ಮಡಿಕೇರಿ, ಜ. 11: ವೀರಾಜಪೇಟೆಯ ಕೋತೂರು ಗ್ರಾಮದ ಲಕ್ಕುಂದ ಪೈಸಾರಿಯಲ್ಲಿ ಕಾಡಾನೆ ದಾಳಿಗೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್.ಆರ್. ರವಿ ಅವರನ್ನು ಅರಣ್ಯ ಇಲಾಖೆ ನಿರ್ಲಕ್ಷಿಸಿದೆ ಎಂದು ಆರೋಪಿಸಿ ರುವ ಪ್ರಜಾ ಪರಿವರ್ತನಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಸ್. ಮುತ್ತಪ್ಪ, ಗಾಯಾಳುವಿನ ಚಿಕಿತ್ಸಾ ವೆಚ್ಚ ಮತ್ತು ಪರಿಹಾರವಾಗಿ ರೂ. 5 ಲಕ್ಷ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಅವರನ್ನು ಭೇಟಿಯಾದ ಮುತ್ತಪ್ಪ ಹಾಗೂ ವೇದಿಕೆಯ ಪದಾಧಿಕಾರಿಗಳು ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಡಿ. 23 ರಂದು ಸಂಜೆ ಅಂಗಡಿಗೆ ತೆರಳಿ ಹಿಂದಿರುಗುವ ಸಂದರ್ಭ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿ ಸೊಂಡಿಲಿನಿಂದ ರವಿ ಅವರನ್ನು ಎತ್ತಿ ಪಕ್ಕದಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಚೆಕ್‍ಪೋಸ್ಟ್‍ನ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡ ರವಿ ಅವರನ್ನು ಕುಟ್ಟ ಆಸ್ಪತ್ರೆಗೆ ದಾಖಲಿಸಿದರು. ಮರುದಿನ ಹೆಚ್ಚಿನ ಚಿಕಿತ್ಸೆಗಾಗಿ ವೀರಾಜಪೇಟೆ ಆಸ್ಪತ್ರೆಗೆ ಕರೆದೊಯ್ಯದÀ ಸಂದರ್ಭ ಜಿಲ್ಲಾಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚಿಸಿದರು. ಆದರೆ ಅರಣ್ಯಾಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಮುತ್ತಪ್ಪ ಆರೋಪಿಸಿದರು. ಪತ್ನಿಯ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಇಲ್ಲಿಯವರೆಗೆ ಅರಣ್ಯಾಧಿಕಾರಿಗಳು ಚಿಕಿತ್ಸಾ ವೆಚ್ಚ ಭರಿಸಿಲ್ಲ. ರವಿ ಅವರು ಕುಟುಂಬದ ಸದಸ್ಯರು ಕೂಲಿ ಕಾರ್ಮಿಕರಾಗಿದ್ದು, ಹಣವಿಲ್ಲದೆ ಪರದಾಡುತ್ತಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದು, ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಆನೆ ದಾಳಿಯ ಪರಿಣಾಮ ರವಿ ಅವರ ಎಡಗೈ ಮೂಳೆ, ಎದೆಭಾಗದ ಮೂಳೆ ಮುರಿದು ಹೋಗಿದ್ದು, ಬಲಗೈ ಮೂಳೆ, ಬೆನ್ನು ಮೂಳೆಗೆ ಕೂಡ ಪೆಟ್ಟಾಗಿದೆ. ಹೊಟ್ಟೆಯ ಒಳಭಾಗಕ್ಕೆ ಹಾನಿಯಾದ ಕಾರಣ ರಕ್ತವಾಂತಿ ಮಾಡಿಕೊಳ್ಳುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಅಥವಾ ಮೈಸೂರಿಗೆ ತೆರಳುವಂತೆ ವೈದ್ಯರು ಸೂಚಿಸಿದ್ದಾರೆ. ಇಷ್ಟು ಗಂಭೀರ ಪರಿಸ್ಥಿತಿ ಇದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಮುತ್ತಪ್ಪ ಆರೋಪಿಸಿದರು. ರವಿ ಅವರ ಚಿಕಿತ್ಸೆಗೆ ಮತ್ತು ಕುಟುಂಬ ನಿರ್ವಹಣೆಗೆ ತಾತ್ಕಾಲಿಕವಾಗಿ ರೂ. 1 ಲಕ್ಷ ತುರ್ತಾಗಿ ನೀಡಬೇಕು, ನಿರ್ಲಕ್ಷ್ಯ ತೋರಿದ ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರ ಪರಿಹಾರವಾಗಿ ಬಡ ಕುಟುಂಬಕ್ಕೆ ರೂ. 5 ಲಕ್ಷ ಬಿಡುಗಡೆ ಮಾಡಬೇಕೆಂದು ಮುತ್ತಪ್ಪ ಒತ್ತಾಯಿಸಿದ್ದಾರೆ.