ಶಾಲಾ ವಿದ್ಯಾರ್ಥಿಗಳು ತಮ್ಮ ಹೆತ್ತವರ ಆರ್ಥಿಕ ಸಹಕಾರದ ಮೂಲಕ ಶಿಕ್ಷಕರೊಂದಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಆದರೆ ಹೆತ್ತವರನ್ನು ಕಳೆದುಕೊಂಡವರು ಮತ್ತು ಹೆತ್ತವರಿಂದ ದೂರವಾದ ಮಕ್ಕಳು ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದು ಮರೀಚಿಕೆಯಾಗಿದೆ. ಶಾಲಾ ಆಡಳಿತ ಮಂಡಳಿ ಕೂಡ ಈ ಬಗ್ಗೆ ಗಮನಹರಿಸುವುದು ಅಷ್ಟಕಷ್ಟೇ. ಆದರೆ ದಾನಿಯೊಬ್ಬರ ಆರ್ಥಿಕ ಸಹಕಾರದಿಂದ ಮಡಿಕೇರಿಯ ಸುಮಾರು 71 ಮಂದಿ ಬಾಲಮಂದಿರದ ವಿದ್ಯಾರ್ಥಿ ಗಳು ಅಪರೂಪದ ಮೈಸೂರು ಪ್ರವಾಸ ಕೈಗೊಂಡು ಹರ್ಷ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಮಡಿಕೇರಿ ನಗರದ ಬಾಲಕರ ಬಾಲ ಮಂದಿರ ಮತ್ತು ಬಾಲಕಿಯರ ಬಾಲಮಂದಿರದ 71 ಮಕ್ಕಳು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆಗೆ ಇತ್ತೀಚೆಗೆ ಮೈಸೂರು ಪ್ರವಾಸ ಕೈಗೊಂಡು ಹರ್ಷ ವ್ಯಕ್ತಪಡಿಸಿದರು.

ಮಕ್ಕಳ ಶೈಕ್ಷಣಿಕ ಪ್ರವಾಸದ ಸಂಪೂರ್ಣ ಆರ್ಥಿಕ ಸಹಕಾರ ನೀಡಿದವರು ಮಡಿಕೇರಿ ನಗರದ ದೇಚೂರು ನಿವಾಸಿ ಸೂದನ ಹೇಮಕುಮಾರ್-ಪ್ರಭಾ ದಂಪತಿಗಳು ಹಾಗೂ ಅವರ ಪುತ್ರ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಉದ್ಯೋಗ ದಲ್ಲಿರುವ ಸೂದನ ಭೀಷ್ಮ ಅವರ ಕುಟುಂಬ.

ಬಾಲಮಂದಿರದ ಮಕ್ಕಳು ಹಾಗೂ ಸಿಬ್ಬಂದಿಗಳು ಬೆಳಗಿನ ಜಾವ ಮಡಿಕೇರಿಯಿಂದ ಹೊರಟು ಚಾಮುಂಡಿ ಬೆಟ್ಟಕ್ಕೆ ತೆರಳಿದ ಬಳಿಕ ಝೂ, ಮೈಸೂರು ಅರಮನೆ, ಕೆ.ಆರ್.ಎಸ್‍ನಲ್ಲಿ ಬಣ್ಣ-ಬಣ್ಣದ ನೀರಿನ ನರ್ತನದೊಂದಿಗೆ ಆಟವಾಡಿ ಸೆಂಟ್ ಫಿಲೋಮಿನಾ ಚರ್ಚ್ ವೀಕ್ಷಿಸಿ ಮಕ್ಕಳು ಸಂಭ್ರಮಿಸಿದರು.

?ಚಂದ್ರ