗೆ ಶ್ರೀರಕ್ಷೆ ! ಇದನ್ನು ಉಳಿಸಿಕೊಳ್ಳಲು ಪ್ರತೀ ವರ್ಷವೂ ಕಲಿಕೆಯಲ್ಲಿ ವಿನೂತನ ತಂತ್ರದ ಮೊರೆ ಹೋಗಬೇಕಾಗಿರುವುದು ಅನಿವಾರ್ಯ. ಇಲ್ಲದಿದ್ದರೆ, ತುತ್ತು ಅನ್ನಕ್ಕೂ ಯಾ ಉದ್ಯೋಗಕ್ಕೂ ಕಲ್ಲು ಬೀಳುವ ಸಾಧ್ಯತೆಗಳೇ ಅಧಿಕ. ಇದನ್ನೆಲ್ಲ ಅರಿತ ಶಿಕ್ಷಕರು ಶೈಕ್ಷಣಿಕ ವರ್ಷದಾರಂಭದಿಂದಲೇ ಹಿಂದಿನ ವರ್ಷಕ್ಕಿಂತ ವಿಭಿನ್ನ ರೀತಿಯನ್ನು ಅನುಸರಿಸುತ್ತಾರೆ.

ತಾವು ಕಲಿಸುತ್ತಿರುವ ವಿಷಯದಲ್ಲಿ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು. ಅವರ ಶೇಕಡವಾರು ಹೆಚ್ಚಿರಬೇಕು ಎಂಬುದು ಪ್ರೌಢಶಾಲೆಯಿಂದ ಕಾಲೇಜು ಮಟ್ಟದವರೆಗಿನ ಅಧ್ಯಾಪಕ ವೃಂದದವರಿಗೆ ಅಲಿಖಿತ ಷರತ್ತು. ಇದಕ್ಕಾಗಿ ಅನುಭವಿ ಶಿಕ್ಷಕರು ತಮ್ಮದೇ ಆದ ಕಲಿಕಾ ವಿಧಾನಗಳನ್ನು ಕಂಡುಕೊಂಡಿರುತ್ತಾರೆ. ಶಿಕ್ಷಕ ವೃತ್ತಿಯ ತರಬೇತಿ ಪಡೆದವರು ಈ ವಿಚಾರವನ್ನು ಅರಿತಿರುತ್ತಾರೆ. ಆದರೆ, ಎಲ್ಲರೂ ಅದರಲ್ಲಿ ಪ್ರಾವೀಣ್ಯತೆ ಪಡೆದಿರುವುದಿಲ್ಲ. ಹೊಸದಾಗಿ ಶಿಕ್ಷಕ ವೃತ್ತಿಗೆ ಆಗಮಿಸಿದವ ರನ್ನು ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

v ಅಂದಂದಿನ ಪಠ್ಯದ ವಿಚಾರಗಳನ್ನು ಅಂದೇ ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಸಲು ಶ್ರಮಿಸಿದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು.

v ಅಂದಂದಿನ ಪಾಠಕ್ಕೆ ಸಂಬಂಧಿಸಿದ ಪ್ರಶ್ನೋತ್ತರವನ್ನು ಅಂದೇ ನೀಡುವಂತಾಗಬೇಕು.

v ಅಂದಿನ ಪಾಠಗಳ ಪುನರಾವರ್ತನೆಗಾಗಿ ಅದೇ ಪಾಠಕ್ಕೆ ಸಂಬಂಧಿಸಿದಂತೆ ಮನೆಕೆಲಸ ಕೊಡಬೇಕು.

v ಪ್ರತೀ ಪಾಠ-ಅಧ್ಯಾಯ ಮುಗಿದ ಕೂಡಲೇ ಅದಕ್ಕೆ ಸಂಬಂಧಿತ ಪರೀಕ್ಷೆ ಮಾಡಿಸಬೇಕು.

v ಹಿಂದಿನ ದಿನದ ಪಾಠವನ್ನು ಮಾರನೇ ದಿನದ ಆರಂಭದಲ್ಲಿ ಸಂಕ್ಷಿಪ್ತವಾಗಿ ವಿವರಿಸಿ. ಬಳಿಕ ಮುಂದುವರಿಯಿರಿ. ಇದರಿಂದ ಗೈರು ಹಾಜರಾದ ವಿದ್ಯಾರ್ಥಿಗಳಿಗೆ, ವಿಷಯ ಅರೆಬರೆ ಅರ್ಥವಾದವರಿಗೆ ಅನುಕೂಲವಾಗಲಿದೆ.

v ಪ್ರತೀ ವಿದ್ಯಾರ್ಥಿಯ ಅಕ್ಷರ ಲೋಪ, ವ್ಯಾಕರಣ ದೋಷಗಳ ಬಗ್ಗೆಯೂ ಗಮನಹರಿಸಿ.

v ಗಣಿತದ ಸೂತ್ರ,-ಚಿತ್ರ-ಭೂಪಟ, ನಕಾಶೆಗಳ ಬಗ್ಗೆಯೂ ಒತ್ತು ನೀಡಿ.

