ಮಡಿಕೇರಿ, ಜ.10: ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ತಾ. 15 ರಂದು 30ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಸ್.ವಿನೋದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.14 ರಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅಂದು ಬೆಳಗ್ಗೆ 7.30 ರಿಂದ ಶ್ರೀ ಅಯ್ಯಪ್ಪ ದೇವರಿಗೆ ಪಂಚಾಮೃತ ಅಭಿಷೇಕ, ತುಪ್ಪಾಭೀಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ ಇತ್ಯಾದಿ ಸೇವೆಗಳು ಜರುಗಲಿವೆ ಎಂದರು.
ಬೆಳಗ್ಗೆ 8 ಗಂಟೆಗೆ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ದೇವರ ಪೂಜೆ, 8.30ಕ್ಕೆ ಶ್ರೀ ಗಣಪತಿ ದೇವರಿಗೆ 21 ತೆಂಗಿನ ಕಾಯಿಗಳ ಗಣ ಹೋಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ತಾ. 15 ರಂದು ಬೆಳಗ್ಗೆ 6.30ಕ್ಕೆ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ ನಡೆಯಲಿದ್ದು, ಬೆಳಗ್ಗೆ 7.30 ರಿಂದ ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೇರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪರ್ಚನೆ ಇತ್ಯಾದಿ ಸೇವೆಗಳು ನಡೆಯಲಿವೆ. ಬೆಳಗ್ಗೆ 10 ಗಂಟೆಗೆ ಅಲಂಕಾರ ಪೂಜೆ, 11 ಗಂಟೆಗೆ ಶ್ರೀ ಅಯ್ಯಪ್ಪ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ, ನೃತ್ಯಬಲಿ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಮಾಡಲಾಗುವುದು.
ಸಂಜೆ 6 ಗಂಟೆಗೆ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಯಿಂದ ಭಜನೆ ಏರ್ಪಡಿಸಲಾಗಿದ್ದು, 7 ಗಂಟೆಗೆಯಿಂದ ದೀಪಾರಾಧನೆ, ಅಲಂಕಾರ ಪೂಜೆ, ಪಡಿ ಪೂಜೆ ನಂತರ ರಾತ್ರಿ 8 ಗಂಟೆಗೆ ಮಹಾಪೂಜೆ ನಡೆಯಲಿದೆ. ನಂತರ ಪ್ರಸಾದ ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಟಿ.ಕೆ.ಸುದೀರ್, ಉಪಾಧ್ಯಕ್ಷ ಗಾಂಧಿರಾಜನ್ ನಾಡರ್, ಪ್ರಧಾಕ ಕಾರ್ಯದರ್ಶಿ ಮಹೇಶ್ ಕುಮಾರ್, ಖಜಾಂಚಿ ಸದಾಶಿವಪ್ಪ ಹಾಗೂ ಸದಸ್ಯ ಬಿ.ಬಿ. ಪೂವಪ್ಪ ಉಪಸ್ಥಿತರಿದ್ದರು.