ಕುಶಾಲನಗರ, ಜ 12: ಸಂಚಾರಿ ನಿಯಮ ಪಾಲಿಸುವ ಬಗ್ಗೆ ವಾಹನ ಚಾಲಕರಿಗೆ ಅರಿವು, ಜಾಗೃತಿ ಮೂಡಿಸುವ ಬಗ್ಗೆ ವಿನೂತನ ಕಾರ್ಯಕ್ರಮವೊಂದು ಕುಶಾಲನಗರದಲ್ಲಿ ನಡೆಯಿತು. ಪಟ್ಟಣದ ಮೂಲಕ ಹಾದುಹೋಗುವ ಹೆದ್ದಾರಿ ರಸ್ತೆಯಲ್ಲಿ ಯಮಧರ್ಮರಾಯರ ವೇಷಧಾರಿ ಇನ್ನೊಂದೆಡೆ ಚಿತ್ರಗುಪ್ತ ಜೊತೆಗೆ ಯಮಧರ್ಮರಾಯನ ವಾಹನ ಇವೆಲ್ಲವನ್ನು ಕಂಡು ದಿಗಿಲಾದ ವಾಹನ ಸವಾರರು!ಕುಶಾಲನಗರ ಪೊಲೀಸ್ ಉಪ ಅಧೀಕ್ಷಕ ಎಚ್.ಎಂ. ಶೈಲೇಂದ್ರ ಮಾರ್ಗದರ್ಶ ನದಲ್ಲಿ ವೃತ್ತ ನಿರೀಕ್ಷಕ ಮಹೇಶ್ ಅವರ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಮತ್ತು ಗ್ರಾಮಾಂತರ ಠಾಣೆ ಹಾಗೂ ಸಂಚಾರಿ ಪೊಲೀಸರು ಜಾಗೃತಿ ಕಾರ್ಯ ಕೈಗೊಂಡರು.ಭಾನುವಾರ ಸುಮಾರು ಎರಡು ಗಂಟೆ ಕಾಲ ಹೆಲ್ಮೆಟ್ ರಹಿತ ಸವಾರರಿಗೆ ಮತ್ತು ಸಂಚಾರಿ ನಿಯಮ ಪಾಲಿಸದ ಚಾಲಕರಿಗೆ ಗುಲಾಬಿ ಹೂ ಮತ್ತು ಚಾಕಲೆಟ್ ನೀಡಿ ಅಪಘಾತದಿಂದ ಆಗುವ ಅನಾಹುತದ ಬಗ್ಗೆ ಅರಿವು ಮೂಡಿಸುವಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದ್ದು ನಗರದ ಜನತೆಗೆ ಅಚ್ಚರಿ ಮೂಡಿಸಿತು.ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಮಾತನಾಡಿ, ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಮಯಗಳನ್ನು ಪಾಲಿಸಬೇಕಿದೆ. ಅಸುರಕ್ಷಿತ ವಾಹನ ಚಾಲನೆ ಮೂಲಕ ಪ್ರತಿನಿತ್ಯ ಪ್ರಾಣಹಾನಿ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ ಎಂದರು.

ವೃತ್ತ ನಿರೀಕ್ಷಕ ಎಂ.ಮಹೇಶ್ ಮಾತನಾಡಿ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದೆ. ಪ್ರಾರಂಭ ದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿ ಸುವವರಿಗೆ ಗುಲಾಬಿ ಮತ್ತು

(ಮೊದಲ ಪುಟದಿಂದ) ಚಾಕಲೆಟ್ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಯಮಧರ್ಮ ಮತ್ತು ಚಿತ್ರಗುಪ್ತ ವೇಷಧಾರಿ ಪೊಲೀಸರ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವ ಚಾಲಕರಿಂದ ಉಂಟಾಗುವ ಅಪಘಾತದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದರು.

ಇದೇ ಸಂದರ್ಭ ಹೆಲ್ಮೆಟ್, ಸೀಟ್ ಬೆಲ್ಟ್, ಸಮವಸ್ತ್ರ ಧರಿಸದೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು, ಕಾರು, ಬಸ್, ಲಾರಿ ಚಾಲಕರಿಗೆ ಗುಲಾಬಿಯೊಂದಿಗೆ ಚಾಕಲೆಟ್ ನೀಡುವ ಮೂಲಕ ನಿಯಮಗಳನ್ನು ಪಾಲಿಸುವಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿ ಸೂಚನೆ ನೀಡಿದರು. ಯಮ ಮತ್ತು ಚಿತ್ರಗುಪ್ತ ವೇಷಧಾರಿಗಳಾಗಿ ಇಲಾಖೆಯ ಸಿಬ್ಬಂದಿ ಸಜಿ ಮತ್ತು ಸುಂಟಿಕೊಪ್ಪದ ಪಾರ್ಥ ಅವರುಗಳು ಪ್ರಯಾಣಿಕರು ಮತ್ತು ಸಾರ್ವಜನಿಕರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಠಾಣಾಧಿಕಾರಿಗಳಾದ ವೆಂಕಟರಮಣ, ಗ್ರಾಮಾಂತರ ಠಾಣೆಯ ನಂದೀಶ್, ಸಂಚಾರಿ ವಿಭಾಗದ ಅಚ್ಚಮ್ಮ, ಸುಂಟಿಕೊಪ್ಪ ಠಾಣೆಯ ತಿಮ್ಮಪ್ಪ, ಸಿಬ್ಬಂದಿಗಳಾದ ಜೋಸೆಫ್, ರವೀಂದ್ರ, ಸಹದೇವ್ ಮತ್ತಿತರರು ಇದ್ದರು.