v ಬೋಧನಾ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳ ಮನಸ್ಸುಗಳನ್ನು ನಿಮ್ಮತ್ತ ಕೇಂದ್ರೀಕರಿಸಲು ಶ್ರಮಿಸಿ. ನೂಪುರ, ಕೈಬಳೆಗಳ ಸದ್ದು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಕೆಡಿಸೀತು.

v ಕ್ಲಿಷ್ಟ ವಿಷಯಗಳನ್ನು 2-3 ಬಾರಿ ಪುನರಾವರ್ತಿಸಿ. ಎಲ್ಲಾ ವಿದ್ಯಾರ್ಥಿ ಗಳು ಒಂದೇ ಸಮನಾದ ಗ್ರಹಣಾಶಕ್ತಿ ಪಡೆದಿರಲಾರರು.

v ಆಯಾ ಪಾಠವಾದ ಬಳಿಕ ನೋಟ್ಸ್ ನೀಡುವ ಬದಲು ಪ್ರಿಂಟ್ ಔಟ್ ನೀಡಿ. ‘ಪ್ರಿಂಟ್ ಔಟ್’ಗಳ ನೋಟ್ಸ್‍ನ್ನು ರಜಾ ದಿನಗಳಂದು ಮನೆಯಲ್ಲಿ ಒಂದೆರಡು ಬಾರಿ ಬರೆದು ತರಿಸಿ. ಇದರಿಂದ ಶಿಕ್ಷಕರಿಗೆ ನೋಟ್ಸ್ ಹೇಳುವುದು, ನೋಟ್ಸ್ ತಿದ್ದುವ ಸಮಯದ ಉಳಿತಾಯ.

v ಪ್ರತೀ ವಾರ್ಷಿಕ ಪರೀಕ್ಷೆಯ ದಿನಗಳಂದು ಪರೀಕ್ಷೆಗೆ ಮುನ್ನಾ ದಿನ ಬೆಳಿಗ್ಗೆ ಇಡೀ ವರ್ಷ ಕಲಿಸಿದ ಕ್ಲಿಷ್ಟ ಸಮಸ್ಯೆಗಳನ್ನು ಅತ್ಯಂತ ವೇಗವಾಗಿ ಪುನರಾವರ್ತಿಸಿ. ಗಣಿತ, ವಿಜ್ಞಾನ ಮುಂತಾದ ವಿಷಯಗಳ ಸಮಸ್ಯೆಗಳನ್ನು ಶಿಕ್ಷಕರೇ ಕರಿಹಲಗೆಯಲ್ಲಿ ಪರಿಹರಿಸಿ.

v ಶಿಕ್ಷಕ ವೃಂದವು ಸಮನ್ವಯತೆಯಿಂದ ವಿದ್ಯಾರ್ಥಿಗಳಿಗೆ ಮನೆಗೆಲಸ ನೀಡಿ. ಅದು ಹಿತಮಿತವಾಗಿರಲಿ. ವಿದ್ಯಾರ್ಥಿಗಳಿಗೆ ಭಾರವಾಗದಂತೆ ಜಾಗ್ರತೆ ವಹಿಸಿ.

v ವಿದ್ಯಾರ್ಥಿಗಳಿಗೆ ಅರ್ಥವಾಗಿಲ್ಲ ಎಂದು ಕಂಡು ಬಂದ ಸಮಸ್ಯೆಗಳನ್ನು ತರಗತಿಯಲ್ಲಿಯೇ ಮತ್ತೆ ಪುನರಾವರ್ತಿಸಿ. ಸಿಬ್ಬಂದಿ ಕೊಠಡಿಗೆ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿಗಳನ್ನು ಕರೆಯದಿರಿ. ಇದಕ್ಕಾಗಿ ಗ್ರಂಥಾಲಯ, ಪ್ರಯೋಗಾಲಯಗಳ ಬಳಕೆ ಸೂಕ್ತ.

v ಬರೆಯುವದರೊಂದಿಗೆ ಓದುವ ಮನೆಗೆಲಸವನ್ನೂ ಕೊಡಿ.

v ಸಾಧ್ಯವಾದಷ್ಟು ಹೆಚ್ಚು ‘ಸ್ಮಾರ್ಟ್ ಕ್ಲಾಸ್’ ಅನ್ನು ಬಳಸಿಕೊಳ್ಳಿ.

v ಪ್ರತೀ ತಿಂಗಳೂ ವಿದ್ಯಾಥಿ-ಪೋಷಕ-ಶಿಕ್ಷಕರು ಚರ್ಚೆ-ವಿಚರ್ಚೆ, ಕಿರು ಸಂವಾದ ನಡೆಸಿ.

ಪ್ರತೀ ಶಿಕ್ಷಕರೂ ವಿದ್ಯಾರ್ಥಿಯ ಜೀವನದ ಮೇಲೆ ಗಾಡ ಪ್ರಭಾವ ಬೀರುವಂತಹವರಾಗಲು, ಚಿರಸ್ಮರಣೀಯ ರಾಗಲು ಶ್ರಮಿಸಿ. ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರನ್ನು ಅನುಕರಿಸಿ.

-ಕೂಡಂಡ ರವಿ, ಹೊದ್ದೂರು.