ಶನಿವಾರಸಂತೆ, ಜ. 13: ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ದೇವಾಂಗ ಸಂಘದ ವತಿಯಿಂದ ಶುಕ್ರವಾರ ಬನದ ಹುಣ್ಣಿಮೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಿಗ್ಗೆ ಮಹಾಗಣಪತಿ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ನವಗ್ರಹ ಪೂಜಾ ಅಮ್ಮನವರಿಗೆ ಫಲಪಂಚಾಮೃತ ಅಭಿಷೇಕ, ದುರ್ಗಾಪೂಜೆ, ಶ್ರೀಸೂಕ್ತ ಜಲಾಭಿಷೇಕ ಅಲಂಕಾರ ಸೇವೆ ನಡೆಯಿತು. ಮಹಾಗಣಪತಿ, ನವಗ್ರಹ, ಮೃತ್ಯುಂಜಯ ದುರ್ಗಾ ವಾಸ್ತುಪೂಜೆ ಹಾಗೂ ಹೋಮ ನಡೆದು ಪೂರ್ಣಾಹುತಿ ಮಹಾ ಮಂಗಳಾರತಿ ಮಾಡಲಾಯಿತು. ತೀರ್ಥ ಪ್ರಸಾದ ವಿನಿಯೋಗ ದೊಂದಿಗೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪೂಜಾ ಕಾರ್ಯಕ್ರಮಗಳು ಅರ್ಚಕ ಎನ್.ಕೆ. ಮೋಹನ್ ನೇತೃತ್ವದಲ್ಲಿ ನಡೆದವು ಗೋಪಾಲಪುರ, ಒಡೆಯನಪುರ, ಶನಿವಾರಸಂತೆ, ಗುಡುಗಳಲೆ, ಹಂಡ್ಲಿ, ಮಾದೇಗೋಡು, ರಾಮನಳ್ಳಿ ಮತ್ತಿತರ ಗ್ರಾಮಗಳ ನೂರಾರು ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ದೇವಾಲಯ ಸಮಿತಿ ಹಾಗೂ ದೇವಾಂಗ ಸಂಘದ ಪದಾಧಿಕಾರಿಗಳು ಹಾಜರಿದ್ದರು.