ಮಡಿಕೇರಿ, ಜ. 11: ಪ್ರಕೃತಿ ವಿಕೋಪದಿಂದ ಎರಡು ವರ್ಷಗಳಿಂದ ದುರ್ಬಲ ಸ್ಥಿತಿಯಲ್ಲಿರುವ ಮಡಿಕೇರಿ-ಮಂಗಳೂರು ಹೆದ್ದಾರಿಗೆ ಶಾಶ್ವತ ಕಾಯಕಲ್ಪ ಇನ್ನೂ ದೊರೆತಿಲ್ಲ ಎನ್ನುವದು ಎಲ್ಲರಿಗೂ ತಿಳಿದಿದೆ. ಈ ರಸ್ತೆಯನ್ನು ಮತ್ತಷ್ಟು ಹಾಳುಗೆಡುವ ಪ್ರಯತ್ನ ಇದೀಗ ನಡೆಯುತ್ತಿದೆ. ಈ ಎನ್.ಎಚ್. 275 ರಸ್ತೆಯಲ್ಲಿ, ಭೂಕುಸಿತವಾದ ಸ್ಥಳದ ಆಸುಪಾಸಿನಲ್ಲೇ ಹೊಸ ಕಟ್ಟಡÀವೊಂದು ತಲೆ ಎತ್ತುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೇವಲ ನೋಟೀಸು ಜಾರಿಮಾಡಿದ್ದು ಕಟ್ಟಡದ ಕೆಲಸ ಯಾವದೇ ಅಡೆತಡೆ ಇಲ್ಲದೆ ಮುಂದುವರಿಯುತ್ತಿದೆ.
ಇನ್ನು, ತಾಳತ್ಮನೆಯ ಸಮೀಪ ಇದೇ ದುರ್ಬಲವಾದ ಎನ್.ಎಚ್. 275 ರಸ್ತೆಯಲ್ಲಿ ಯಾವದೇ ರೀತಿಯ ಅನುಮತಿಯಿಲ್ಲದೆ ಖಾಸಗಿ ಸಂಸ್ಥೆಯಿಂದ ರಸ್ತೆ ಅಗೆಯುವ ಕೆಲಸ ನಡೆಯುತ್ತಿದ್ದರೂ ಇದನ್ನು ಪ್ರಶ್ನಿಸುವವರು ಯಾರೂ ಇಲ್ಲ. ಈ ರಸ್ತೆಯಲ್ಲಿ ಈಗಾಗಲೇ ನಾಲ್ಕು ಆಳವಾದ ಗುಂಡಿಗಳನ್ನು ಅಗೆದಿದ್ದು ದುರ್ಬಲವಾದ ರಸ್ತೆ ಮತ್ತಷ್ಟು ಹದಗೆಡುವಂತೆ ಮಾಡಲಾಗಿದೆ. ಖಾಸಗಿ ಸಂಸ್ಥೆಯೊಂದರ ಕೇಬಲ್ನ ಪೈಪ್ಲೈನ್ ಸರಿಪಡಿಸಲು ಈ ಗುಂಡಿಗಳನ್ನು ತೋಡುತ್ತಿದ್ದು, ಸುಮಾರು 2 ಅಡಿಯಷ್ಟು ರಸ್ತೆಯನ್ನು ನಾಲ್ಕು ಕಡೆಗಳಲ್ಲಿ ಅಗೆಯಲಾಗಿದೆ. ಇದನ್ನು ಅಧಿಕಾರಿಗಳು ನಿಲ್ಲಿಸದ್ದಿದ್ದಲ್ಲಿ ಇನ್ನೂ ಹೆಚ್ಚು ಗುಂಡಿಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
“ನಾನು ಸುಮಾರು ಒಂದು ಗಂಟೆಯಿಂದ ಇಲ್ಲಿ ನಿಂತು ಈ ಗುಂಡಿತೋಡುವ ಕೆಲಸದ ಉಸ್ತುವಾರಿ ಹೊತ್ತವರನ್ನು ಕಾಯುತ್ತಿದ್ದೇನೆ. ಈ ರಸ್ತೆಯ ಕೆಳಭಾಗದಲ್ಲಿ ಹಲವಾರು ಮನೆಗಳಿದ್ದು, ಈ ಅವೈಜ್ಞಾನಿಕ ಗುಂಡಿ ಅಗೆಯುವ ಕೆಲಸದ ದುಷ್ಪರಿಣಾಮವನ್ನು ನಾವೆಲ್ಲರೂ ಮಳೆಗಾಲದಲ್ಲಿ ಅನುಭವಿಸಬೇಕಾಗುತ್ತದೆ. ಎಷ್ಟು ಬಾರಿ ಇಲ್ಲಿ ಗುಂಡಿತೋಡುವದನ್ನು ನಿಲ್ಲಿಸಿದರೂ, ಮತ್ತೆ ಕೆಲಸ ಪುನರಾರಂಭಿಸುತ್ತಾರೆ ಈ ಖಾಸಗಿ ಸಂಸ್ಥೆಯವರು. ಮೊದಲೇ ದುರ್ಬಲವಾದ ಈ ರಸ್ತೆಯನ್ನು ಮತ್ತಷ್ಟು ಅವೈಜ್ಞಾನಿಕವಾಗಿ ಅಗೆಯುತ್ತಿರುವದನ್ನು ಅಧಿಕಾರಿಗಳು ನಿಲ್ಲಿಸಬೇಕು,” ಎಂದು ಸ್ಥಳೀಯ ಸತೀಶ್ ರೈ ಮನವಿ ಮಾಡಿಕೊಂಡಿದ್ದಾರೆ.