ಧನಾರ್ಜನೆಗಾಗಿ ಮರಳಿಯತ್ನ, ಶತ ಪ್ರಯತ್ನವನ್ನು ನ್ಯಾಯಯುತ ಮಾರ್ಗದಲ್ಲಿ ನಡೆಸಿದ್ದ ಅಗಸ್ತ್ಯರು ತನ್ನೆದುರು ವಿನಮ್ರನಾಗಿ ನಿಂತು ನನ್ನಿಂದ ಏನಾಗಬೇಕು ಎಂದು ಕೇಳಿದ ರಾಜ ತ್ರಸದಸ್ಯುವಿಗೆ ಉತ್ತರಿಸುತ್ತಾ” ಮಹಾರಾಜ, ನಾವು ಮೂವರೂ ( ಜೊತೆಯಲ್ಲಿದ್ದ ಶ್ರುತರ್ವಾಣ ಮತ್ತು ಬ್ರಧ್ನಶ್ವ ಸೇರಿ) ಧನಾರ್ಥಿಗಳಾಗಿ ನಿನ್ನ ಬಳಿ ಬಂದಿರುತ್ತೇವೆ. ಯಾವ ಪ್ರಜೆಗೂ ತೊಂದರೆಯಾಗದ ರೀತಿಯಲ್ಲಿ ವ್ಯಯಕ್ಕಿಂತಲೂ ಹೆಚ್ಚಿನ ಆದಾಯದ ಕೊನೆಯ ಭಾಗವನ್ನು ನಮಗೆ ಕೊಡುವವನಾಗು” ಎನ್ನುತ್ತಾರೆ. ಮಹರ್ಷಿಗಳ ಮಾತನ್ನು ಕೇಳಿ ತ್ರಸದಸ್ಯುವು ತನ್ನ ದೇಶದ ಆಯವ್ಯಯಗಳ ಲೆಕ್ಕವನ್ನು ಮಹರ್ಷಿಗಳಿಗೆ ಒಪ್ಪಿಸಿ ಹೇಳಿದನು “ಮಹರ್ಷೇ, ಈ ಲೆಕ್ಕವನ್ನು ಪರಿಶೀಲಿಸಿ ತಾವು ಎಷ್ಟು ಧನ ಬೇಕೆಂದು ಹೇಳುವಿರೋ ಅಷ್ಟು ಧನವನ್ನೂ ಕೊಡಲು ಸಿದ್ಧನಿರುವೆನು”

ಅಗಸ್ತ್ಯರು ತ್ರಸದಸ್ಯುವಿನ ರಾಜ್ಯದ ಆಯ-ವ್ಯಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಆದರೆ, ಅವನ ಆಯ-ವ್ಯಯ ಗಳೂ ಸರಿ ಸಮನಾಗಿದ್ದವು. ಹೆಚ್ಚುವರಿಯಾಗಿ ಹಣವೇ ಇಲ್ಲದಿದ್ದ ಕಾರಣ ಅವನಿಂದಲೂ ಧನವನ್ನು ಅಪೇಕ್ಷಿಸುವದು ಸರಿಯಲ್ಲವೆಂದು ಮಹರ್ಷಿಗಳು ನಿಶ್ಚಯಿಸಿದರು.

