ನಾಪೆÇೀಕ್ಲು, ಜ. 11: ಗುಂಡಿ ರಸ್ತೆಯಲ್ಲಿ ಓಡಾಡಿ ಸುಸ್ತಾದ ಜನ, ಯಾರು ರಸ್ತೆ ಸರಿಪಡಿಸಿಕೊಡದ ಹಿನ್ನಲೆಯಲ್ಲಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಇದು ಸ್ಥಳೀಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಕ್ಕುಂದಕಾಡು ಗ್ರಾಮಸ್ಥರ ವ್ಯಥೆಯ ಕಥೆ. ನಾಪೆÇೀಕ್ಲು ಕೊಡವ ಸಮಾಜ ಮತ್ತು ಅಜ್ಜಿಮುಟ್ಟ ರಸ್ತೆಯಿಂದ ಕಕ್ಕುಂದಕಾಡಿಗೆ ಸಂಪರ್ಕ ಕಲ್ಪಿಸುವ 1.5 ಕೀ.ಮೀ ರಸ್ತೆಯನ್ನು ಕಳೆದ 15 ವರ್ಷಗಳಿಂದ ಯಾರೂ ದುರಸ್ತಿಪಡಿಸಿಲ್ಲ ಎನ್ನುವದು ಅವರ ದೂರು. ಹಿಂದೆ ರಸ್ತೆ ಅಗಲವಿಲ್ಲ ಆದುದರಿಂದ ಡಾಮರೀಕರಣ ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತಿತ್ತು. ಆದರೆ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ರಸ್ತೆ ಅಗಲೀಕರಣ ನಡೆಸಿದ್ದಾರೆ. ಆದರೂ ರಸ್ತೆ ದುರಸ್ತಿಗೆ ಸಂಬಂಧಿಸಿದವರು ಮೀನಾ ಮೇಷ ಎಣಿಸುತ್ತಿದ್ದಾರೆ ಎಂಬದು ಅವರ ಆರೋಪ.

ಎರಡು ದೇವಸ್ಥಾನ: ಈ ರಸ್ತೆ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಳ ಮತ್ತು ಕಕ್ಕುಂದಕಾಡು ಕರಿ ಚಾಮುಂಡಿ ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತದೆ. ಜಿಲ್ಲೆಯಲ್ಲಿ ವೆಂಕಟೇಶ್ವರ ದೇವಳ ಅಪರೂಪವಾಗಿರುವ ಕಾರಣ ಇಲ್ಲಿಗೆ ಹೆಚ್ಚಿನ ಭಕ್ತರು ಸೇವೆಗೆ ಆಗಮಿಸುತ್ತಿದ್ದಾರೆ. ರಸ್ತೆ ಸರಿಯಿಲ್ಲದ ಕಾರಣ ಆಟೋ ರಿಕ್ಷಾಗಳು ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲದಂತಾಗಿದೆ. ಬಾಡಿಗೆಗೆ ಬಂದರೂ ದುಪ್ಪಟ್ಟು ದರ ನೀಡಬೇಕಾಗುತ್ತದೆ. ಇದರಿಂದ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ಶ್ರೀ ವೆಂಕಟೇಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎನ್.ರಮೇಶ್.

600 ಮನೆಗಳು: ಕಕ್ಕುಂದಕಾಡು ಗ್ರಾಮ, ಕಕ್ಕುಂದಕಾಡು ಪೈಸಾರಿ, ಕಲ್ಲುಮೊಟ್ಟೆ ಪೈಸಾರಿ ಸೇರಿದಂತೆ ಇಲ್ಲಿ ಸುಮಾರು 600 ಮನೆಗಳಿವೆ. ಇದರಲ್ಲಿ ವಾಸಿಸುತ್ತಿರುವ ಜನ ಪ್ರತೀ ದಿನ ಇದೇ ರಸ್ತೆಯಲ್ಲಿ ಸಂಚರಿಸಬೇಕು. ವಾಹನ ಸಂಚಾರ ಹಾಗಿರಲಿ, ಜನರಿಗೆ ನಡೆಯಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಪುಟ್ಟ ಮಕ್ಕಳ ಪರಿಸ್ಥಿತಿ ಹೇಳತೀರದು ಎಂದು ಬೇಸರ ವ್ಯಕ್ಷಪಡಿಸುತ್ತಾರೆ ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಪುಷ್ಪಾ ದೇವಪ್ಪ.

ಅವಘಡಗಳು: ಈ ರಸ್ತೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಹಲವಾರು ಬೈಕ್ ಸವಾರು ಬಿದ್ದು ಕೈ,ಕಾಲಿನ ಮೂಳೆ ಮುರಿಸಿಕೊಂಡಿರುವ ಘಟನೆ ನಡೆದಿದೆ. ಗರ್ಭಿಣಿಯರನ್ನು, ವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯಲೂ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆಲ್ಲಾ ಅರ್ಜಿ ಸಲ್ಲಿಸಲಾಗಿದೆ. ಆದರೂ ಯಾವದೇ ಫಲ ದೊರೆಯಲಿಲ್ಲ. ಇನ್ನಾದರೂ ಜನ ಪ್ರತಿನಿಧಿಗಳು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಲಿ ಎಂದು ಗ್ರಾಮಸ್ಥರು `ಶಕ್ತಿ’ಯ ಮೂಲಕ ಮನವಿ ಮಾಡಿದ್ದಾರೆ.

-ಪಿ.ವಿ.ಪ್ರಭಾಕರ್