ಮಡಿಕೇರಿ, ಜ. 12: ಕೆಲವು ದಿನಗಳ ಹಿಂದೆ ಭಾರತ-ಬಾಂಗ್ಲಾ ಗಡಿಯಲ್ಲಿ ಸೆರೆ ಸಿಕ್ಕಿರುವ ಐಸಿಸ್ ಉಗ್ರ, ಮೊೈದೀನ್ ಸಿ. ಕ್ವಾಜಾ ನೀಡಿರುವ ಸುಳಿವಿನ ಮೇರೆಗೆ, ಬೆಂಗಳೂರು ಮತ್ತಿತರೆಡೆಗಳಲ್ಲಿ ಬಂಧಿಸಲ್ಪಟ್ಟಿರುವ 12 ಮಂದಿ ಶಂಕಿತ ಉಗ್ರರಿಂದ ಸ್ಫೋಟಕ ಮಾಹಿತಿಯು ಪೊಲೀಸ್ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಅಲ್ಲದೆ ಈ ಮಂದಿ ದಕ್ಷಿಣ ಭಾರತದ ಪ್ರಮುಖ ನಗರಿಗಳೊಂದಿಗೆ ದೇಶದ್ರೋಹಿ ಕೃತ್ಯ ಎಸಗಲು ಕೊಡಗು ಜಿಲ್ಲೆಯನ್ನು ಕೂಡ ಆಯ್ಕೆ ಮಾಡಿಕೊಂಡಿರುವುದು ಖಚಿತವಾಗಿದೆ.ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಕೊಡಗಿನ ಕಾಫಿ ತೋಟಗಳು ಹಾಗೂ ಕೇರಳ ಗಡಿ ಭಾಗದ ಅರಣ್ಯ ಪ್ರದೇಶವನ್ನು ಶಂಕಿತ ಉಗ್ರರು ಸಮಾಜ ಘಾತುಕ ಚಟುವಟಿಕೆಯ ಅಡಗುದಾಣವಾಗಿ ಬಳಸಿಕೊಳ್ಳಲು ಸಂಚು ನಡೆಸಿರುವುದು ಬೆಳಕಿಗೆ ಬಂದಿದೆ.ವ್ಯಾಪಾರದ ಸೋಗು: ಮಾತ್ರವಲ್ಲದೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪಲು ಮತ್ತಿತರೆಡೆಗಳಲ್ಲಿ ಐಸಿಸ್ ನಂಟು ಹೊಂದಿರುವ ಹೊರ ರಾಜ್ಯಗಳ ಮಂದಿ ವ್ಯಾಪಾರದ ಸೋಗಿನಲ್ಲಿ ಸಂಪರ್ಕ ಸಾಧಿಸಿ, ವಿದ್ರೋಹಿ ಚಟುವಟಿಕೆಗಳಿಗೆ ಪ್ರಚೋದಿಸುತ್ತಿರುವ ಸಂಗತಿಗಳು ಆಗಿಂದಾಗ್ಗೆ ಸುದ್ದಿಯಾಗುತ್ತಿದೆ.
ಇಂತಹ ವಿದ್ರೋಹಿಗಳೊಂದಿಗೆ ಕೈಜೋಡಿಸುವ ವ್ಯಕ್ತಿಗಳಿಗೆ ರಹಸ್ಯ ತರಬೇತಿ ನೀಡಿ, ದೇಶದ್ರೋಹಿ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿರುವ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಕಣ್ಗಾವಲು ಇರಿಸಿದೆ.