ಇದೀಗ ನಿಜಕ್ಕೂ ಮಹರ್ಷಿಗಳಿಗೆ ತಮ್ಮ ಪ್ರಯತ್ನ ಸಫಲವಾಗು ವದೇ ಎಂಬ ಬಗ್ಗೆ ಸಂದೇಹ ಮೂಡತೊಡಗಿತು. ತಾವು ಐಶ್ವರ್ಯ ವನ್ನು ಪಡೆಯುವದೆಂತು ? ಎಂಬ ಬಗ್ಗೆ ಅವರಲ್ಲಿ ಜಿಜ್ಞಾಸೆಯುಂಟಾ ಯಿತು. ಮೂವರು ರಾಜರೂ ಮಹರ್ಷಿಗಳ ಮುಖಭಾವ ಗಮನಿಸಿ ದಾಗ ಅವರಲ್ಲಿನ ಭಾವನೆಗಳ ಅರಿವಾಯಿತು. ಒಬ್ಬರ ಮುಖವನ್ನು ಮತ್ತೊಬ್ಬರು ನೋಡುತ್ತ ಒಟ್ಟಿಗೇ ಅಗಸ್ತ್ಯರನ್ನು ಕುರಿತು ಹೇಳಿದರು. ‘‘ಬ್ರಾಹ್ಮಣೋತ್ತಮರೇ, ಇಲ್ಲಿಗೆ ಸ್ವಲ್ಪ ದೂರದಲ್ಲಿ ಇಲ್ವಲನೆಂಬ ದಾನವನೊಬ್ಬನಿದ್ದಾನೆ. ಪ್ರಪಂಚದ ಸಕಲ ರಾಜರಲ್ಲಿರುವದಕ್ಕಿಂತಲೂ ಅಧಿಕವಾದ ಐಶ್ವರ್ಯವು ಅವನಲ್ಲಿರುವದೆಂದು ನಾವು ಕೇಳಿದ್ದೇವೆ. ನಾವೆಲ್ಲರೂ ಸೇರಿ ಐಶ್ವರ್ಯದ ಪ್ರಾಪ್ತಿಗಾಗಿ ಅವನಲ್ಲಿಗೆ ಹೋಗೋಣ” ಎನ್ನುತ್ತಾರೆ.

ರಾಜರುಗಳ ಮಾತಿಗೆ ತಲೆದೂಗಿ ಆಶಾಭಾವನೆ ತಂದುಕೊಂಡ ಅಗಸ್ತ್ಯರು ಸಮ್ಮತಿಯಿತ್ತರು. ಮಹಾಧನಿಕನಾದ ಇಲ್ವಲನನ್ನೇ ಹಣ ಕೇಳುವದು ಯುಕ್ತವೆಂದು ಅವರೂ ಭಾವಿಸಿದರು. ಅನಂತರ ಮೂವರು ರಾಜರೂ ಅಗಸ್ತ್ಯರೊಡನೆ ಇಲ್ವಲನ ರಾಜಧಾನಿಗೆ ತೆರಳಿದರು. ಮೂವರು ರಾಜರೊಡನೆ ಮಹರ್ಷಿ ಅಗಸ್ತ್ಯರು ತನ್ನ ರಾಜಧಾನಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ದೊರೆತೊಡನೇ ದಾನವನಾದ ಇಲ್ವಲನು ತನ್ನ ಅಮಾತ್ಯರೊಡಗೂಡಿ ರಾಜಧಾನಿಯ ಗಡಿ ಭಾಗದತ್ತ ಧಾವಿಸುತ್ತಾನೆ. ಮಹರ್ಷಿಗಳಿಗೂ, ರಾಜರಿಗೂ ಆದರದ ಸ್ವಾಗತವೀಯುತ್ತಾನೆ. ತನ್ನ ರಥದಲ್ಲಿಯೇ ಅವರುಗಳನ್ನು ಅರಮನೆಗೆ ಕರೆದೊಯ್ಯುತ್ತಾನೆ. ಅತಿಥಿಗಳನ್ನು ಅಘ್ರ್ಯಪಾದ್ಯಾದಿಗಳಿಂದ ಸತ್ಕರಿಸಿ ಸುಖಾಸನದಲ್ಲಿ ಕುಳ್ಳಿರಿಸುತ್ತಾನೆ. ಯಥಾಪ್ರಕಾರ ಇಲ್ವಲ ತನ್ನ ಹಳೆಯ ಚಾಳಿಯನ್ನು ಮುಂದುವರಿಸುತ್ತಾನೆ. ತನ್ನ ಸಹೋದರ ವಾತಾಪಿಯನ್ನು ಆಡಾಗಿ ಪರಿವರ್ತಿಸುತ್ತಾನೆ ಇಲ್ವಲನು ವಾತಾಪಿಯ ಮಾಂಸವನ್ನು ರಾಜರ ಮತ್ತು ಅಗಸ್ತ್ಯರ ಭೋಜನಕ್ಕೆ ಸಿದ್ಧಪಡಿಸುತ್ತಾನೆ.

