ಚೆಟ್ಟಳ್ಳಿ, ಜ. 12: ದೇಶಾದ್ಯಂತ ಎನ್.ಆರ್.ಸಿ, ಸಿಎಎ ಪರ ವಿರೋಧ ಚರ್ಚೆಗಳು ನಡೆಯುತಲಿದ್ದು, ಕುಶಾಲನಗರದ ತಾಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಎನ್.ಆರ್.ಸಿ ಹಾಗೂ ಸಿಎಎ ವಿರುದ್ಧ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕುಶಾಲನಗರದ ಕೆಲವು ಬಡಾವಣೆಗಳಿಗೆ ತೆರಳಿ ಸಿಎಎ ಹಾಗೂ ಎನ್.ಆರ್.ಸಿ ವಿರುದ್ಧ ಸಾರ್ವಜನಿಕರಿಗೆ ಅರಿವು ಮೂಡಿಸಿದ ತಾಲ್ಲೂಕು ಮುಸ್ಲಿಂ ಒಕ್ಕೂಟದ ಕಾರ್ಯಕರ್ತರು, ಮನೆಗಳ ಮುಂಭಾಗ ಎನ್.ಆರ್.ಸಿ ಹಾಗೂ ಸಿಎಎ ಗೆ ವಿರೋಧ ವ್ಯಕ್ತಪಡಿಸುವ ಬಿತ್ತಿಪತ್ರಗಳನ್ನು ಅಂಟಿಸಿದರು.

ನಂತರ ಮಾತನಾಡಿದ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಶರೀಫ್ ಮಾತನಾಡಿ, ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದ್ದು, ಎನ್.ಆರ್.ಸಿ ಹಾಗೂ ಸಿಎಎ ಅಂತಹ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಇವುಗಳನ್ನು ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ದಂಡಿನಪೇಟೆ ನೂರ್ ಮಸ್ಜಿದ್ ಅಧ್ಯಕ್ಷ ಮಾತನಾಡಿ, ಎನ್.ಆರ್.ಸಿ ಹಾಗೂ ಸಿಎಎ ವಿರುದ್ಧ ದೇಶದಲ್ಲಿ ಭಾರೀ ಅಪಸ್ವರಗಳು ಕಾಣುತ್ತಿವೆ. ಎನ್.ಆರ್.ಸಿ ಯು ಭಾರತೀಯರ ದೇಶಾಭಿಮಾನವನ್ನು ಪರೀಕ್ಷಿಸುವಂತಹ ಕಾಯ್ದೆಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಕಾಯ್ದೆಯನ್ನು ಜಾರಿಗೊಳಿಸಬಾರದು. ಬಿಜೆಪಿ ಪಕ್ಷದವರು ಎನ್.ಆರ್.ಸಿ ಹಾಗೂ ಸಿಎಎ ಬಗ್ಗೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ಈ ಸಂದರ್ಭ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹನೀಫ್, ಒಕ್ಕೂಟದ ಪ್ರಮುಖರಾದ ಶೆಫಿ, ಅಕ್ಬರ್, ರಫೀಕ್, ಮೊಯಿದೀನ್ ಹಾಗೂ ಇನ್ನಿತರರು ಇದ್ದರು.