ಆರೋಪಿಯ ಸೆರೆ

ಮಡಿಕೇರಿ, ಜ. 11: ಇಲ್ಲಿನ ರಾಜಾಸೀಟ್ ಬಳಿ ಬೀದಿ ಬದಿಯ ವ್ಯಾಪಾರಿ ಮಹಿಳೆಯರಿಗೆ; ಬ್ಯಾಂಕ್ ಸಾಲ ಕೊಡಿಸುವದಾಗಿ ನಂಬಿಸಿ ಮೋಸಗೊಳಿಸಿರುವ ವ್ಯಕ್ತಿಯೊಬ್ಬನನ್ನು ನಗರ ಠಾಣೆಯ ಪೊಲೀಸರು ಬಂಧಿಸಿ ಕಾನೂನು ಕ್ರಮಕೈಗೊಂಡಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹೆಣ್ಣೂರು ರಸ್ತೆ ನಿವಾಸಿ; ಆರ್.ಎಸ್. ಬಾಬು ಅಲಿಯಾಸ್ ರಸೂಲ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿಯು ಮಡಿಕೇರಿ ರಾಜಾಸೀಟ್ ಬಳಿ ಬೀದಿ ಬದಿ ವ್ಯಾಪಾರ ನಡೆಸುತ್ತಿರುವ ಚಾಮುಂಡೇಶ್ವರಿ ನಗರದ ಸುಶೀಲ, ಲಿಸ್ಸಿ, ಸುಮಿತ್ರ, ರಾಣಿ ಫಾತಿಮಾ, ಪೂವಮ್ಮ, ಕಲ್ಪನ ಮೊದಲಾದವರಿಗೆ ಬ್ಯಾಂಕ್‍ನಿಂದ ತಲಾ ರೂ. 1.50 ಲಕ್ಷ ಸಾಲ ಕೊಡಿಸುವದಾಗಿ ಆಮಿಷವೊಡ್ಡಿದ್ದಾನೆ. ಈತನ ಕೃತ್ಯಕ್ಕೆ ಆರೋಪಿಯ ಪತ್ನಿ ಅನ್ನಪೂರ್ಣ ಹಾಗೂ ತರಕಾರಿ ವ್ಯಾಪಾರಿ ಜ್ಯೋತಿ ಕೂಡ ಸಹಕರಿಸಿರುವದು ಪೊಲೀಸರ ತನಿಖೆಯಿಂದ ಬಹಿರಂಗ ಗೊಂಡಿದೆ. ಅಲ್ಲದೆ ಬ್ಯಾಂಕ್ ಸಾಲ ಪಡೆಯಲು ತಲಾ ರೂ. 15 ಸಾವಿರದಂತೆ ನೀಡುವಂತೆಯೂ; ತಾನು ‘ಹ್ಯೂಮನ್ ರೈಟ್’ ಸಂಘಟನೆ ಪ್ರಮುಖ ಎಂದೂ ನಂಬಿಸಿದ್ದು; ವಂಚಿತ ಮಹಿಳೆಯರು ಆರೋಪಿಗೆ ಹಣ ಪಾವತಿಸಿದ್ದಾರೆ.

ಆ ಬಳಿಕ ಸಾಲ ಕೊಡಿಸದೆ ಸತಾಯಿಸತೊಡಗಿದ್ದರಿಂದ; ಬೇಸತ್ತ ಮಹಿಳೆಯರು ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ; ಡಿವೈಎಸ್‍ಪಿ ಬಿ.ಪಿ. ದಿನೇಶ್‍ಕುಮಾರ್ ನಿರ್ದೇಶನದೊಂದಿಗೆ; ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ನಗರ ಠಾಣಾಧಿಕಾರಿ ಎಂ.ಕೆ. ಸದಾಶಿವ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕೃತ್ಯದಲ್ಲಿ ಭಾಗಿಯಾಗಿರುವ ಮಹಿಳೆಯರಿಬ್ಬರು ತಲೆಮರೆಸಿಕೊಂಡಿದ್ದು; ಆರೋಪಿ ಬಾಬುನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವದರೊಂದಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಕಾಯ್ದೆ 417,420, 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.