ವ್ಯಾಸ ಲಿಖಿತ ಮಹಾಭಾರತದಲ್ಲಿನ ಉಲ್ಲೇಖದಂತೆ ಲೋಮಶ ಮಹರ್ಷಿಗಳು ಅಗಸ್ತ್ಯರ ಈ ಯಾತ್ರೆಯ ನೈಜ ಉದ್ದೇಶದ ಬಗ್ಗೆ ಈಗ ಬೆಳಕು ಚೆಲ್ಲುತ್ತಾರೆ. ಪಾಂಡವರೊಡನೆ ಈ ಬಗ್ಗೆ ವಿವರಿಸುತ್ತಾರೆ:- ಈ ಹಿಂದೆ ಅನೇಕ ಸಜ್ಜನರನ್ನು ಮಾಯಾರೀತಿಯಲ್ಲಿ ಸಂಹರಿಸಿದ್ದ ಇಲ್ವಲನ ತೇಜೋವಧೆ ಹಾಗೂ ಸಜ್ಜನರ ನಾಶಕ್ಕೆ ಬಳಸಲ್ಪಡುತ್ತಿದ್ದ ಇಲ್ವಲನ ತಮ್ಮ ವಾತಾಪಿಯ ಸಂಹಾರದ ಮೂಲಕ ಧರ್ಮ ಸ್ಥಾಪಿಸ ಬಯಸಿದ್ದ ಅಗಸ್ತ್ಯರು ಈಗ ಆ ಕಾರ್ಯಕ್ಕೆ ಸಕಾಲ ಕೂಡಿಬಂದಿದೆ ಎಂಬದನ್ನು ತಮ್ಮ ಅಂತಜ್ರ್ಞಾನದಿಂದ ಅರಿಯುತ್ತಾರೆ. ಇನ್ನೊಂದೆಡೆ ಲೋಕಕಂಟಕನಾಗಿದ್ದ ಇಲ್ವಲನ ಐಶ್ವರ್ಯವನ್ನು ಉಪಾಯದಿಂದ ಪಡೆಯುವ ಮೂಲಕ ಆತನ ಅಧರ್ಮದ ಚಟುವಟಿಕೆಗಳನ್ನು ಹತ್ತಿಕ್ಕಿದಂತಾಗುತ್ತದೆ ಎಂದು ಯೋಚಿಸುತ್ತಾರೆ. ಅದಲ್ಲದೆ ತನ್ನ ಕಾರ್ಯಸಿದ್ಧಿಯೂ ಈಡೇರುತ್ತದೆ ಎಂದು ಭಾವಿಸುತ್ತಾರೆ.

