ವೀರಾಜಪೇಟೆ, ಜ. 11: ಕನ್ನಡ ನಾಡು ನುಡಿಗೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರ. ಬಡವ, ಮೇಲು, ಕೀಳು ಎಂಬವುದಿಲ್ಲ ಎಂಬ ವಿಶ್ವ ಮಾನವ ಸಂದೇಶವನ್ನು ಸಾರುವ ಮೂಲಕ ಕಾವ್ಯವನ್ನು ಬರೆದ ಕುವೆಂಪು ನಮ್ಮ ಕನ್ನಡ ನಾಡಿಗೆ ಮಾತ್ರವಲ್ಲ ರಾಷ್ಟ್ರಕ್ಕೆ ಮಾದರಿ ಹಾಗೂ ಶ್ರೇಷ್ಠ ಕವಿಯಾಗಿದ್ದರು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಶಾಖೆಯ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಾಲೂಕು ಸಮಿತಿ ವತಿಯಿಂದ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ವೀರಾಜಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ ಹಾಗೂ ಗಿಡ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಕಾರ ಇನ್ನು ಹೆಚ್ಚಿನ ಪ್ರೋತ್ಸಹ ನೀಡಬೇಕಾಗಿದೆ. ಮುಂದಿನ ದಿನಗಳಲ್ಲಿ ರಕ್ಷಣಾ ವೇದಿಕೆ ಕನ್ನಡ ನಾಡು ನುಡಿಯ ಬೆಳವಣಿಗೆಗಾಗಿ ಹೆಚ್ಚು ಹೆಚ್ಚು ಕಾರ್ಯ ಕ್ರಮಗಳನ್ನು ಸಂಘಟಿಸುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಕ್ಷಣಾ ವೇದಿಕೆಯ ಕಾನೂನು ಸಲಹೆಗಾರ ರಫೀಕ್ ಕಾರ್ಯಕ್ರಮ ಉದ್ಘಾಟಿಸಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ನಾಚಪ್ಪ ಮಾತನಾಡಿ, ಸರಕಾರಿ ಶಾಲೆಯಲ್ಲಿ ಹೆಚ್ಚು ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಪ್ರತಿಭೆಯನ್ನು ಹೊರಹಾಕಲು ಸರಕಾರ ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಂಘಟನೆಗಳು ಇಂತಹ ಬಡ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೆ.ಹೆಚ್. ಷರೀಫ್, ತಾಲೂಕು ಕಾರ್ಯದರ್ಶಿ ಆರ್. ಅವಿನಾಶ್, ಖಜಾಂಚಿ ತಬರೀಶ್, ಗೌರವ ಅಧ್ಯಕ್ಷ ಪೊನ್ನಪ್ಪ, ನಗರ ಉಪಾದ್ಯಕ್ಷ ಫೈಜಲ್, ಸಂತೋಷ್ ಉಪಸ್ಥಿತರಿದ್ದರು. ಶಿಕ್ಷಕಿ ಅನುಸೂಯ ಸ್ವಾಗತಿಸಿ, ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಶಿಕ್ಷಕರು ಹಾಜರಿದ್ದರು.