ಗೋಣಿಕೊಪ್ಪಲು ವರದಿ
ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಇತ್ತೀಚೆಗೆ ಹೊರ ರಾಜ್ಯದಲ್ಲಿ ಸೆರೆ ಸಿಕ್ಕ 12 ಉಗ್ರರ ನಂಟು ಬಯಲಾಗುತ್ತಿದ್ದಂತೆಯೇ ಐಸಿಸ್ ಬೆಂಬಲಕ್ಕೆ ನಿಂತ ಸಮಾಜಘಾತುಕರು ಕೊಡಗಿನ ಗೋಣಿಕೊಪ್ಪ ಸುತ್ತ, ಮುತ್ತಲಿನ ಅರಣ್ಯ ಪ್ರದೇಶ ಹಾಗೂ ಕಾಫಿ ತೋಟವನ್ನು ತಮ್ಮ ಅಡಗು ತಾಣವಾಗಿ ಇಟ್ಟುಕೊಂಡು; ಇಂತಹ ಉಗ್ರರಿಗೆ ತರಬೇತಿ ನೀಡಲು ಮುಂದಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
‘ಶಕ್ತಿ’ ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ, ಸಂಶಯಾಸ್ಪದ ಒಂದಷ್ಟು ಮಾಹಿತಿಗಳು ದೊರಕಿವೆ. ಗೋಣಿಕೊಪ್ಪಲು ಸುತ್ತಲಿನ ಪ್ರದೇಶದಲ್ಲಿ ಅರಣ್ಯ ಕಂಡು ಬರುತ್ತಿಲ್ಲ. ಬದಲಾಗಿ ಉಗ್ರರು ಕಾಫಿ ತೋಟಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ? ಎಂಬ ಅಂಶಗಳನ್ನು ಅಲ್ಲಗಳೆಯುವಂತಿಲ್ಲ. ದೊಡ್ಡ ಪ್ರಮಾಣದ ಕಾಫಿ ತೋಟಗಳು ಇತ್ತೀಚೆಗೆ ಹೊರ ರಾಜ್ಯದ ಪ್ರಭಾವಿಗಳಿಗೆ ಇಲ್ಲಿನ ಮಂದಿ ಮಾರಾಟ ಮಾಡಿದ ಕುರಿತು ಯಾವುದೇ ರೀತಿಯ ಸುದ್ದಿಗಳಿಲ್ಲ.
ಒಂದು ವೇಳೆ ಬೃಹತ್ ಪ್ರಮಾಣ ದಲ್ಲಿ ಕಾಫಿ ತೋಟದಲ್ಲಿ ಇಂತಹ ತರಬೇತಿಗೆ ಸಂಚು ರೂಪಿಸಿದ್ದರೆ, ಸಲೀಸಾಗಿ ಓಡಾಟ ನಡೆಸಲು ರಸ್ತೆ ವ್ಯವಸ್ಥೆಯೂ ಇವರಿಗೆ ಅವಶ್ಯಕತೆ ಇರುತ್ತದೆ. ತಾವು ಅಂದುಕೊಂಡಂತೆ ತರಬೇತಿ ನೀಡಿ ಯಶಸ್ವಿಯಾದಲ್ಲಿ ಈ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಸೋರಿಕೆಯಾದ ಕ್ಷಣಾರ್ಧ ದಲ್ಲಿ ಇಲ್ಲಿಂದ ಸುಗಮವಾಗಿ ಜಾಗ ಖಾಲಿ ಮಾಡಲು ಇವರು ಕೊಡಗಿನ ಗಡಿ ಮೂಲಕ ಮಟ್ಟನೂರಿನ ವಿಮಾನ ನಿಲ್ದಾಣ ಹಾಗೂ ಮೈಸೂರು ರಾಜ್ಯ ಹೆದ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಸ್ಥಳವನ್ನು ಆಯ್ಕೆ ಮಾಡಿಕೊಂಡಿರಬಹುದೇ ಎಂಬ ಶಂಕೆ ಹುಟ್ಟಿಕೊಂಡಿದೆ.
ಈಗಾಗಲೇ ಉಗ್ರರು ತಮಿಳು ನಾಡಿನ ಎಎನ್‍ಐ ವಶದಲ್ಲಿರುವುದ ರಿಂದ ಇನ್ನಷ್ಟು ಮಾಹಿತಿಗಳು ಹೊರಬರಬೇಕಾಗಿದೆ.
ಉಗ್ರರ ಸಹಕಾರಕ್ಕಾಗಿ ಆರ್ಥಿಕ ಸಂಪನ್ಮೂಲಗಳ ಬಗ್ಗೆ ಗೋಣಿಕೊಪ್ಪದ ವ್ಯಕ್ತಿಯೊಬ್ಬರು ಸಹಾಯ ಹಸ್ತ ನೀಡಿರುವ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಕುತೂಹಲದೊಂದಿಗೆ ಚರ್ಚೆ ನಡೆಯುತ್ತಿವೆ.
-ಹೆಚ್.ಕೆ. ಜಗದೀಶ್