*ಗೋಣಿಕೊಪ್ಪಲು, ಜ. 11: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಮಗ್ನವಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ ಬಿಳಿಗಿ ನೇತೃತ್ವದಲ್ಲಿ 123 ತಂಡಗಳನ್ನು ರಚಿಸಿ ಸಮೀಕ್ಷೆ ನಡೆಸಲಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತು ಪೆÇೀಷಕರನ್ನು ಮನವೊಲಿಸಿ ಕರೆತರಲು ಈ ವಿಶೇಷ ತಂಡ ಪ್ರಯತ್ನಿಸಲಿದೆ. ಸಮಗ್ರ ಶಿಕ್ಷಣ ಅಭಿಯಾನದ ಮೂಲಕ ಈ ಕಾರ್ಯಕ್ಕೆ ಮುಂದಾಗಿದ್ದು, ಕೊಡಗು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಈ ತಂಡವನ್ನು ರಚಿಸಿದ್ದು, ತಂಡದಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರನ್ನು ಒಳಗೊಂಡಂತೆ ಸಮೀಕ್ಷೆ ನಡೆಸಲಿದ್ದಾರೆ.

ತಂಡದ ಮೇಲ್ವಿಚಾರಣೆಯನ್ನು ಕ್ಲಸ್ಟರ್ ಮಟ್ಟದಲ್ಲಿ ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಓ ಮತ್ತು ಬಿ.ಐ.ಇ.ಆರ್.ಟಿ ನಿರ್ವಹಿಸಲಿದ್ದಾರೆ. ತಂಡವು ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಶಾಲೆಗೆ ದಾಖಲಾಗದ ಮಕ್ಕಳನ್ನು ಗುರುತಿಸುವ ಸಲುವಾಗಿ ಕಾರ್ಯ ಚಟುವಟಿಕೆಗೆ ಮುಂದಾಗಿ ಶಾಲೆ ಬಿಟ್ಟ ಮಕ್ಕಳನ್ನು ಮನವೊಲಿಸಿ ಮರಳಿ ಕರೆತರುವ ಪ್ರಯತ್ನಕ್ಕೆ ಹೆಜ್ಜೆ ಹಾಕಿದೆ. ಮಕ್ಕಳ ಸಮೀಕ್ಷೆಗಾಗಿ ಗುಡ್ಡಗಾಡು ಪ್ರದೇಶಗಳು, ಮಾರುಕಟ್ಟೆ, ಬಸ್ ನಿಲ್ದಾಣಗಳು, ತೋಟಗಳ ಲೈನ್ ಮನೆಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಹೊಟೇಲ್‍ಗಳು, ಅಂಗಡಿಗಳು, ವಲಸೆಯ ಪ್ರದೇಶಗಳು, ಬುಡಕಟ್ಟು ಜನ ವಸತಿ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸಿ ಸಮೀಕ್ಷೆ ನಡೆಸಲಾಗುವುದು.