ಮಡಿಕೇರಿ, ಜ. 11: ಹೊರ ಜಿಲ್ಲೆಯ ಗುತ್ತಿಗೆದಾರರು ಕಡಿಮೆ ದರ ಸೂಚಿಸಿ ಕಾಮಗಾರಿಗಳನ್ನು ಪಡೆದುಕೊಂಡು ಸರ್ಮಪಕವಾಗಿ ಪೂರ್ಣಗೊಳಿಸದೆ ಇರುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಟೆಂಡರನ್ನು ರದ್ದುಪಡಿಸುವಂತೆ ಒತ್ತಾಯಿಸಲು ಮಡಿಕೇರಿ ತಾಲೂಕು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘ ನಿರ್ಧರಿಸಿದೆ.

ಸಂಘದ ಅಧ್ಯಕ್ಷ ಬಿ.ಪಿ. ರಾಜೀವಲೋಚನ ಅಧ್ಯಕ್ಷತೆಯಲ್ಲಿ ನಗರದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಟೆಂಡರ್ ಪ್ರಕ್ರಿಯೆಯಲ್ಲಿ ಹೊರ ಜಿಲ್ಲೆಯವರು ಕಡಿಮೆ ದರ ಸೂಚಿಸಿ ಭಾಗವಹಿಸುವುದರಿಂದ ಸ್ಥಳೀಯ ಅನೇಕ ಗುತ್ತಿಗೆದಾರರು ಟೆಂಡರ್ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳಲ್ಲಿ ವಿವಿಧ ಯೋಜನೆಯ ಕಾಮಗಾರಿಗಳ ಕ್ರಿಯಾಯೋಜನೆಗಳು ತಯಾರಾಗಿದ್ದು, ಅನುದಾನ ಕೂಡ ಲಭ್ಯವಿರುತ್ತದೆ. ಆದರೆ ಸರ್ಕಾರದಿಂದ ತುಂಡು ಗುತ್ತಿಗೆ ಕರಾರು ಆದೇಶ ಇನ್ನೂ ಬಂದಿರುವುದಿಲ್ಲ. ಇ-ಪ್ರೊಕ್ಯೋರ್ಮೆಂಟ್ ಮೂಲಕ ಟೆಂಡರ್ ಪ್ರಕ್ರಿಯೆಗೆ ಇನ್ನು ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಮಾರ್ಚ್ 15 ರೊಳಗೆ ಜಿಲ್ಲಾ ಖಜಾನೆಗೆ ಸಂಬಂಧಪಟ್ಟ ಇಲಾಖೆಗಳಿಂದ ಗುತ್ತಿಗೆದಾರರು ಕೈಗೊಂಡ ಕಾಮಗಾರಿಗಳಿಗೆ ಬಿಲ್ಲುಗಳನ್ನು ಸಲ್ಲಿಸದೆ ಹೋದರೆ ಬಿಲ್ಲುಗಳು ಪಾವತಿಯಾಗದ ಪರಿಸ್ಥಿತಿ ಉಂಟಾಗುತ್ತದೆ. ಇನ್ನು ಕೇವಲ ಒಂದೂವರೆ ತಿಂಗಳಲ್ಲಿ ವಿವಿಧ ಯೋಜನೆಗಳ ಅನೇಕ ಕಾಮಗಾರಿಗಳಿಗೆ ಕಚ್ಚಾ ಸಾಮಗ್ರಿಗಳನ್ನು ಮತ್ತು ಕಾರ್ಮಿಕರನ್ನು ಒಗ್ಗೂಡಿಸಿ ಕೆಲಸ ನಿರ್ವಹಿಸುವುದು ಕಷ್ಟವಾಗಲಿದೆ. ಆದುದರಿಂದ ಇದರ ಬಗ್ಗೆ ಇಲಾಖೆಯವರು ತುರ್ತಾಗಿ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಹಂಚಿಕೆ ಮಾಡುವಂತೆ ಕೋರಲು ಸಭೆ ನಿರ್ಧರಿಸಿತು.

ಮಡಿಕೇರಿ ತಾಲೂಕು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಮತ್ತು ಕಾಮಗಾರಿಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿಗಳು ಸರ್ಮಪಕವಾಗಿ ದೊರೆಯದೇ ಬೇರೆ ಜಿಲ್ಲೆ ಮತ್ತು ತಾಲೂಕುಗಳಿಂದ ತರಿಸಿಕೊಳ್ಳುವ ಪರಿಸ್ಥಿತಿ ಇದ್ದು, ಮಂಗಳೂರು ವೃತ್ತದ ದರ ಪಟ್ಟಿ ಆಧರಿಸಿ ಕೆಲಸ ಮಾಡಬೇಕಾಗಿದೆ. ಪ್ರತಿಯೊಬ್ಬ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡುವಂತೆಯೂ ಮತ್ತು ಟೆಂಡರ್ ಸಲ್ಲಿಸುವ ಸಂದರ್ಭ ಹೆಚ್ಚಿನ ದರ ಸೂಚಿಸಿ ಸಲ್ಲಿಸುವಂತೆ ಸಲಹೆ ನೀಡಲಾಯಿತು. ಗುತ್ತಿಗೆದಾರರ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಪಡೆದುಕೊಳ್ಳಲಾಯಿತು. ಸಂಘದ ಉಪಾಧ್ಯP್ಷÀ ಎನ್.ಡಿ. ಪೂಣಚ್ಚ ಸ್ವಾಗತಿಸಿ, ಕಾರ್ಯದರ್ಶಿ ಕೆ.ಬಿ. ಪೂಣಚ್ಚ ವಂದಿಸಿದರು. ಖಜಾಂಚಿ ಬಿ.ಎ. ಚಂದ್ರಶೇಖರ್ ಲೆಕ್ಕಪತ್ರ ಮಂಡಿಸಿದರು.

ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಎ. ರವಿ ಚಂಗಪ್ಪ ಹಾಗೂ ಜಿಲ್ಲಾ ಮತ್ತು ತಾಲೂಕು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.