ಇಲ್ವಲನ ಆ ಭೋಜನದ ರಹಸ್ಯವನ್ನು ರಾಜರುಗಳೂ ತಿಳಿದಿರುತ್ತಾರೆ. ಅಗಸ್ತ್ಯರಿಗೆ ಮಾತ್ರವಲ್ಲದೆ ತಮ್ಮ ಭೋಜನಕ್ಕ್ಕೂ ಇಲ್ವಲನು ಸಿದ್ಧ ಮಾಡುತ್ತಿರುವ ನೆಂದು ತಿಳಿದೊಡನೆಯೇ ಅವರುಗಳು ತೀವ್ರ ಭಯಗೊಂಡರು. ತಮ್ಮ ಅಂತ್ಯಕಾಲ ಸನ್ನಿಹಿತವಾಯಿತೆಂದೇ ಭಾವಿಸಿದರು. ಅವರ ಮುಖಭಾವದಿಂದಲೇ ಅವರ ಹೃದಯದಲ್ಲಿದ್ದ ಸಂಕಟ ತಿಳಿದು ಅಗಸ್ತ್ಯರು ಅವರನ್ನು ಕುರಿತು ಹೇಳಿದರು:-“ರಾಜರೇ ನೀವು ದು:ಖಪಡುವ ಕಾರಣವಿಲ್ಲ.ವಾತಾಪಿಯ ಮಾಂಸವೆಲ್ಲವನ್ನೂ ನಾನೊಬ್ಬನೇ ತಿನ್ನುತ್ತೇನೆ. ಆದುದರಿಂದ ನೀವು ಈ ವಿಷಯದಲ್ಲಿ ಭೀತರಾಗಬೇಡಿರಿ”

ಅನಂತರದಲ್ಲಿ ಸುಖಾಸೀನಾರೂಢರಾಗಿದ್ದ ಅಗಸ್ತ್ಯರಿಗೆ ಇಲ್ವಲನು ನಗು-ನಗುತ್ತಾ ಪಕ್ವ ಮಾಡಿದ ಮಾಂಸವನ್ನು ಆದರ ಪೂರ್ವಕವಾಗಿ ಬಡಿಸಿದನು ಬಡಿಸಿದ ಮಾಂಸವೆಲ್ಲವನ್ನೂ ಅಗಸ್ತ್ಯರೊಬ್ಬರೇ ತಿಂದು ಬಿಟ್ಟರು. ಅಗಸ್ತ್ಯರ ಭೋಜನದ ಬಳಿಕ ಇಲ್ವಲನು ಯಥಾಪೂರ್ವಕ ವಾಗಿ ‘ವಾತಾಪೇ ಅತ್ರಾಗಚ್ಛ’ ಎಂದು ಗಟ್ಟಿಯಾಗಿ ಕರೆದನು. ಆ ಕೂಡಲೇ ಅಗಸ್ತ್ಯರು ‘ವಾತಾಪೇ ಜೀರ್ಣೋಭವ’ ಎಂದು ಬಿಟ್ಟರು. ತನ್ನ ತಮ್ಮ ವಾತಾಪಿಯು ಎಷ್ಟು ಹೊತ್ತಾದರೂ ಅಗಸ್ತ್ಯರ ಹೊಟ್ಟ್ಟೆಯನ್ನು ಸೀಳಿ ಹೊರಗೆ ಬಾರದಿದ್ದಾಗ ಇಲ್ವಲನು ಮತ್ತೆ ಮತ್ತೆ ವಾತಾಪಿ ಅತ್ರಾಗಚ್ಛ’ ಎನ್ನುತ್ತಿದ್ದರೂ ಅವನು ಅಗಸ್ತ್ಯರ ಉದರ ಸೀಳಲೂ ಇಲ್ಲ, ಹೊರ ಬರಲೂ ಇಲ್ಲ. ಅವನ ಕೂಗನ್ನು ಕೇಳಿ ಅಗಸ್ತ್ಯರು ಗಟ್ಟಿಯಾಗಿ ನಕ್ಕು ಹೇಳಿದರು:-“ಇಲ್ವಲ,ನಿನ್ನ ತಮ್ಮ ವಾತಾಪಿಯು ಹೇಗೆ ಹೊರಬಂದಾನು; ನಾನಾಗಲೇ ಅವನನ್ನು ಜೀರ್ಣಿಸಿಕೊಂಡು ಬಿಟ್ಟೆನಲ್ಲ!” “ಆಹ, ನನ್ನ ತಮ್ಮನು ಜೀರ್ಣವಾಗಿ ಹೋದನೇ?” ಎನ್ನುತ್ತ ಇಲ್ವಲನು ಭ್ರಾಂತಿ ಹೊಂದಿದನು. ಮುಂದೇನು ಮಾಡ ಬೇಕೆಂಬುದೇ ಅವನಿಗೆ ತಿಳಿಯದಾಯಿತು. ಮುಖವು ಕಳೆಗುಂದಿತು. ಅಮಾತ್ಯರೊಡನೆ ಅಂಜಲಿ ಬದ್ಧನಾಗಿ ಮಹರ್ಷಿಯ ಮುಂದೆ ನಿಂತು ಇಲ್ವಲನು ಹೇಳಿದನು:- ಮಹರ್ಷಿಗಳೇ ತಾವೆಲ್ಲರೂ ಯಾವ ಕಾರಣಕ್ಕಾಗಿ ಇಲ್ಲಿಗೆ ಆಗಮಿಸಿದ್ದೀರಿ ? ಅಗಸ್ತ್ಯರು ನಸು ನಗುತ್ತ ಉತ್ತರಿಸಿದರು:- ಇಲ್ವಲ, ನಾವು ನಿನ್ನಲ್ಲಿರುವ ಮಾಯಾವಿದ್ಯೆ ಯನ್ನು ತಿಳಿದವರಾಗಿದ್ದೇವೆ. ನಿನ್ನಲ್ಲಿ ಅಪಾರ ಐಶ್ವರ್ಯವಿದೆ ಯೆಂದೂ ಕೇಳಿದ್ದೇವೆ. ಈ ರಾಜರುಗಳ ಬಳಿ ತೆರಳಿದಾಗ ಅವರಲ್ಲಿ ಅಷ್ಟೊಂದು ಐಶ್ವರ್ಯ ವಿರಲಿಲ.್ಲ ನಿನ್ನಲ್ಲಿ ಅಧಿಕ ಐಶ್ವರ್ಯ ವಿರುವದಾದರೆ ನನಗೆ ಕೊಡುವವ ನಾಗು, ಜೊತೆಗೆ ಈ ರಾಜರು ತಮ್ಮ ರಾಜ್ಯದಲ್ಲಿ ಪ್ರಜೆಗಳನ್ನು ತೃಪ್ತರಾಗಿಸುವಷ್ಟು ಖಜಾನೆಯಲ್ಲಿ ಹಣದ ಪ್ರಮಾಣ ಹೊಂದಿಲ್ಲ. ಅವರಿಗೂ ನೀಡುವವನಾಗು ಎನ್ನುತ್ತಾರೆ. ಅಗಸ್ತ್ಯರು ಆ ಮೂಲಕ ಆ ಮೂವರು ರಾಜರುಗಳು ತಮ್ಮ ಪ್ರಜೆಗಳ ಅವಶ್ಯಕತೆಗಳನ್ನು ಸಮರ್ಪಕವಾಗಿ ಪೂರೈಸಲು ಅನುಕೂಲವಾಗುತ್ತದೆ ಎಂಬ ಉದ್ದೇಶವೂ ಈಡೇರಿ ದಂತಾಗುತ್ತದೆ ಎಂದು ಯೋಚಿಸಿ ಅದನ್ನು ಪ್ರಾಯೋಗಿಕಗೊಳಿಸುವ ಉದ್ದೇಶ ಹೊಂದಿರುತ್ತಾರೆ. ತಾನು ಕೊಡಲು ಬಯಸಿರುವ ಐಶ್ವರ್ಯ ವನ್ನು ಇಲ್ವಲನು ಅಗಸ್ತ್ಯರು ಮತ್ತು ರಾಜರುಗಳಿಗೆ ತನ್ನ ದೂತರ ಮೂಲಕ ತಂದೊಪ್ಪಿಸುತ್ತಾನೆ. ಇನ್ನು