ಕುಶಾಲನಗರ, ಜ. 12: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆಶ್ರಯದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ಸಹಯೋಗದೊಂದಿಗೆ ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಆವರಣ ಮತ್ತು ಕಾವೇರಿ ನದಿ ತಟದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಗ್ರಾಮಾಭಿವೃದ್ದಿ ಯೋಜನೆಯ ಶ್ರದ್ದಾ ಕೇಂದ್ರಗಳ ಸ್ವಚ್ಛತಾ ಕಾರ್ಯ ಯೋಜನೆಯಡಿಯಲ್ಲಿ 6ನೇ ವರ್ಷದ ಕಾರ್ಯಕ್ರಮಕ್ಕೆ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಚಾಲನೆ ನೀಡಿದರು. ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಹರೀಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಅಯ್ಯಪ್ಪಸ್ವಾಮಿ ದೇವಾಲಯ ಆವರಣ ಸೇರಿದಂತೆ ಕಾವೇರಿ ನದಿ ತಟದಲ್ಲಿ, ನದಿಯೊಳಗೆ ಹರಡಿದ್ದ ಪ್ಲಾಸ್ಟಿಕ್, ಕಸ ತ್ಯಾಜ್ಯಗಳನ್ನು ಸಂಗ್ರಹಿಸಿ ತೆರವುಗೊಳಿಸಿದರು.
ಕಾವೇರಿ ನದಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಬೋಸ್ ಮೊಣ್ಣಪ್ಪ, ನದಿ ಸ್ವಚ್ಛತಾ ಆಂದೋಲನ ಸಮಿತಿಯ ಬಿ.ಜೆ. ಅಣ್ಣಯ್ಯ, ಪ.ಪಂ. ಆರೋಗ್ಯಾಧಿಕಾರಿ ಉದಯಕುಮಾರ್, ಅಭಿಯಂತರೆ ಶ್ರೀದೇವಿ, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ, ಒಕ್ಕೂಟದ ಅಧ್ಯಕ್ಷೆ ಬುಷೀರ್ ಮತ್ತಿತರರು ಇದ್ದರು.