ಹೆಚ್ಚು ಕಾಲ ಅಗಸ್ತ್ಯರು ಅಲ್ಲಿದ್ದರೆ ತನ್ನ ಪ್ರಾಣಕ್ಕೂ ಕುತ್ತು ಬರಬಹುದು ಎಂದು ಭಯಗೊಂಡ ಇಲ್ವಲ ತನ್ನ ಬಳಿಯಿದ್ದ ಅಧಿಕ ಐಶ್ವರ್ಯವೆಲ್ಲವನ್ನೂ ಅವರಿಗೆ ಒಪ್ಪಿಸುತ್ತಾನೆ. ಮೂವರು ರಾಜರುಗಳಿಗೂ ತಲಾ ಹತ್ತು ಸಹಸ್ರ ಗೋವುಗಳನ್ನೂ ಮತ್ತು ತಲಾ ಹತ್ತು ಸಹಸ್ರ ಚಿನ್ನದ ನಾಣ್ಯಗಳನ್ನು ಒಪ್ಪಿಸುತ್ತಾನೆ. ತನ್ನ ಬಳಿಯಿದ್ದ ಸುವರ್ಣ ರಥವೊಂದಕ್ಕೆ ಅತಿ ವೇಗದ ಚಾಲನೆ ಹೊಂದಿದ್ದ ವಿರಾವ-ಸುರಾವ ಎಂಬ ಕುದುರೆಗಳನ್ನು ಕಟ್ಟಿಸುತ್ತಾನೆ. ಬಳಿಕ ರಾಜರಿಗೆ ನೀಡಿದ್ದಕ್ಕಿಂತ ದ್ವಿಗುಣ ಪ್ರಮಾಣದ ಸುವರ್ಣ ನಾಣ್ಯಗಳನ್ನು ಆ ರಥದಲ್ಲಿರಿಸಿ ತನ್ನ ದೂತರ ಮೂಲಕ ಅಗಸ್ತ್ಯರ ಆಶ್ರಮಕ್ಕೆ ತಕ್ಷಣ ಕಳುಹಿಸಿಕೊಡುತ್ತಾನೆ.

ಈ ಅತುಲೈಶ್ವರ್ಯವನ್ನು ಕಂಡು ಲೋಪಾಮುದ್ರೆಯು ಪತಿಯನ್ನು ಕುಳಿತು ಹೇಳಿದಳು” ಭಗವನ್ ನೀವು ನನ್ನ ಇಚ್ಛೆಯನ್ನು ಪೂರ್ಣವಾಗಿ ನೆರವೇರಿಸಿದಿರಿ. ನನ್ನಲ್ಲಿ ನೀವಿನ್ನು ಅನುರೂಪನಾದ ವೀರ್ಯವಂತನಾದ ಪುತ್ರನನ್ನು ಪಡೆಯಬಹುದು”. ಈ ಮೂಲಕ ಉತ್ತಮ ವಾತಾವರಣದಲ್ಲಿ ದೈವಿಕ ಸಮಾಗಮದ ಮೂಲಕ ಲೋಪಾಮುದ್ರೆಯು ತೇಜ:ಪುಂಜನಾದ ದೃಢಸ್ಯು ಎಂಬ ಪುತ್ರನನ್ನು ಪಡೆಯುತ್ತಾಳೆ. ಇದರೊಂದಿಗೆ ಅಗಸ್ತ್ಯರ ಪಿತೃಗಳು ಸದ್ಗತಿ ಪಡೆಯು ತ್ತಾರೆ. ದೃಢಸ್ಯು ಜನಿಸಿದಾಗಲೇ ಸಾಂಗೋಪಾಂಗವಾದ ವೇದಾಧ್ಯಯನದಲ್ಲಿ ನಿರತವಾಗಿರುವಂತೆ ಪ್ರಕಾಶಿಸುತ್ತಾನೆ. ಬೆಳೆಯುತ್ತಿ ದ್ದಂತೆ ಭಾರವಾದ ಸಮಿತ್ತಿನ ಹೊರೆಯನ್ನು ಹೊರುತ್ತ ಅಗಸ್ತ್ಯರ ತಪಸ್ಸಿಗೆ ನೆರವಾಗುತ್ತಾನೆ. ಇಧ್ಮಾನಾಂ ಭಾರಮಾಜಹ್ರೇ ಇಧ್ಮವಾಹಸ್ತತೋಭವೇತ್. ಅಂದರೆ ಆತನು ಭಾರವಾದ ಸಮಿತ್ತು ಹೊರುತ್ತಿದ್ದುದರಿಂದ ಅಗಸ್ತ್ಯ- ಲೋಪಾಮುದ್ರೆಯರು “ಇಧ್ಮವಾಹ” ಎಂಬ ಅನ್ವರ್ಥ ನಾಮದಿಂದಲೂ ಕರೆಯುತ್ತಾರೆ. ಮಹರ್ಷಿಗಳಾದ ಅಗಸ್ತ್ಯರಿಗೆ ಇಂತಹ ತೇಜ:ಪುಂಜನಾದ ಮಹಾ ಬಲಶಾಲಿಯಾದ ಪುತ್ರನನ್ನು ಕಂಡು ಅಮಿತಾನಂದವಾಯಿತು. ಈ ಪ್ರದೇಶ ಅಗಸ್ತ್ಯಾಶ್ರಮವೆಂದು ಪ್ರಸಿದ್ಧವಾಗಿದೆ ಎಂಬದಾಗಿ ಲೋಮಶ ಮಹರ್ಷಿಗಳು ಪಾಂಡವರಿಗೆ ಆ ಸ್ಥಳವನ್ನು ದರ್ಶನ ಮಾಡಿಸುತ್ತಾರೆ. ಅಗಸ್ತ್ಯ- ಲೋಪಾಮುದ್ರೆಯರ ಈ ಪುಣ್ಯ ಚರಿತ್ರೆಯನ್ನು ಆಲಿಸಿದ ಪಾಂಡವರು ಬಳಿಕ ಅಗಸ್ತ್ಯಾಶ್ರಮದ ಬಳಿ ಹರಿಯುತ್ತಿದ್ದ ಗಂಗಾನದಿಯಲ್ಲಿ ಮೀಯುತ್ತಾರೆ. ಅಗಸ್ತ್ಯಾಶ್ರಮದ ಕುರಿತು ಉದ್ಗ್ರಂಥ ಮಹಾಭಾರತದ ಕರ್ತೃ ವ್ಯಾಸರು ಹೀಗೆ ವರ್ಣಿಸುತ್ತಾರೆ:-“ದೇವ ಗಂಧರ್ವ ಸಹಿತವಾದ ಭಾಗೀರಥೀ ನದಿಯೂ ಅಗಸ್ತ್ಯಾಶ್ರಮದ ಬಳಿ ಹರಿಯುತ್ತಿದ್ದಾಳೆ. ಗಾಳಿಯಿಂದ ಹಾರಾಡುತ್ತಿರುವ ಧ್ವಜ ಪತಾಕೆಯೋಪಾದಿಯಲ್ಲಿ ಚಲಿಸುತ್ತಿದ್ದಾಳೆ. ಪರ್ವತಗಳ ನಡು ಭಾಗದಲ್ಲಿ ಪ್ರವಹಿಸುತ್ತ ಮತ್ರ್ಯ-ಪಾತಾಳ ಲೋಕಗಳಲ್ಲಿಯೂ ಸಾಗಿ ಪಾವನಗೊಳಿಸುತ್ತಿದ್ದಾಳೆ”. ಮಹಾಭಾರತ ಗ್ರಂಥದ ಅನ್ವಯ ಅಗಸ್ತ್ಯರು ಲೋಕಕಲ್ಯಾಣಕ್ಕೋಸ್ಕರ ಮುಂದೆ ಅವರು ಲೋಪಾಮುದ್ರೆ ಸಹಿತರಾಗಿ ಕೈಗೊಳ್ಳುವ ಜೈತ್ರಯಾತ್ರೆಯ ಮಹತ್ವದ ಕುರಿತಾಗಿ ಲೋಮಶ ಮಹರ್ಷಿಗಳು ತಮ್ಮೊಂದಿಗಿದ್ದ ಪಾಂಡವರ ತಿಳುವಳಿಕೆಗಾಗಿ ಚರಿತ್ರೆಯನ್ನು ಮುಂದುವರಿಸುತ್ತಾರೆ.